ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಮಂದಗತಿಯಲ್ಲಿ ಸಾಗಿರುವ ಭೂಸ್ವಾಧೀನ ಕಾರ್ಯ

ಧಾರವಾಡ–ಬೆಳಗಾವಿ ಮಾರ್ಗ: ಬಳಕೆಯಾಗದ ₹25 ಕೋಟಿ ಅನುದಾನ
Last Updated 12 ಫೆಬ್ರುವರಿ 2022, 8:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಿತ್ತೂರು ಮಾರ್ಗವಾಗಿ ಧಾರವಾಡ–ಬೆಳಗಾವಿ ರೈಲು ಮಾರ್ಗ ನಿರ್ಮಾಣದ ಕನಸನ್ನು ಜನರು ಕಾಣುತ್ತಿದ್ದಾರೆ. ಎರಡು ವರ್ಷಗಳ ಹಿಂದೆಯೇ ಯೋಜನೆ ಘೋಷಣೆಯಾಗಿದ್ದರೂ, ಇನ್ನೂ ಕಾಮಗಾರಿ ಆರಂಭವಾಗಿಲ್ಲ.

2021–2022ರ ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ಈ ಯೋಜನೆಗೆ ₹50 ಕೋಟಿ ಮೀಸಲಾಗಿಡಲಾಗಿತ್ತು. ಆದರೆ, ರೈಲು ಮಾರ್ಗ ನಿರ್ಮಾಣಕ್ಕೆ ಬೇಕಾದ ಭೂಮಿ ನೀಡದ್ದರಿಂದಾಗಿ ಅನುದಾನ ಖರ್ಚಾಗಿಲ್ಲ. ಆ ಹಿನ್ನೆಲೆಯಲ್ಲಿ ಈ ಬಾರಿ ಕೇವಲ ₹20 ಕೋಟಿ ನೀಡಲಾಗಿದೆ. ಮಾರ್ಗ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ರೈಲ್ವೆ ಇಲಾಖೆಗೆ ರಾಜ್ಯ ಸರ್ಕಾರ ಹಸ್ತಾಂತರಿಸಿದರೆ, ಕಾಮಗಾರಿ ಆರಂಭಿಸಲು ರೈಲ್ವೆ ಇಲಾಖೆ ಸಜ್ಜಾಗಿದೆ.

ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗಿ ರೈಲ್ವೆ ಮಾರ್ಗಗಳಿಗೆ ಬೇಕಾಗುವ ಭೂಮಿಯನ್ನು ಒದಗಿಸುವ ಹೊಣೆಯನ್ನು ರಾಜ್ಯ ಸರ್ಕಾರ ಹೊತ್ತುಕೊಂಡಿದೆ.‘ಧಾರವಾಡ–ಬೆಳಗಾವಿ ಮಾರ್ಗಕ್ಕೆ ಒಟ್ಟು 827 ಎಕರೆ ಭೂಮಿ ಅಗತ್ಯವಿದ್ದು, ಧಾರವಾಡ ಜಿಲ್ಲೆಯಲ್ಲಿ 225 ಮತ್ತು ಬೆಳಗಾವಿ ಜಿಲ್ಲೆಯಲ್ಲಿ 602 ಎಕರೆ ಭೂಮಿ ಬೇಕಾಗಿದೆ

ಮಂದಗತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ: ಎರಡು ವರ್ಷಗಳ ನಂತರ ಕೊನಗೂ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವುದು ಸಮಾಧಾನಕರ ಸಂಗತಿ. ಆದರೆ, ಮಂದಗತಿಯಲ್ಲಿ ಸಾಗಿದೆ.

ಭೂಸ್ವಾಧೀನ ಕಾರ್ಯವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ವಹಿಸಲಾಗಿದೆ. ಈಗಾಗಲೇ ಭೂಸ್ವಾಧೀನ ಕಾರ್ಯ ಶುರುವಾಗಿದ್ದು, 8 ಕಿ.ಮೀ. ನಷ್ಟು ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿದೆ ಎನ್ನುತ್ತಾರೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ.

‘ರಾಜ್ಯ ಸರ್ಕಾರ ಭೂಸ್ವಾಧೀನ ಹಾಗೂ ರೈಲ್ವೆ ಮಾರ್ಗಕ್ಕಾಗಿ ₹600 ಕೋಟಿ ಬಿಡುಗಡೆ ಮಾಡಿದೆ. ಭೂಸ್ವಾಧೀನ ಪ್ರಕ್ರಿಯೆ ತೀವ್ರಗೊಳಿಸಲಾಗುವುದು’ ಎಂದರು.

‘ಬೆಳಗಾವಿ ಜಿಲ್ಲೆಯಲ್ಲಿಯೂ ಭೂಸ್ವಾಧೀನ ಪ್ರಕ್ರಿಯೆ ಆರಂಭಿಕ ಕಾರ್ಯಗಳು ಶುರುವಾಗಿವೆ. ಬೆಳಗಾವಿ ಹಾಗೂ ಬೈಲಹೊಂಗಲ ಉಪವಿಭಾಗಾಧಿಕಾರಿಗಳಿಗೆ ರೈಲು ಮಾರ್ಗ ಹೋಗುವಲ್ಲಿ ಭೂಮಿಯ ಬೆಲೆ ಏನಿದೆ ಎಂದು ಸರ್ವೆ ಮಾಡಲು ಸೂಚಿಸಿದ್ದೇನೆ’ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ಯೋಜನಾ ವೆಚ್ಚ ಹೆಚ್ಚಾಗುವ ಆತಂಕ: ಧಾರವಾಡ–ಬೆಳಗಾವಿ ರೈಲು ಮಾರ್ಗಕ್ಕೆ ₹927 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದೇ ಮೊತ್ತಕ್ಕೆ ಕೇಂದ್ರವೂ ಅನುಮೋದನೆ ನೀಡಿದೆ. ಆದರೆ, ಕಾಮಗಾರಿ ಆರಂಭ ವಿಳಂಬವಾಗುತ್ತಾ ಸಾಗಿದರೆ, ಯೋಜನಾ ವೆಚ್ಚದಲ್ಲೂ ಹೆಚ್ಚಳವಾಗಲಿದೆ.

ಈ ಯೋಜನೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಕನಸಿನ ಕೂಸಾಗಿತ್ತು. ಅವರು, ಮೃತಪಟ್ಟ ನಂತರ ಯೋಜನೆಯ ವೇಗ ತಗ್ಗಿದೆ ಎಂಬುದು ಸಾರ್ವಜನಿಕರ ಆರೋಪ. ಆದಷ್ಟು ಬೇಗ ರೈಲು ಸಂಚರಿಸುವಂತಾಗಲಿ ಎಂಬುದು ಬೆಳಗಾವಿ, ಹುಬ್ಬಳ್ಳಿ–ಧಾರವಾಡ ಜನರ ಆಶಯ.

**

ಭೂಮಿಗೆ ದರ ನಿಗದಿ ಕೆಲಸ ನಡೆದಿದೆ. ಅದು ಪೂರ್ಣಗೊಂಡ ಕೂಡಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು.
-ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT