ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಿ’

Last Updated 23 ಆಗಸ್ಟ್ 2019, 20:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಶುಕ್ರವಾರ ಪಥ ಸಂಚಲನ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ಅವರ ನೇತೃತ್ವದಲ್ಲಿ ಕಾರವಾರ ರಸ್ತೆಯ ಸಿಎಆರ್‌ ಮೈದಾನದಿಂದ ಆರಂಭವಾದ ಪಥ ಸಂಚಲನ ಕಮರಿಪೇಟೆ, ಹಳೇಹುಬ್ಬಳ್ಳಿ, ಕಸಬಾ ಪೇಟೆ, ಚನ್ನಪೇಟೆ, ಸದರ ಸೋಫಾ, ನ್ಯೂ ಇಂಗ್ಲಿಷ್‌ ಸ್ಕೂಲ್‌, ಬಮ್ಮಾಪುರ ಚೌಕ್‌, ದುರ್ಗದ ಬೈಲ್‌, ಸ್ಟೇಷನ್‌ ರಸ್ತೆ, ಲ್ಯಾಮಿಂಗ್ಟನ್‌ ರಸ್ತೆ ಮೂಲಕ ಪುನಃ ಸಿಎಆರ್‌ ಮೈದಾನಕ್ಕೆ ಬಂದು ತಲುಪಿತು.

ಪಥ ಸಂಚಲನಕ್ಕೂ ಮುನ್ನ ಮಾತನಾಡಿದ ಆಯುಕ್ತ ದಿಲೀಪ್‌, ‘ಪೊಲೀಸರು ಸಾರ್ವಜನಿಕರ ಸೇವೆ ಮಾಡುವ ಸೇವಕರು. ಅವರ ಕಷ್ಟ, ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಪರಿಹಾರ ನೀಡಬೇಕು. ದೂರು ನೀಡಲು ಬಂದವರ ಮೇಲೆ ಯಾವುದೇ ಕಾರಣಕ್ಕೂ ದಬ್ಬಾಳಿಕೆ ನಡೆಸಬಾರದು. ಅವರ ಸಂಕಷ್ಟಗಳನ್ನು ಆಲಿಸಿ ದೂರು ದಾಖಲಿಸಿಕೊಳ್ಳಬೇಕು’ ಎಂದರು.

‘ಅಪರಾಧ ಚಟುವಟಿಕೆಗಳು ಸಂಪೂರ್ಣ ನಿಲ್ಲಬೇಕು. ಮಟ್ಕಾ, ಜೂಜು, ವೇಶ್ಯಾವಾಟಿಕೆ, ಗೂಂಡಾಗಿರಿ ಮಾಡುವುದು ಕಂಡು ಬಂದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಿ’ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಿದರು.

‘ಅಪರಾಧಿಗಳಿಗೆ ಬಿಸಿ ಮುಟ್ಟಿಸಬೇಕು. ಇಲ್ಲದಿದ್ದರೆ, ಸಂಬಂಧಿಸಿದ ಇನ್‌ಸ್ಪೆಕ್ಟರ್‌ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಡಿಸಿಪಿ ಡಿ.ಎಲ್‌. ನಾಗೇಶ್‌, ಎಸಿಪಿ ಎಚ್‌.ಕೆ. ಪಠಾಣ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT