ಶನಿವಾರ, ಫೆಬ್ರವರಿ 27, 2021
31 °C

ಧಾರವಾಡ ಘರಾಣೆಯ ಸಂಸ್ಥಾಪಕ ರಹಿಮತ ಖಾನ್ ಸಂಗೀತೋತ್ಸವ ಡಿ.8ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಧಾರವಾಡ ಘರಾಣೆಯ ಸಂಸ್ಥಾಪಕ ಸಿತಾರ್ ರತ್ನ ರಹಿಮತ್ ಖಾನ್‌ರ 64 ನೇ ಪುಣ್ಯತಿಥಿ ಅಂಗವಾಗಿ ಧಾರವಾಡದ ಸಿತಾರ್ ರತ್ನ ಸಮಿತಿಯು ಸೃಜನಾ ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರದಲ್ಲಿ  ಡಿಸೆಂಬರ್ 8 ಹಾಗೂ 9 ರಂದು ಆಯೋಜಿಸಿರುವ ಎರಡು ದಿನಗಳ ಸಂಗೀತೋತ್ಸವದಲ್ಲಿ ದೇಶದ ಖ್ಯಾತ ಕಲಾವಿದರಿಂದ ಗಾಯನ-ವಾದನಗಳ ನಿನಾದ ಹರಿದುಬರಲಿದೆ.

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಂಡಿಯನ್ ಆಯಿಲ್ ಕಾರ್ಪೋರೇಶನ್, ನವದೆಹಲಿಯ ಸಂಗೀತ ನಾಟಕ ಅಕಾಡೆಮಿ, ಧಾರವಾಡದ ಭಾರತೀಯ ಸಂಗೀತ ವಿದ್ಯಾಲಯ, ಧಾರವಾಡದ ಸಂಸದ ಪ್ರಹ್ಲಾದ ಜೋಶಿ ಹಾಗೂ ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರ ಪ್ರತಿಷ್ಠಾನ ಅವರ ಸಹಪ್ರಾಯೋಜಕತ್ವದಲ್ಲಿ ನಡೆಯಲಿದೆ. ಈ ಸಂಗೀತೋತ್ಸವವನ್ನು  ಸಂಗೀತ ವಿದುಷಿ ಅನ್ನಪೂರ್ಣಾ ದೇವಿ, ವಯೋಲಿನ್ ಮಾಂತ್ರಿಕ ಪಂ. ಡಿ.ಕೆ. ದಾತಾರ, ಹಾರ್ಮೋನಿಯಂ ದಿಗ್ಗಜ ಪಂ. ತುಳಸಿದಾಸ ಬೋರಕರ ಮತ್ತು ಸಿತಾರ ವಾದಕ ಉ. ಇಮ್ರತ್ ಖಾನ್ ಅವರಿಗೆ ಸಮರ್ಪಿಸಲಿದೆ.

ಶನಿವಾರದಂದು ಸಂಜೆ 5.30ಕ್ಕೆ  ಪ್ರಾರಂಭಗೊಳ್ಳುವ ಕಾರ್ಯಕ್ರಮದಲ್ಲಿ ಕೋಲ್ಕತ್ತಾದ ಪಂ.ಸುದೀಪ ಚಟ್ಟೋಪಾಧ್ಯಾಯ ಅವರ ಬಾನ್ಸರಿ ಕಲರವ ರಿಂಗಣಿಸಲಿದ್ದು, ನಂತರ ಪುಣೆಯ ಗಾಯಕಿ ಅಪರ್ಣಾ ಗುರವ ಅವರಿಂದ ಗಾನಸುಧೆ ಹರಿದುಬರಲಿದೆ.

ಪಂ.ಸುದೀಪ ಚಟ್ಟೋಪಾಧ್ಯಾಯ

ಕೋಲ್ಕತ್ತೆಯ ಪಂ. ಸುದೀಪ ಚಟ್ಟೋಪಾಧ್ಯಾಯ ಅವರು ದೇಶದ ಪ್ರಬುದ್ಧ ಬಾನ್ಸುರಿ ವಾದಕರು. 1966ರಲ್ಲಿ ಜನಿಸಿದ ಇವರಿಗೆ ಬಾಲ್ಯದಿಂದಲೇ ಕೊಳಲುವಾದನದತ್ತ ಅತೀವ ಆಸಕ್ತಿ. ಅದರಂತೆ ಅವರು ಹಿರಿಯ ಕಲಾವಿದರಾದ ಪಂ. ದೇಬಪ್ರಸಾದ ಬ್ಯಾನರ್ಜಿ ಅವರಲ್ಲಿ ಆಳವಾದ ಬಾನ್ಸುರಿಯ ಅಭ್ಯಾಸ ಮಾಡಿದರು. ಬಾನ್ಸುರಿ ಮಾಂತ್ರಿಕ ಪನ್ನಾಲಾಲ್ ಘೋಷ್ ಅವರ ಕೊಳಲು ವಾದನದ ಶೈಲಿಗೆ ಮಾರುಹೋದ ಸುದೀಪ ಚಟ್ಟೋಪಾಧ್ಯಾಯ ಅವರು ಘೋಷರ ಶೈಲಿಯನ್ನೇ ಅಳವಡಿಸಿ
ಕೊಂಡು ಭರವಸೆಯ ಕೊಳಲು ವಾದಕರಾಗಿ ಹೊರಹೊಮ್ಮಿದರು.

ಕೋಲ್ಕತ್ತಾದ ರವೀಂದ್ರ ಭಾರತಿ ವಿಶ್ವ ವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸುದೀಪ ಅವರು ಅದೇ ವಿಶ್ವವಿದ್ಯಾಲಯದಲ್ಲಿ 2002ರಿಂದ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಆಕಾಶವಾಣಿಯ ಉಚ್ಚ ಶ್ರೇಣಿಯ ಕಲಾವಿದರಾಗಿ
ರುವ ಸುದೀಪ ದೇಶದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲದೇ ನೆದರಲ್ಯಾಂಡ್, ಬೆಲ್ಜಿಯಂ, ಜರ್ಮನಿ, ಸ್ವಿಝರ್‌ಲ್ಯಾಂಡ್, ಫ್ರಾನ್ಸ್‌ಗಳಲ್ಲಿಯೂ ಕೂಡ ತಮ್ಮ ಕೊಳಲಿನ ಕಲರವವನ್ನು ಹರಿಸಿದ್ದಾರೆ.

ಅಪರ್ಣಾ ಗುರವ, ಪುಣೆ (ಗಾಯನ)

ಸುಮಧುರ ಕಂಠದ ಪುಣೆಯ ಅಪರ್ಣಾ ಗುರವ ಗ್ವಾಲಿಯರ್ ಘರಾಣೆಯ ವಿದ್ವತ್‌ಪೂರ್ಣ ಗಾಯಕಿ. ಇವರಿಗೆ ಬಾಲ್ಯದಿಂದಲೇ ಸಂಗೀತದತ್ತ ಒಲವು ಮೂಡಿತು. ತಾಯಿ-ತಂದೆ ಸಂಗೀತಪ್ರೇಮಿಗಳು. ಮನೆಗೆ ಕಲಾವಿದರ ಹರಿದಾಟ ಹೆಚ್ಚಾಗಿ ಸಂಗೀತಮಯ ವಾತಾವರಣ ನಿರ್ಮಾಣಗೊಂಡಿತ್ತು. ಹೀಗಾಗಿ ಇವರಿಗೆ ಕೂಡ ಗಾಯನದಲ್ಲಿ ಆಸಕ್ತಿ ಮೂಡಿತು. ಸಂಗೀತ ಕಲಿಯಲು ನಿಶ್ಚಯಿಸಿದ ಅಪರ್ಣಾ ಅವರಿಗೆ ಡಾ. ಸುಧಾ ಪಟವರ್ಧನ ಅವರಿಂದ 15 ವರ್ಷಗಳ ಆಳವಾದ ಮಾರ್ಗದರ್ಶನ ದೊರೆತು ಭರವಸೆಯ ಗಾಯಕಿಯಾಗಿ ರೂಪುಗೊಂಡರು.

ಮುಂಬೈನ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತ ಅಲಂಕಾರ ಪದವಿ ಪಡೆದುಕೊಂಡರು. ನಂತರದ ದಿನಗಳಲ್ಲಿ ವಿದುಷಿ ವೀಣಾ ಸಹಸ್ರಬುದ್ಧೆ ಅವರಲ್ಲಿ ಗಾಯನದ ಸೂಕ್ಷ್ಮ ವೈವಿಧ್ಯತೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅಪರ್ಣಾ, ಡಾ. ವಿಕಾಸ ಕಶಾಳಕರ ಅವರಲ್ಲಿಯೂ ಕೂಡ ಗ್ವಾಲಿಯರ್ ಘರಾಣೆಯ ಕುರಿತಾಗಿ ಅಭ್ಯಸಿಸಿದರು. ಗಂಧರ್ವ ಮಹಾವಿದ್ಯಾಲಯದಿಂದ ಪಂ. ರಾಮಕೃಷ್ಣಬುವಾ ವಝೆ ಪುರಸ್ಕಾರ, ಸುರಶ್ರೀ ಕೇಸರಬಾಯಿ ಕೇರಕರ ಶಿಷ್ಯವೇತನ ಪಡೆದ ಇವರು ಆಸ್ಟ್ರೇಲಿಯಾ, ಹಾಂಕಾಂಗ್, ಸಿಂಗಾಪುರ, ಅಮೆರಿಕ, ಕೆನಡಾಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಡಿ. 9 ಭಾನುವಾರದಂದು ಬೆಳಿಗ್ಗೆ 9.30ಕ್ಕೆ ಆರಂಭಗೊಳ್ಳುವ ಸಂಗೀತ ಕಾರ್ಯಕ್ರಮದಲ್ಲಿ ಬೆಳಗಿನ ಹಾಗೂ ಮಧ್ಯಾಹ್ನದ ರಾಗಗಳನ್ನು ಆಲಿಸುವ ಸದವಕಾಶ ಸಂಗೀತರಸಿಕರಿಗೆ ಒದಗಿಬರಲಿದೆ. ಧಾರವಾಡದ ಪಂ. ಸದಾಶಿವ ಐಹೊಳೆ ಹಾಗೂ ಪುಣೆಯ ಪಂ. ವಿಜಯ ಕೋಪರಕರ ಅವರಿಂದ ಗಾನಲಹರಿ ಹೊರಹೊಮ್ಮಲಿದೆ.

ಪಂ. ಸದಾಶಿವ ಐಹೊಳೆ, ಧಾರವಾಡ

ಮೂಲತಃ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನವರಾದ ಸದಾಶಿವ ಐಹೊಳೆ ಅವರು ಗ್ವಾಲಿಯರ್ ಘರಾಣೆಯ ಗಾಯಕರು. ಸದಾಶಿವ ಐಹೊಳೆ ಅವರು ತಮ್ಮ ಪಂ. ಅರ್ಜುನಸಾ ನಾಕೋಡ ಹಾಗೂ ಪಂ. ಬಾಲಚಂದ್ರ ನಾಕೋಡ ಅವರಲ್ಲಿ ಆಳವಾದ ಅಧ್ಯಯನಗೈದರು. ಜಲಗಾಂವ್, ಗೋವಾದ ಆಕಾಶವಾಣಿ ಕೇಂದ್ರಗಳ ನಿಲಯ ಕಲಾವಿದರಾಗಿ ಸೇವೆ ಸಲ್ಲಿಸಿರುವ ಪಂ. ಐಹೊಳೆಯವರು ಪ್ರಸ್ತುತವಾಗಿ ಧಾರವಾಡ ಆಕಾಶವಾಣಿ ನಿಲಯ ಕಲಾವಿದರಾಗಿದ್ದಾರೆ.

ಕಲಾವಿಕಾಸ ರತ್ನ, ಸುವರ್ಣ ಕರ್ನಾಟಕ ರತ್ನ ಹೀಗೆ ವಿವಿಧ ಸನ್ಮಾನಗಳಿಗೆ ಭಾಜನರಾಗಿರುವ ಪಂ. ಐಹೊಳೆಯವರು ಬೆಂಗಳೂರು, ಮಂಗಳೂರು, ಪುಣೆ, ಗೋವಾ, ನಾಸಿಕ ಹೀಗೆ ದೇಶದ ವಿವಿಧೆಡೆಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿದ್ದಾರೆ.

ಪಂ.ವಿಜಯ ಕೋಪರಕರ, ಪುಣೆ

1972 ರಲ್ಲಿ ಜನಿಸಿದ ಪಂ. ವಿಜಯ ಕೋಪರಕರ ಅವರ ಹುಟ್ಟೂರು ಸಾಂಸ್ಕೃತಿಕ ನಗರಿ ಪುಣೆ. ವಿಜಯ ಅವರಿಗೆ ಬಾಲ್ಯದಿಂದಲೇ ಸಂಗೀತದತ್ತ ಅಭಿರುಚಿ ಉಂಟಾಯಿತು. ಗ್ವಾಲಿಯರ್ ಘರಾಣೆಯ ಡಾ. ಮಧುಸೂದನ ಪಟವರ್ಧನ ಅವರು ಸಂಗೀತ ಕಲಿಕೆಯ ಶ್ರೀಕಾರ ಹಾಕಿದಾಗ ವಿಜಯ ಅವರಿಗೆ ಎಂಟರ ಹರೆಯ. ನಂತರ ಐದು  ವರ್ಷಗಳಲ್ಲಿ ಪಟಿಯಾಲಾ, ಭೆಂಡಿ ಬಜಾರ್ ಹಾಗೂ ಕಿರಾನಾ ಘರಾಣೆಗಳ ಸಂಗಮ ಪಂ ವಸಂತರಾವ್ ದೇಶಪಾಂಡೆ ಅವರಲ್ಲಿ ಸಂಗೀತಾಧ್ಯಯನಗೈದರು. ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಜೈಪುರ ಹಾಗೂ ಆಗ್ರಾ ಘರಾಣೆಯ ಪಂ. ಜಿತೇಂದ್ರ ಅಭಿಷೇಕಿ ಅವರಲ್ಲಿ ಆಳವಾದ ಮಾರ್ಗದರ್ಶನ ಪಡೆದು ವೈವಿಧ್ಯಮಯ ಘರಾಣೆಗಳ ವಿದ್ವತ್‌ಪೂರ್ಣ ಗಾಯಕರಾಗಿ ಹೊರಹೊಮ್ಮಿದರು.

ಸಂಜೆ 5.30ಕ್ಕೆ ಪುಣೆಯ ಶಾಕಿರ್ ಖಾನ್ ಹಾಗೂ ಧಾರವಾಡದ ಮೊಹಸಿನ್ ಖಾನ್ ಅವರಿಂದ ದ್ವಂದ್ವ ಸಿತಾರ್ ವಾದನದ ನಿನಾದ ಝೇಂಕರಿಸಲಿದೆ. ನಂತರ ಪುಣೆಯ ಪಂ. ಕೇದಾರ ಬೋಡಸ್ ಅವರಿಂದ ಮೂಡಿಬರುವ ಗಾನಸುಧೆಯೊಂದಿಗೆ ಸಂಗೀತೋತ್ಸವಕ್ಕೆ ತೆರೆ ಬೀಳಲಿದೆ.

ಮೊಹಸಿನ ಮತ್ತು ಶಾಕೀರ ಖಾನ್

ಮೊಹಸಿನ ಖಾನ್ : ಧಾರವಾಡದಲ್ಲಿ ಜನಿಸಿದ ಮೊಹಸಿನ ಖಾನ್ ಅವರದು ಪಾರಂಪರಿಕ ಸಿತಾರ ವಾದಕರ ಮನೆತನ. ಸಿತಾರ ರತ್ನ ರಹಿಮತ್ ಖಾನರ ಮರಿಮೊಮ್ಮಗ. ಇಂದೋರ್‌ನ ಬೀನಕಾರ ಘರಾಣೆಯ 7ನೇ ತಲೆಮಾರಿನ ಸಿತಾರ ವಾದಕ. ಅಜ್ಜ ಪ್ರೊ. ಅಬ್ದುಲ್ ಕರೀಮ್ ಖಾನರಲ್ಲಿ ತಮ್ಮ ೫ನೇ ವಯಸ್ಸಿನಿಂದಲೇ ಸಿತಾರ ವಾದನದ ಕಲಿಕೆ ಪ್ರಾರಂಭ. ನಂತರ ತಂದೆ ಡಾ. ಹಮೀದ ಖಾನ್ ಅವರಲ್ಲಿ ಆಳವಾದ ಮಾರ್ಗದರ್ಶನ ಪಡೆದು ಉದಯೋನ್ಮುಖ ಸಿತಾರ ವಾದಕರಾಗಿ ಹೊರಹೊಮ್ಮಿದರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೊಡಮಾಡುವ ಅನೇಕ ಶಿಷ್ಯವೇತನಗಳಿಗೆ ಪಾತ್ರರಾಗಿರುವ ಮೊಹಸಿನ, ನಾದಕಿಶೋರ, ಕಲಾಕಿರಣ, ಸಂಸ್ಕೃತಿ ಪೋಷಕ ಪ್ರಶಸ್ತಿಗಳಿಗಾಗಿ ಭಾಜರಾಗಿರುವ ಮೊಹಸಿನ್ ಖಾನ ಅವರು ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೋಲ್ಕತಾ, ರಾಜಸ್ಥಾನ, ನವದೆಹಲಿ ಅಲ್ಲದೇ ಜರ್ಮನಿ, ರಷ್ಯಾ, ಫ್ರಾನ್ಸ್, ನೇಪಾಳ ಹಾಗೂ ದಕ್ಷಿಣ ಕೋರಿಯಾಗಳಲ್ಲಿ ಸಿತಾರ ವಾದನವನ್ನು ಪ್ರಸ್ತುತಪಡಿಸಿ ಸೈ ಎನಿಸಿಕೊಂಡಿದ್ದಾರೆ.

ಶಾಕೀರ ಖಾನ್ : ಪ್ರತಿಷ್ಠಿತ ಇಟಾವಾ ಘರಾಣೆಯ ಅತ್ಯಂತ ಭರವಸೆಯ ಯುವ ಸಿತಾರ ವಾದಕ ಪುಣೆಯ ಶಾಕೀರ ಖಾನ್. ತಂದೆ ದೇಶದ ಖ್ಯಾತ ಸಿತಾರ ವಾದಕ ಉ. ಶಾಹೀದ ಪರ್ವೇಜ಼್ ಅವರು. ಗುರು-ಶಿಷ್ಯ ಪರಂಪರೆಯಲ್ಲಿ ಸಿತಾರ ವಾದನದ ಕಲಿಕೆಯನ್ನು ಆರಂಭಿಸಿದ ಶಾಕೀರ ಖಾನ್, ಅತ್ಯಂತ ಕಡಿಮೆ ಸಮಯದಲ್ಲಿ ಯುವ ಸಿತಾರ ವಾದಕರಾಗಿ ಹೊರಹೊಮ್ಮಿದರು. ಕೇದಾರ ಬೋಡಸ, ಪುಣೆ (ಗಾಯನ)

ಸಂಗೀತೋಪಾಸಕರ ಮನೆತನದಲ್ಲಿ ಜನಿಸಿದ ಕೇದಾರ ಬೋಡಸ ಅವರಿಗೆ ಸಜಹವಾಗಿ ಬಾಲ್ಯದಿಂದಲೇ ಸಂಗೀತದತ್ತ ಒಲವು. ಅವರ ಅಜ್ಜ ಗ್ವಾಲಿಯರ್ ಘರಾಣೆಯ ಲಕ್ಷ್ಮಣರಾವ್ ಬೋಡಸ ಅವರು ಸಪ್ತಸ್ವರಗಳ ಶ್ರೀಕಾರ ಹಾಕಿದಾಗ ಕೇದಾರನಿಗೆ ಎಂಟರ ಪ್ರಾಯ. ತಂದೆ ನಾರಾಯಣ ಬೋಡಸ ಅವರು ಗ್ವಾಲಿಯರ್ ಹಾಗೂ ಆಗ್ರಾ ಘರಾಣೆಗಳ ಶೈಲಿಯ ಗಾಯಕರು ಮತ್ತು ಮರಾಠಿ ರಂಗಮಂಚ ಕಲಾವಿದರು ಕೂಡ. ಕೇದಾರ ಬೋಡಸ್ ಮುಂಬೈ, ಭೋಪಾಲ, ಕುಂದಗೋಳ, ಇಚಲಕರಂಜಿ, ಪುಣೆ, ಚೆಂಬೂರು, ಗೋವಾ, ಕೋಲ್ಕತಾ ಹೀಗೆ ದೇಶದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.

ಕೋಲ್ಕತ್ತಾದ ಹಿಂಡೋಲ್ ಮುಜುಮದಾರ್, ಪುಣೆಯ ಮಿಲಿಂದ ಗುರವ, ಬೆಂಗಳೂರಿನ ರಾಜೇಂದ್ರ ನಾಕೋಡ, ಧಾರವಾಡದ ನಿಸ್ಸಾರ್ ಅಹ್ಮದ, ಶ್ರೀಧರ ಮಾಂಡ್ರೆ ಅವರು ತಬಲಾ ಸಾಥ್ ನೀಡಲಿದ್ದು, ಬೆಂಗಳೂರಿನ ಸತೀಶ ಕೊಳ್ಳಿ ಹಾಗೂ ಧಾರವಾಡದ ಗುರುಪ್ರಸಾದ ಹೆಗಡೆ ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ.

ರವೀಂದ್ರ ಕವಠೇಕರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.