ಶುಕ್ರವಾರ, ಮೇ 27, 2022
23 °C

ಗೋವಿಂದರಾವ್ ಜೊತೆಗಿನ ನೆನಪು: ಪುಸ್ತಕ ಪ್ರೀತಿ, ಸಿನಿಮಾ ಪ್ರೀತಿ ಕಲಿಸಿದ ಅಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಆಸ್ಪತ್ರೆಗೆ ಸೇರುವ ಕೊನೆಯ ದಿನಗಳವರೆಗೂ ಅಪ್ಪ ಪುಸ್ತಕಗಳನ್ನು ಓದುತ್ತಿದ್ದರು. ನಮ್ಮಲ್ಲಿಯೂ ‍ಪುಸ್ತಕ ಪ್ರೀತಿ ಹಾಗೂ ಜೀವನ ಪ್ರೀತಿ ತುಂಬಿದ್ದು ಅಪ್ಪ.

ಹೀಗೆ ಅಪ್ಪನ ಜೊತೆಗಿನ ನೆನಪುಗಳನ್ನು ಹಂಚಿಕೊಂಡು ಕಣ್ಣೀರಾದರು ಹುಬ್ಬಳ್ಳಿಯಲ್ಲಿ ಶುಕ್ರವಾರ ಬೆಳಗಿನ ಜಾವ ನಿಧನರಾದ ಪ್ರೊ. ಜಿ.ಕೆ. ಗೋವಿಂದರಾವ್ ಅವರ ಪುತ್ರಿ ಶ್ಯಾಮಲಾ ಗುರುಪ್ರಸಾದ್.


–ಶ್ಯಾಮಲಾ ಗುರುಪ್ರಸಾದ್

ಇಲ್ಲಿನ ಗೋಲ್ಡನ್‌ ಟೌನ್‌ ನಿವಾಸದಲ್ಲಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಆಗಸ್ಟ್ ಕೊನೆಯ ವಾರದಲ್ಲಿ ಅಪ್ಪ ಹುಬ್ಬಳ್ಳಿಗೆ ಬಂದಿದ್ದರು. ಆರೋಗ್ಯ ಕ್ಷೀಣಿಸುತ್ತಿದ್ದರೂ ಪುಸ್ತಕ ಪ್ರೀತಿ ಮಾತ್ರ ಯಾವತ್ತೂ ಕಡಿಮೆಯಾಗಲಿಲ್ಲ. ಕೆಲ ದಿನಗಳ ಹಿಂದೆಯೂ ತಡರಾತ್ರಿಯ ತನಕ ಪುಸ್ತಕ ಓದಿದ್ದರು. ತಾವು ಓದಿದ ವಿಷಯಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುತ್ತಿದ್ದರು’ ಎಂದು ಶ್ಯಾಮಲಾ ತಮ್ಮ ತಂದೆಯ ಕೊನೆಯ ದಿನಗಳನ್ನು ನೆನಪಿಸಿಕೊಂಡರು.

ಪ್ರತಿಯೊಬ್ಬರೂ ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎನ್ನುವುದು ಅವರ ಬಯಸಿದ್ದರು. ಕೊನೆಯ ದಿನದ ತನಕ ತಾವೂ ಹಾಗೆಯೇ ಬದುಕಿದ್ದರು. ನನ್ನ ಮಗಳು (ಶ್ಯಾಮಲಾ ಅವರ ಪುತ್ರಿ) ನಿರ್ಮಾಣ ಮಾಡಿದ್ದ ಕಿರುಚಿತ್ರವನ್ನು ಪೂರ್ಣವಾಗಿ ನೋಡಿ ಖುಷಿ ಪಟ್ಟಿದ್ದರು ಎಂದರು.

ಇದನ್ನೂ ಓದಿ... ಹಿರಿಯ ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ನಿಧನ

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಮ್ಮ ಮನೆಯ ಹತ್ತಿರದಲ್ಲಿದ್ದ ಸಂಜಯ್‌, ಅಪ್ಸರಾ ಸಿನಿಮಾ ಮಂದಿರಗಳಿಗೆ ಅಪ್ಪ ಕರೆದುಕೊಂಡು ಹೋಗುತ್ತಿದ್ದರು. ಅಮ್ಮನ ರುಚಿಯಾದ ಕೈತುತ್ತು ಸವಿದು ಅಪ್ಪನೊಂದಿಗೆ ಸಿನಿಮಾಕ್ಕೆ ಹೋಗುತ್ತಿದ್ದೆವು. ಬಾಲ್ಯದ ದಿನಗಳಲ್ಲಿ ಹೀಗೆ ಬೆಳೆದ ಸಿನಿಮಾ ಪ್ರೀತಿ ಈಗಲೂ ಉಳಿದುಕೊಂಡಿದೆ ಎಂದು ಪ್ರೊ. ಜಿ.ಕೆ. ಗೋವಿಂದರಾವ್ ಅವರ ಪುತ್ರಿಯರಾದ ಶ್ಯಾಮಲಾ ಗುರುಪ್ರಸಾದ್ ಮತ್ತು ಶಾಂತಲಾ ರಾವ್ ನೆನಪುಗಳನ್ನು ಹಂಚಿಕೊಂಡರು.

ನಮ್ಮ ಬಾಲ್ಯದ ದಿನಗಳಲ್ಲಿ ಅಪ್ಪ ನಮಗೆ ಕಾಲ್ಪನಿಕ ಕಥೆಗಳನ್ನು ಹೇಳುತ್ತಿದ್ದರು. ಅವರು ಯೋಚನೆ ಮಾಡುತ್ತಿದ್ದ ರೀತಿ, ಓದುತ್ತಿದ್ದ ಪುಸ್ತಕಗಳು ನಮ್ಮ ಮೇಲೆ ಬಹಳ ಪರಿಣಾಮ ಬೀರಿವೆ. ಅಪ್ಪ ಕಲಿಸಿದ ಪುಸ್ತಕ, ಸಿನಿಮಾ ಹಾಗೂ ಜೀವನ ಪ್ರೀತಿಯನ್ನು ನಾವೂ ನಮ್ಮ ಮಕ್ಕಳಿಗೆ ಕಲಿಸಿಕೊಟ್ಟಿದ್ದೇವೆ. ತಂದೆಯಿಂದ ನಮಗೆ ಸಿಕ್ಕ ದೊಡ್ಡ ಉಡುಗೊರೆ ಇದು ಎಂದು ಶ್ಯಾಮಲಾ ಹಾಗೂ ಶಾಂತಿ ಅವರು ಭಾವುಕರಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು