ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭಾ ಸದಸ್ಯರಿಂದ ನಿಯಮ ಗಾಳಿಗೆ ತೂರಿ ಜಾಗ ಮಾರಾಟ

Last Updated 16 ಜುಲೈ 2018, 14:03 IST
ಅಕ್ಷರ ಗಾತ್ರ

ಧಾರವಾಡ: ‘ಕಂಪನಿ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ 149 ಎಕರೆ ಜಾಗವನ್ನು ಸರ್ಕಾರದಿಂದ ಪಡೆದಿದ್ದ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್, ಮಂಡಳಿಯ ನಿಮಯಾವಳಿಯನ್ನು ಗಾಳಿಗೆ ತೂರಿ ಮಾರಾಟ ಮಾಡಿರುವ ಹಗರಣ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಆಗ್ರಹಿಸಿದರು.

ಬೆಂಗಳೂರು ಬಳಿಯ ನೆಲಮಂಗಲ ತಾಲ್ಲೂಕಿನ ದಾಬಾಸ್‌ಪೇಟೆ ಬಳಿ ಬಿಪಿಎಲ್‌ ಕಂಪೆನಿ ಸ್ಥಾಪಿಸುವುದಾಗಿ ಪಡೆದಿದ್ದ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸದೆ, ಕೆಎಐಡಿಬಿ ನಿಯಮಾವಳಿ ಗಾಳಿಗೆ ತೂರಲಾಗಿದೆ. ಸರ್ಕಾರದಿಂದ ರಿಯಾಯಿತಿ ದರದಲ್ಲಿ 149 ಎಕರೆ ಜಮೀನು ಪಡೆದು, ಅದನ್ನು ರಿಯಲ್ ಎಸ್ಟೇಟಿನಲ್ಲಿ ತೊಡಗಿಸಿ ಪ್ರತಿ ಎಕರೆಗೆ ಅಂದಾಜು ₹2.35ಕೋಟಿಯಂತೆ ಮಾರಾಟ ಮಾಡಿದ್ದಾರೆ. ಇದರಿಂದ ₹340ಕೋಟಿಗೂ ಹೆಚ್ಚು ಅಕ್ರಮ ಹಣ ಸಂಪಾದಿಸಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಈ ವಿಷಯವಾಗಿ 2014ರಲ್ಲಿ ವಿಧಾನಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಚಂದ್ರಶೇಖರ್ ಅವರಿಗೆ ನೀಡಲಾಗಿದ್ದ ಜಮೀನನ್ನು ಹಿಂಪಡೆದು ರೈತರಿಗೆ ನೀಡಬೇಕು. ಇಲ್ಲವೇ ಈ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾದ ನಷ್ಟವನ್ನು ತುಂಬಿಸಬೇಕು ಎಂದು ಒತ್ತಾಯಿಸಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು’ ಎಂದು ಒತ್ತಾಯಿಸಿದರು.

‘ಈ ಪ್ರಕರಣದಲ್ಲಿ ಜಮೀನು ಕಳೆದುಕೊಂಡ ರೈತರು ಲೋಕಾಯುಕ್ತರಿಗೆ ಪತ್ರವನ್ನೂ ಬರೆದಿದ್ದರು. ಆದರೆ ಅದರಿಂದ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈ ಪ್ರಕರಣವನ್ನು ನ್ಯಾಯಮೂರ್ತಿ ಸಂತೋಷ ಹೆಗ್ಡೆ ಮತ್ತು ನ್ಯಾ. ವಿಕ್ರಂಜಿತ್ ಸೇನ್ ಅವರಿಂದ ಸ್ವತಂತ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಅರಣ್ಯ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮದನ್ ಗೋಪಾಲ್ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆಲ ಗ್ರಾಮಗಳ 1500 ಹೆಕ್ಟೇರ್ ಅರಣ್ಯಕ್ಕೆ ಸೇರಿದ ಜಾಗದಲ್ಲಿ ರಾಜಕಾರಣಿಗಳ ಒತ್ತಾಯಕ್ಕೆ ಮಣಿದು ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿದ್ದರು. ತಮ್ಮ ಅಧಿಕಾರವ್ಯಾಪ್ತಿಗೆ ಬಾರದಿದ್ದರೂ ಆದೇಶ ಹೊರಡಿಸಿದ್ದರು. ಇದರ ವಿರುದ್ಧ ಸಮಾಜ ಪರಿವರ್ತನ ಸಮುದಾಯದಿಂದ ಹೋರಾಟ ನಡೆಸಲಾಗಿತ್ತು. ಸುಪ್ರೀಂ ಕೋರ್ಟ್‌ಗೂ ಮೊರೆ ಹೋಗಲಾಗಿತ್ತು. ಇದೀಗ ಅಧಿಕಾರಿಯ ಆದೇಶವನ್ನು ತಳ್ಳಿಹಾಕಿ ಅರಣ್ಯ ಪ್ರದೇಶ ರಕ್ಷಣೆ ಮಾಡಿದ್ದು ಸ್ವಾಗತಾರ್ಹ’ ಎಂದು ಹಿರೇಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT