ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸೌಹಾರ್ದದ ಸಂದೇಶ ಸಾರಿದ ರಂಜಾನ್‌, ಸಾಮೂಹಿಕ ಪ್ರಾರ್ಥನೆ

Last Updated 4 ಮೇ 2022, 11:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ಮಂಗಳವಾರ ಸಡಗರದಿಂದ ರಂಜಾನ್‌ (ಈದ್‌ ಉಲ್ ಫಿತ್ರ್‌) ಆಚರಿಸಲಾಯಿತು. ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಜಹರುದ್ದೀನ್ ಖಾಜಿ ಅವರು, ‘ಜಗತ್ತು ಶಾಂತಿಯಿಂದ ಕೂಡಿರಲಿ’ ಎಂದು ಎನ್ನುವ ಮೂಲಕ ಸೌಹಾರ್ದದ ಸಂದೇಶ ನೀಡಿದರು.

ಹಬ್ಬದ ಅಂಗವಾಗಿ ಹೊಸ ಬಟ್ಟೆ ಧರಿಸಿ, ಪರಸ್ಪರ ಹಬ್ಬದ ಶುಭಾಶಯ ಕೋರಿದರು. ಬಳಿಕ, ಬಗೆಗೆಯ ಖಾದ್ಯ ಹಾಗೂ ಭಕ್ಷ್ಯಗಳನ್ನೊಳಗೊಂಡ ಊಟ ಸವಿದರು.ಸಂಬಂಧಿಕರು, ಸ್ನೇಹಿತರನ್ನು ಆಹ್ವಾನಿಸಿ, ಔತಣ ನೀಡಿದರು.ಹಬ್ಬದ ಅಂಗವಾಗಿ ಮಸೀದಿಗಳಿಗೆ ಅಲಂಕಾರ ಮಾಡಲಾಗಿತ್ತು.

ಸೌಹಾರ್ದ ಸಂದೇಶ: ಪ್ರಾರ್ಥನೆ ಮುಗಿದ ಬಳಿಕ, ಹುಬ್ಬಳ್ಳಿ ಅಂಜುಮನ್ ಸಂಸ್ಥೆಯಿಂದ ಮೂರು ಸಾವಿರ ಮಠದವರೆಗೆ ತೆರಳಿದ ಮುಸ್ಲಿಂ ಮುಖಂಡರ ನಿಯೋಗ, ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಅವರಿಗೆ ಬಸವ ಜಯಂತಿಯ ಶುಭಾಶಯ ಕೋರಿತು. ಪ್ರತಿಯಾಗಿ ಸ್ವಾಮೀಜಿ ರಂಜಾನ್ ಹಬ್ಬಕ್ಕೆ ಶುಭ ಕೋರಿದರು.

‘ಎಲ್ಲರೂ ಕೂಡಿ ಬಾಳಬೇಕು. ಎಲ್ಲ ಧರ್ಮ ಒಂದೇ ಆಗಿರುವುದರಿಂದ ಭೇದ ಮಾಡಬಾರದು. ಒಬ್ಬೊರನ್ನೊಬ್ಬರು ಅವಲಂಬಿಸಿರುವುದರಿಂದ ಸಾಮರಸ್ಯ ಇರಬೇಕು. ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಜೊತೆಗೆ, ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆ ಮೂಲಕ ಹುಬ್ಬಳ್ಳಿ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು’ ಎಂದು ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯೂಸುಫ್‌ ಸವಣೂರ ಕರೆ ನೀಡಿದರು.

ಅಂಜುಮನ್‌ ಸಂಸ್ಥೆಯಿಂದ ಬಸವ ವನದಲ್ಲಿರುವ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.ಹೊಸಮಠದ ಚಂದ್ರಶೇಖರ ಸ್ವಾಮೀಜಿ, ಸೈಯದ್‌ ನಿಸಾರ್‌ ಅಹ್ಮದ್‌ ಸಗನ್‌, ಶಾಸಕ ಪ್ರಸಾದ ಅಬ್ಬಯ್ಯ, ಅಂಜುಮನ್‌ ಉಪಾಧ್ಯಕ್ಷ ಅಲ್ತಾಫ ಹಳ್ಳೂರ, ಅನ್ವರ್ ಮುಧೋಳ, ಸಿರಾಜ್‌ ಕುರ್ಚಿವಾಲ, ಎ.ಎಂ. ಹಿಂಡಸಗೇರಿ, ವಿಜಯ ಗುಂಟ್ರಾಳ, ಅಬ್ದುಲ್ ಮುನಾಫ್‌ ದೇವಗಿರಿ, ಇಮಾಮ್‌ ಹುಸೇನ್ ಮಡ್ಕಿ, ಸಲೀಂ ಸುಂದ್ಕೆ, ಅಹ್ಮದ್‌ ರಝಾ ಕಿತ್ತೂರ ಇದ್ದರು.

ಪೊಲೀಸ್‌ ಬಂದೋಬಸ್ತ್‌: ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ವೇಳೆ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಮೈದಾನದ ಸುತ್ತ ಎರಡ್ಮೂರು ಕಿ.ಮೀ.ವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಿ, ಬೇರೆ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿತ್ತು. ಪ್ರಾರ್ಥನೆ ಮುಗಿದ ಬಳಿಕ ಸಂಚಾರ ಮುಕ್ತಗೊಂಡಿದ್ದರಿಂದ ವಿವಿಧೆಡೆ ಸಂಚಾರ ದಟ್ಟಣೆ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT