ಕುಸುಮಾವತಿ ಜಯಗಳಿಸಿದರೆ ಕುಂದಗೋಳ ಅಭಿವೃದ್ಧಿ: ಪುಷ್ಪಾ ಅಮರನಾಥ್‌

ಭಾನುವಾರ, ಮೇ 26, 2019
26 °C

ಕುಸುಮಾವತಿ ಜಯಗಳಿಸಿದರೆ ಕುಂದಗೋಳ ಅಭಿವೃದ್ಧಿ: ಪುಷ್ಪಾ ಅಮರನಾಥ್‌

Published:
Updated:
Prajavani

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಕುಸುಮಾವತಿ ಶಿವಳ್ಳಿ ಜಯಗಳಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಅಭಿಪ್ರಾಯಪಟ್ಟರು.

ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭೆಗೆ ನಡೆಯುತ್ತಿರುವ ಉಪಚುನಾವಣೆಯು ಅಂಕಿಸಂಖ್ಯೆ ಮೇಲೆ ನಡೆಯುತ್ತಿರುವ ರಾಜ್ಯ ಸಮ್ಮಿಶ್ರ ಸರ್ಕಾರದ ಪಾಲಿಗೂ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕುಂದಗೋಳ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ಈ ಚುನಾವಣೆಯಲ್ಲಿ ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದೆ. ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿರುವ ಮಹಿಳೆಯೊಬ್ಬರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಕ್ಷೇತ್ರದ ಹಳ್ಳಿ, ಹಳ್ಳಿಗಳಲ್ಲಿ ದಿ.ಸಿ.ಎಸ್‌.ಶಿವಳ್ಳಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಎದ್ದು ಕಾಣುತ್ತಿವೆ. ಜೊತೆಗೆ  ಜನರೊಂದಿಗಿನ ಅವರ ಒಡನಾಟ, ಆತ್ಮೀಯತೆ ಹಾಗೂ ಅವರ ನಿಧನದಿಂದ ಕ್ಷೇತ್ರದಲ್ಲಿ ಅನುಕಂಪದ ಅಲೆ ಇರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜನದ್ರೋಹಿ ಪಕ್ಷ:

ಬಿಜೆಪಿ ಎಂದರೆ ಭಾರತೀಯ ಜನತಾ ಪಕ್ಷವಲ್ಲ, ಜನ ದ್ರೋಹಿ ಪಕ್ಷ ಎಂದು ಟೀಕಿಸಿದ ಅವರು, 2014ರಲ್ಲಿ ನೀಡಿದ್ದ ಯಾವೊಂದು ಭರವಸೆಯನ್ನು ಐದು ವರ್ಷಗಳ ಆಡಳಿತದಲ್ಲಿ ಈಡೇರಿಸಿಲ್ಲ. ಬಡವರು, ರೈತರು, ಮಹಿಳೆಯರು, ಯುವ ಜನರು, ದಲಿತರು, ಅಲ್ಪಸಂಖ್ಯಾತರ ವಿರೋಧಿ ಕೆಲಸವನ್ನು ಮಾತ್ರ ಮಾಡಿದೆ ಎಂದು ಆರೋಪಿಸಿದರು.

ಕರ್ನಾಟಕಕ್ಕೆ ಮೋದಿ ಸರ್ಕಾರದ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ರಾಜ್ಯಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ ಎಂದು ಟೀಕಿಸಿದರು.

ಬಿಜೆಪಿ ನಾಯಕಿಯರು ಸ್ಟೌ ಹಚ್ಚುವುದಿಲ್ಲವೇ?:

ಯು‍ಪಿಎ ಅವಧಿಯಲ್ಲಿ ಅಡುಗೆ ಅನಿಲದ ಬೆಲೆ ₹ 400 ಆದ ಸಂದರ್ಭದಲ್ಲಿ ಬೆಲೆ ಏರಿಕೆಯಾಗಿದೆ ಎಂದು ಹಾದಿ, ಬೀದಿಯಲ್ಲಿ ಕುಳಿತು ಬಾಯಿ ಬಡಿದುಕೊಂಡಿದ್ದ ಬಿಜೆಪಿ ನಾಯಕಿಯರಾದ ನಿರ್ಮಲಾ ಸೀತಾರಾಮನ್‌, ಶೋಭಾ ಕರಂದ್ಲಾಜೆ ಅವರು ಇದೀಗ ಅಡುಗೆ ಅನಿಲದ ಬೆಲೆ ₹ 900 ತಲುಪಿದ್ದರೂ ಮೌನವಾಗಿರುವುದು ಏಕೇ? ಅವರು ಮನೆಯಲ್ಲಿ ಗ್ಯಾಸ್‌ ಸ್ಟೌ ಹಚ್ಚಿ ಅಡುಗೆ ಮಾಡುವುದಿಲ್ಲವೇ ಎಂದು ಪುಷ್ಪಾ ಪ್ರಶ್ನಿಸಿದರು.

ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ತಾರಾದೇವಿ ವಾಲಿ, ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷೆ ಶಾಂತವ್ವ ಗುಜ್ಜಳ, ಕುಂದಗೋಳ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಧೃತಿ ಸಾಲ್ಮನಿ, ಮುಖಂಡರಾದ ಸುನೀತಾ ಹರಕಡ್ಲಿ, ದೀಪಾ ಗೌರಿ, ಪುಷ್ಪಾಂಜಲಿ ಅರಳಿಕಟ್ಟಿ, ರಾಜೇಶ್ವರಿ ಬಿಲಾನ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !