ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ |ಜೋರು ಮಳೆ: ವಾಹನ ಸಂಚಾರ ಅಸ್ತವ್ಯಸ್ತ

ರಸ್ತೆ ಮೇಲೆ ನೀರು; ಹಿಂಗಾರು ಬಿತ್ತನೆಗೆ ಅಣಿಯಾದ ಕೃಷಿಕರು
Published 6 ನವೆಂಬರ್ 2023, 15:34 IST
Last Updated 6 ನವೆಂಬರ್ 2023, 15:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸೋಮವಾರ ಜೋರು ಮಳೆಯಾಗಿದೆ. ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿತ್ತು.

ಮಧ್ಯಾಹ್ನ 3ರ ವೇಳೆ ಗುಡುಗು ಸಹಿತ ಆರಂಭವಾದ ಮಳೆ ಸಂಜೆವರೆಗೂ ಸುರಿಯಿತು. ನಗರ ಪ್ರದೇಶದಲ್ಲಿ ಒಂದು ತಾಸು ಜೋರು ಮಳೆಯಾಗಿದ್ದರೆ, ಗ್ರಾಮೀಣ ಭಾಗದಲ್ಲಿ ಸಂಜೆವರೆಗೂ ಜಿಟಿಜಿಟಿಯಾಗಿ ಸುರಿಯಿತು. ಬರದ ಸಂಕಷ್ಟದಲ್ಲಿರುವ ಕೃಷಿಕರಿಗೆ, ಹಿಂಗಾರು ಮಳೆ ತುಸು ನಿರೀಕ್ಷೆ ಹುಟ್ಟಿಸಿದೆ. ಬರಡಾದ ಹೊಲ ಹಸಿಯಾಗಿದ್ದು, ಕುಸುಬಿ, ಜೋಳ, ಬಿತ್ತನೆಗೆ ಅಣಿಯಾಗಿದ್ದಾರೆ. ಈಗಾಗಲೇ ಬಿತ್ತನೆ ಮಾಡಿದ ರೈತರ ಮೊಗದಲ್ಲಿ ನಗು ಮೂಡಿಸಿದೆ.

ರಭಸದ ಮಳೆಗೆ ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಮಾರುಕಟ್ಟೆಗೆ ಬಂದ ಗ್ರಾಹಕರು ನೆನೆಯುತ್ತ ವ್ಯಾಪಾರ ನಡೆಸಿದರು. ಬಿಆರ್‌ಟಿಎಸ್‌ ಕಾರಿಡಾರ್‌ ಸೇರಿದಂತೆ ಹೊಸೂರು ವೃತ್ತ, ದೇವಾಂಗಪೇಟೆ ರಸ್ತೆ, ಗೋಪನಕೊಪ್ಪ ರಸ್ತೆ, ಯಲ್ಲಾಪುರ ರಸ್ತೆ, ಬಂಕಾಪುರ ಚೌಕ, ಅಶೋಕ ನಗರ ಮುಖ್ಯರಸ್ತೆಯಲ್ಲಿ ನೀರು ನಿಂತಿತ್ತು. ಕೆಲವೆಡೆ ಆಗಾಗ ವಿದ್ಯುತ್‌ ವ್ಯತ್ಯಯವಾಗುತ್ತಿತ್ತು.

ನೀಲಿಜಿನ್‌ ರಸ್ತೆಯಿಂದ ಚನ್ನಮ್ಮ ವೃತ್ತದ ಕಡೆಗೆ ಬರುವ ಮಾರ್ಗದಲ್ಲಿ, ದೇಸಾಯಿ ವೃತ್ತದ ಮೇಲ್ಸೇತುವೆ ಕೆಳಭಾಗ, ನವನಗರದ ಮೆಟ್ರೋ ಹಾಗೂ ಉಣಕಲ್‌ನ ಪ್ರೆಸಿಡೆಂಟ್‌ ಹೋಟೆಲ್‌ ಎದುರಿನ ಮುಖ್ಯರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡಿದರು.

ಗೋಕುಲ ರಸ್ತೆಯಿಂದ ಕಾರವಾರ ರಸ್ತೆಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಸಾರಿಗೆ ಘಟಕದ ಪಕ್ಕದ ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ನಿಂತ ಪರಿಣಾಮ, ಗೋಕುಲ ಮುಖ್ಯ ರಸ್ತೆಯ ಅಕ್ಕಪಕ್ಕದ ಮಾರ್ಗದಲ್ಲಿ ವಾಹನಗಳ ಸಂಚಾರ ದಟ್ಟಣೆಯಾಗಿತ್ತು. ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ತಡರಾತ್ರಿವರೆಗೂ ಸಂಚಾರ ಪೊಲೀಸರು ಪರದಾಡಿದರು.

‘ಕಾಂಕ್ರಿಟ್‌ ರಸ್ತೆ ಕಾಮಗಾರಿ ಪೂರ್ಣಗೊಂಡು ಏಳು–ಎಂಟು ತಿಂಗಳಾದರೂ, ಗಟಾರ ಕಾಮಗಾರಿ ನಡೆಸದೆ ಹಾಗೆಯೇ ಬಿಟ್ಟಿದ್ದಾರೆ. ತಗ್ಗು ಪ್ರದೇಶವಾಗಿರುವುದರಿಂದ ಸುತ್ತಲಿನ ನೀರೆಲ್ಲ ಇಲ್ಲಿಯೇ ಸಂಗ್ರಹವಾಗುತ್ತಿದೆ. ಸಣ್ಣ ಮಳೆ ಬಂದರೂ ಸಂಚಾರ ಅಸ್ತವ್ಯಸ್ತವಾಗುತ್ತದೆ. ವಾಣಿಜ್ಯ ಮಳಿಗೆಗಳು, ಗಣ್ಯರ ಮನೆಗಳು ಹಾಗೂ ವಾಹನ ಸಂಚಾರ ದಟ್ಟಣೆ ಇರುವ ಪ್ರಮುಖ ಸ್ಥಳಗಳಲ್ಲಿಯೇ ಅರ್ಧಮರ್ಧ ಕಾಮಗಾರಿ ನಡೆಸಿ, ಹಾಗೆಯೇ ಬಿಟ್ಟಿದ್ದಾರೆ’ ಎಂದು ಆಟೊ ಚಾಲಕ ಶಂಕರಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಆನಂದನಗರ, ಚನ್ನಪೇಟೆ, ದೇವಾಂಗಪೇಟೆ, ಯಲ್ಲಾಪುರ ಓಣಿ, ಲೋಕಪ್ಪನ ಹಕ್ಕಲ, ದಾಜಿಬಾನ್‌ ಪೇಟೆಯ ಕೆಲವೆಡೆ ಒಳಚರಂಡಿಯ ಮ್ಯಾನ್‌ಹೋಲ್‌ ತುಂಬಿ, ರಸ್ತೆ ಮೇಲೆ ಹರಿಯಿತು. ಅರವಿಂದ ನಗರ, ರಾಜಾಜಿನಗರ, ಅಮರ ಕಾಲೊನಿ, ವಿಶ್ವೇಶ್ವರ ನಗರ, ಸಾಯಿನಗರ ಸೇರಿದಂತೆ ವಿವಿಧ ಬಡಾವಣೆಯ ರಸ್ತೆಗಳ ಹೊಂಡದಲ್ಲಿ, ನೀರು ನಿಂತಿತ್ತು.

ಗ್ರಾಮೀಣ ಭಾಗದಲ್ಲಿ ಧಾರಾಕಾರ ಮಳೆ: ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ಲ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸೋಮವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು.

ಹುಬ್ಬಳ್ಳಿಯಲ್ಲಿ ಸೋಮವಾರ ಸುರಿದ ಜೋರು ಮಳೆಯಲ್ಲಿಯೇ ವಾಹನಗಳು ಸಾಗಿದವು
ಹುಬ್ಬಳ್ಳಿಯಲ್ಲಿ ಸೋಮವಾರ ಸುರಿದ ಜೋರು ಮಳೆಯಲ್ಲಿಯೇ ವಾಹನಗಳು ಸಾಗಿದವು

‘ಹಿಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ್ದೇವೆ. ಈಗ ಮಳೆಯಾಗಿರುವುದರಿಂದ ಕಡಲೆ ಸೇರಿದಂತೆ ಇನ್ನಿತರ ಬೆಳೆಗಳಿಗೆ ಅನುಕೂಲವಾಗಲಿದೆ’ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT