ಶುಕ್ರವಾರ, ಮಾರ್ಚ್ 24, 2023
31 °C
ಅಣ್ಣಿಗೇರಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕ ಖುಷಿಯಲ್ಲಿ ಸ್ಥಳೀಯರು

ದಶಕಗಳ ಜಲ ಸಂಕಟಕ್ಕೆ ಮುಕ್ತಿ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ನಮ್ಮೂರಿನ ನೀರಿನ ಬವಣೆ ಕೊನೆಗೂ ನೀಗಿತು. ಯಾವಾಗ ಕೆರೆ ನಿರ್ಮಾಣವಾಗುತ್ತೊ, ನಿತ್ಯ ನೀರು ಬರುತ್ತೊ, ಬಿಂದಿಗೆಗಳಲ್ಲಿ ದೂರದಿಂದ ನೀರು ತರುವುದು ತಪ್ಪುತ್ತದೊ ಎಂಬ ಪ್ರಾರ್ಥನೆ ಆ ದೇವರಿಗೆ ಮುಟ್ಟಿದೆ...’

– ಅಣ್ಣಿಗೇರಿ ಪಟ್ಟಣಕ್ಕೆ ದಿನದ 24X7 ನೀರು ಪೂರೈಸುವುದಕ್ಕಾಗಿ ತಾಲ್ಲೂಕಿನ ಬಸಾಪುರದ ಬಳಿ ನಿರ್ಮಿಸಿರುವ ನೂತನ ಕೆರೆಯ ಲೋಕಾರ್ಪಣೆ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯರ ಮಾತುಗಳಿವು.

‘ಮೂರು ದಶಕಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದ ಪಟ್ಟಣದಲ್ಲಿ, ಇತ್ತೀಚಿನ ವರ್ಷಗಳಲ್ಲಿ ಜಲ ಸಂಕಟ ತೀವ್ರಗೊಂಡಿತ್ತು. ಸ್ಥಳೀಯ ಅಂಬಿಗೇರಿ ಕೆರೆಗೆ ಪೈಪ್‌ಲೈನ್‌ನಲ್ಲಿ ಸಣ್ಣದಾಗಿ ಮಲಪ್ರಭಾ ಕಾಲುವೆಯಿಂದ ನೀರು ಬಂದರೂ, ಪಟ್ಟಣದ ದಾಹ ತಗ್ಗಿಸಲು ಸಾಧ್ಯವಾಗಿರಲಿಲ್ಲ’ ಎಂದು ಸ್ಥಳೀಯರಾದ ಎಂ. ಹಿರೇಮಠ ‘ಪ್ರಜಾವಾಣಿ’ಯೊಂದಿಗೆ ಹಿಂದಿನ ಬವಣೆ ಹಂಚಿಕೊಂಡರು.

‘15ರಿಂದ 20 ದಿನಗಳಿಗೊಮ್ಮೆ ಬರುತ್ತಿದ್ದ ನೀರನ್ನು ಬ್ಯಾರಲ್, ಬಿಂದಿಗೆ, ಪಾತ್ರೆ ಹಾಗೂ ಬಾಟಲಿಗಳಲ್ಲಿ ನೀರು ತುಂಬಿಟ್ಟುಕೊಳ್ಳುತ್ತಿದ್ದೆವು. ವಾರಕ್ಕೂ ಹೆಚ್ಚು ದಿನ ಸಂಗ್ರಹಿಸಿಟ್ಟ ನೀರಿನಲ್ಲಿ ಎಷ್ಟೋ ಸಲ ಹುಳುಗಳು ಕಾಣಿಸಿಕೊಳ್ಳುತ್ತಿದ್ದೆವು. ವಿಧಿ ಇಲ್ಲದೆ ಅವುಗಳನ್ನೇ ಇತರ ಕೆಲಸಗಳಿಗೆ ಬಳಸಿ, ಕುಡಿಯಲು ಹಣ ಕೊಟ್ಟು ನೀರು ತರುತ್ತಿದ್ದೆವು. ಮುಂದೆ, ಅಂತಹ ಸಂಕಷ್ಟಗಳಿಂದ ಬಿಡುಗಡೆ ಸಿಗಲಿದೆ ಎಂಬುದೇ ಸಮಾಧಾನ’ ಎಂದು ನಿಟ್ಟುಸಿರು ಬಿಟ್ಟರು.

2016ರಲ್ಲಿ ಚಾಲನೆ: ಮಲಪ್ರಭಾ ನದಿ ನೀರಿನ ಕಾಲುವೆ ಹಾಗೂ ಅಣ್ಣಿಗೇರಿ–ನವಲಗುಂದ ಸಂಪರ್ಕಿಸುವ ರಸ್ತೆಗೆ ಹೊಂದಿಕೊಂಡಂತಿರುವ ಬಸಾಪುರದಲ್ಲಿ, ಕೆರೆ ನಿರ್ಮಾಣಕ್ಕೆ 2012ರಲ್ಲಿ ಶಾಸಕರಾಗಿದ್ದ ಬಿಜೆಪಿಯ ಶಂಕರಪಾಟೀಲ ಮುನೇನಕೊಪ್ಪ ಅವರ ಪ್ರಯತ್ನದಿಂದಾಗಿ, ಜಾಗ ಗುರುತಿಸಲಾಯಿತು. ರೈತರು ಭೂಮಿ ನೀಡಿದರು. ಇದಕ್ಕಾಗಿ ₹34.88 ಕೋಟಿ ಅನುದಾನ ಬಿಡುಗಡೆಯಾಗಿತ್ತು. 2016ರ ಆಗಸ್ಟ್ 8ರಂದು ಅಂದಿನ ಶಾಸಕ ಎನ್‌.ಎಚ್. ಕೋನರಡ್ಡಿ ಕೆರೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.

ಎರಡು ವರ್ಷಕ್ಕೆ ಮುಗಿಯಬೇಕಿದ್ದ ಕೆರೆ ಕಾಮಗಾರಿ, ಬರೋಬ್ಬರಿ ಏಳೂವರೆ ವರ್ಷಗಳ ನಂತರ ಪೂರ್ಣಗೊಂಡಿದೆ. ಕಾಲುವೆ ಮತ್ತು ಕೆರೆ ಮಧ್ಯೆ ಪೈಪ್‌ಲೈನ್ ನಿರ್ಮಿಸಿದ್ದು, ಕಾಲುವೆಗೆ ನೀರು ಕೆರೆಗೆ ಹರಿಯುತ್ತದೆ. ಅಲ್ಲಿಂದ, ಅಣ್ಣಿಗೇರಿಗೆ ಪೈಪ್‌ಲೈನ್ ಮೂಲಕ ನೀರು ದಿನವಿಡೀ ನೀರು ಪೂರೈಕೆಯಾಗಲಿದೆ.

ನೀರಿಗಾಗಿ ಜೈಲು ಸೇರಿದ್ದರು!

ಮಲಪ್ರಭಾ ಕಾಲುವೆಯಿಂದ ಅಂಬಿಗೇರಿ ಕೆರೆಗೆ ನಿರ್ಮಿಸಿದ್ದ ಪೈಪ್‌ಲೈನ್ ಅನ್ನು ಬಸಾಪುರದ ಜನರು, ನೀರಿಗಾಗಿ ಒಡೆದಿದ್ದರು. ಆಗ ಅಣ್ಣಿಗೇರಿ ಮತ್ತು ಬಸಾಪುರದ ಜನರ ನಡುವೆ ಘರ್ಷಣೆ ನಡೆದಿತ್ತು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ, ಕೆಲವರು ಜೈಲು ಕೂಡ ಸೇರಿದ್ದರು. ಆಗಲೇ, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ, ಸ್ಥಳೀಯ ಮುಖಂಡರು ಹಾಗೂ ಜನಪ್ರತಿನಿಧಿಗಳಿಗೆ ಹೊಸ ಕೆರೆ ನಿರ್ಮಾಣದ ಆಲೋಚನೆ ತಲೆಗೆ ಬಂದಿತ್ತು ಎಂದು ಸ್ಥಳೀಯರು ನೆನಪುಗಳನ್ನು ಮೆಲುಕು ಹಾಕಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು