ಗುರುವಾರ , ಜನವರಿ 23, 2020
28 °C
ಕಾಂಗ್ರೆಸ್‌ನೊಳಗಿನ ಗುಂಪುಗಾರಿಕೆ ಜಗಜ್ಜಾಹೀರುಗೊಳಿಸಿದ ಪ್ರತಿಭಟನೆ

ಅಡುಗೆ ಅನಿಲ ದರ ಏರಿಕೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅಡುಗೆ ಅನಿಲ ದರ ಏರಿಕೆ ಮಾಡಿರುವುದನ್ನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಎಐಸಿಸಿ ಸದಸ್ಯ ಹಾಗೂ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಾಕೀರ್ ಸನದಿ ನೇತೃತ್ವದಲ್ಲಿ ಭಾನುವಾರ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕುಳ್ಳುಗಳಿಂದ, ಟೀ ತಯಾರಿಸಿ ಹಂಚುವ ಮೂಲಕ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫಲಕಗಳನ್ನು ಪ್ರದರ್ಶಿಸಿದ ಕಾರ್ಯಕರ್ತರು, ಮೋದಿ ಹಾಗೂ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪಕ್ಷದ ಮುಖಂಡ ಐ.ಜಿ. ಸನದಿ, ‘ಬೇಟಿ ಬಚಾವ್, ಬೇಟಿ ಪಡಾವೊ ಎನ್ನುವ ಕೇಂದ್ರ ಸರ್ಕಾರ, ಅದೇ ಹೆಣ್ಣು ಮಕ್ಕಳು ಅಡುಗೆಗ ಬಳಸುವ ಅನಿಲ ದರವನ್ನು ಏರಿಕೆ ಮಾಡಿದೆ. ಕಳೆದ ಐದೂವರೆ ವರ್ಷದಲ್ಲಿ ಅನಿಲ ದರ ದ್ವಿಗುಣಗೊಂಡಿದ್ದರೂ, ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಒಂದೆಡೆ ಉಚಿತವಾಗಿ ಅಡುಗೆ ಅನಿಲ ವಿತರಿಸುವ ಸರ್ಕಾರ, ಮತ್ತೊಂದೆಡೆ ಬೆಲೆ ಏರಿಕೆ ಮಾಡುತ್ತಿದೆ. ಆ ಮೂಲಕ, ಇತ್ತ ಕೊಟ್ಟು ಮತ್ತೊಂದೆಡೆ ಕಿತ್ತುಕೊಳ್ಳುವ ಧೋರಣೆ ಅನುಸರಿಸುತ್ತಿದೆ. ಇನ್ನಾದರೂ, ಸರ್ಕಾರ ಅಡುಗೆ ಅನಿಲ ದರ ಇಳಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಎ.ಎಂ. ಹಿಂಡಸಗೇರಿ ಮಾತನಾಡಿ, ‘ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಜನರು ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಲೇ ಬಂದಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ₹80ರ ಗಡಿಗೆ ಬಂದು ನಿಂತಿವೆ. ಇದೀಗ ಮತ್ತೆ ಅಡುಗೆ ಅನಿಲ ಬೆಲೆ ಏರಿಸುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದ್ದಾರೆ’ ಎಂದು ಟೀಕಿಸಿದರು.

ಪಕ್ಷದ ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಇಲಿಯಾಸ್ ಮನಿಯರ್, ಬಾಬಾಜಾನ್ ಮುಧೋಳ, ಶಾರುಖ್ ಮುಲ್ಲಾ, ಮದನ ಕುಲಕರ್ಣಿ, ಪ್ರಕಾಶ್ ನಾಯಕ್, ಕಾಶಿ ವಿಶ್ವನಾಥ ರೆಡ್ಡಿ, ಇಮ್ರಾನ್ ಎಲಿಗಾರ್, ಬತೂಲ್, ನಜೀರ್ ಹೊನ್ನಿಹಾಳ, ಮಕ್ತುಂ ಎರಗಟ್ಟಿ, ವಾಹಬ್ ಮುಲ್ಲಾ, ವಿಜಯ್ ಗುಂಟ್ರಲ್, ಅಶ್ಫಾಕ್ ಗುಳೇದಗುಡ್, ಶರಣಪ್ಪ ಕೋಟಗಿ, ಗೌಸ್ ಖಾಜಿ ಮುಂತಾದವರು ಇದ್ದರು.

ಪಕ್ಷದ ಪ್ರತಿಭಟನೆಯಲ್ಲ: ಅಧ್ಯಕ್ಷರ ಸ್ಪಷ್ಟನೆ

‘ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶಾಕೀರ ಸನದಿ ಅವರು ವೈಯಕ್ತಿಕವಾಗಿ  ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಿಭಟನೆಗೆ ಕರೆ ಕೊಟ್ಟಿಲ್ಲ. ಈ ಬಗ್ಗೆ ನಾವು ಪ್ರಕಟಣೆಯನ್ನೂ ನೀಡಿಲ್ಲ’ ಎಂದು ಮಹಾನಗರ ಘಟಕದ ಅಧ್ಯಕ್ಷ ಅಲ್ತಾಫ ಹುಸೇನ ಹಳ್ಳೂರ ಮತ್ತು ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಜಂಟಿ ಹೇಳಿಕೆ ನೀಡಿದ್ದಾರೆ.

‘ಕಾಂಗ್ರೆಸ್‌ನಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಹಾಗಾಗಿ, ನಮ್ಮಿಂದ ಸ್ಪಷ್ಟನೆ ಬಯಸುತ್ತಿದ್ದಾರೆ. ಹಾಗಾಗಿ, ಇದು ಪಕ್ಷ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲ’ ಎಂದಿರುವ ಅವರು, ‘ಪ್ರತಿಭಟನೆಯ ವಿಷಯವನ್ನು ಶಾಕೀರ್ ಸನದಿ ಅವರು ನಮ್ಮ ಗಮನಕ್ಕೆ ತಂದಿಲ್ಲ’ ಎಂದು ತಿಳಿಸಿದ್ದಾರೆ.

ಅಧ್ಯಕ್ಷರ ಹೇಳಿಕೆ ನೋವು ತಂದಿದೆ: ಶಾಕೀರ್

‘ಪ್ರತಿಭಟನೆ ವಿಷಯಕ್ಕೆ ಸಂಬಂಧಿಸಿದಂತೆ ಮಹಾನಗರ ಕಾಂಗ್ರೆಸ್ ಮತ್ತು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು ನೀಡಿರುವ ಜಂಟಿ ಹೇಳಿಕೆ ತುಂಬಾ ನೋವು ತಂದಿದೆ. ಚುನಾವಣೆಯಲ್ಲಿ ನನಗೆ ಟಿಕೆಟ್ ಕೈ ತಪ್ಪಿದಾಗಲೂ ಇಷ್ಟೊಂದು ನೋವಾಗಿರಲಿಲ್ಲ’ ಎಂದು ಎಐಸಿಸಿ ಸದಸ್ಯ ಶಾಕೀರ್ ಸನದಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪತ್ರಿಕಾ ಹೇಳಿಕೆಯಲ್ಲಿ ಮಹಾನಗರ ಕಾಂಗ್ರೆಸ್ ಅಥವಾ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಎಂದು ನಾನೂ ಎಲ್ಲಿಯೂ ತಿಳಿಸಿಲ್ಲ. ಇಬ್ಬರೂ ಅಧ್ಯಕ್ಷರು ಜಂಟಿ ಹೇಳಿಕೆ ನೀಡುವುದಕ್ಕೆ ಮುಂಚೆ ನನ್ನ ಜತೆ ಮಾತನಾಡಬಹುದಿತ್ತು. ಆದರೆ, ಆ ರೀತಿ ಮಾಡದೆ ಹೇಳಿಕೆ ನೀಡಿದ್ದಾರೆ. ಅವರ ಈ ನಡೆಯ ಹಿಂದೆ ಬೇರೊಬ್ಬರು ಇದ್ದಾರೆ’ ಎಂದರು.

‘ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ನಾನು, ಪಕ್ಷದ ಉನ್ನತ ಸಮಿತಿಯಾದ ಎಐಸಿಸಿ ಸದಸ್ಯನಾಗಿದ್ದೇನೆ. ಹಾಗಾಗಿ, ನಾನು ಬೇರೊಬ್ಬರ ಅನುಮತಿ ಪಡೆದು ಪ್ರತಿಭಟನೆ ನಡೆಸಬೇಕಿಲ್ಲ. ಪಕ್ಷಕ್ಕೆ ಕೆಟ್ಟ ಹೆಸರು ಬಾರದಂತೆ, ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ ಎಂಬುದನ್ನು ಅವರಿಬ್ಬರೂ ಅರ್ಥ ಮಾಡಿಕೊಳ್ಳಬೇಕು’ ಎಂದು ತಿರುಗೇಟು ನೀಡಿದರು.

‘ಪಕ್ಷದಲ್ಲಿ ಅಲ್ತಾಫ್ ಮತ್ತು ಅನಿಲಕುಮಾರ ಸದ್ಯ ಹೊಂದಿರುವ ಸ್ಥಾನಮಾನದ ಹಿಂದೆ, ನನ್ನ ಕೊಡುಗೆ ಎಷ್ಟಿದೆ ಎಂಬುದನ್ನು ಅರಿತುಕೊಳ್ಳಬೇಕು. ಹಿಂದೆ ಟಿಕೆಟ್ ವಿಷಯಕ್ಕೆ ಸಂಬಂಧಿಸಿದಂತೆ, ನನಗೆ ಬೆಂಬಲ ವ್ಯಕ್ತಪಡಿಸಿದವರನ್ನು ಇವರಿಬ್ಬರೂ ಅಮಾನತು ಮಾಡಿಸಿದ್ದರು’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರತಿಭಟನೆಗೆ ಸಂಬಂಧಿಸಿದ ಬೆಳವಣಿಗೆ ಬಗ್ಗೆ ಅಲ್ತಾಫ್ ಹಳ್ಳೂರ ಅವರಿಗೆ ಕೋರಿ ಪತ್ರ ಬರೆದು ಸ್ಪಷ್ಟನೆ ಕೋರುತ್ತೇನೆ. ಬುದ್ಧಿ ಬಂದಾಗಿನಿಂದಲೂ ನಾನು ಕಾಂಗ್ರೆಸ್‌ನಲ್ಲಿದ್ದೇನೆ. ಪಕ್ಷ ಕಟ್ಟು ಶ್ರಮಿಸಿದ್ದೇನೆ. ನನ್ನ ಉಸಿರು ಇರುವವರೆಗೆ ಪಕ್ಷಕ್ಕಾಗಿ ದುಡಿಯುತ್ತೇನೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು