ಸೋಮವಾರ, ಮೇ 23, 2022
24 °C
ಸ್ಥಳೀಯರ ಪ್ರತಿಭಟನೆ ಬಿಸಿಗೆ ಮಣಿದ ಪೊಲೀಸರು; ರೈಲ್ವೆ ಜಾಗದಲ್ಲಿ ಪ್ರತಿಷ್ಠಾಪನೆ– ಅಧಿಕಾರಿಗಳ ಆರೋಪ

ಅಂಬೇಡ್ಕರ್ ಪುತ್ಥಳಿ ತೆರವು, ಮರುಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಆರ್‌ಜಿಎಸ್ ರೈಲ್ವೆ ಕಾಲೊನಿಯ ವಿನೋಬಾನಗರದ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ಗುರುವಾರ ತೆರವುಗೊಳಿಸಿದ ಪೊಲೀಸರು, ಸ್ಥಳೀಯರ ಪ್ರತಿಭಟನೆಯ ಬಿಸಿಯ ಬಳಿಕ ಪುತ್ಥಳಿಯನ್ನು ಮತ್ತೆ ಹಿಂದಿರುಗಿಸಿದರು. ನಂತರ ಸ್ಥಳೀಯರು ಪುತ್ಥಳಿಯನ್ನು ಮತ್ತೆ ಅದೇ ಜಾಗದಲ್ಲಿ ತಂದು ಪ್ರತಿಷ್ಠಾಪಿಸಿದರು.

ರೈಲ್ವೆಗೆ ಸೇರಿದ ಮೈದಾನದ ಬಳಿ ಕಟ್ಟೆಯೊಂದನ್ನು ನಿರ್ಮಿಸಿದ್ದ ಸ್ಥಳೀಯರು, ಅಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ಪ್ರತಿಷ್ಠಾಪಿಸಿದ್ದರು. ಬೆಳಿಗ್ಗೆ ಕೇಶ್ವಾಪುರ ಠಾಣೆ ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ರೈಲ್ವೆ ರಕ್ಷಣಾ ದಳದ (ಆರ್‌ಪಿಎಸ್) ಸಿಬ್ಬಂದಿ ಪುತ್ಥಳಿಯನ್ನು ತೆರವುಗೊಳಿಸಿ, ತಮ್ಮ ವಶದಲ್ಲಿ ಇಟ್ಟುಕೊಂಡರು.

ಇದರಿಂದ ಕೆರಳಿದ ಸ್ಥಳೀಯರು ಮಹಾನಗರ ಪಾಲಿಕೆ ಸದಸ್ಯ ಸುವರ್ಣಾ ಕಲ್ಲಕುಂಟ್ಲ ಹಾಗೂ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪುತ್ಥಳಿ ತೆರವಿಗೆ ಕೇಶ್ವಾಪುರ ಪೊಲೀಸರೇ ಕಾರಣ
ಎಂದು ಆಕ್ರೋಶ ವ್ಯಕ್ತಪಡಿಸಿ,
ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ದಲಿತ ಸಂಘಟನೆಗಳು ಸಹ ಸ್ಥಳಕ್ಕೆ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಡಿಸಿಪಿ ಗೋಪಾಲ ಬ್ಯಾಕೋಡ, ಎಸಿಪಿ ವಿನೋದ ಮುಕ್ತೇದಾರ ಅವರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಪುತ್ಥಳಿ ಹಿಂದಿರುಗಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಅದಕ್ಕೆ ಮಣಿದ ಪೊಲೀಸರು, ಆರ್‌ಪಿಎಫ್ ಸಿಬ್ಬಂದಿ ವಶದಲ್ಲಿದ್ದ ಪುತ್ಥಳಿಯನ್ನು ಹಿಂದಿರುಗಿಸಿದರು.

ಬಳಿಕ ಪ್ರತಿಭಟನಾಕಾರರು, ಪುತ್ಥಳಿಯನ್ನು ವಿನೋಬಾನಗರಕ್ಕೆ ತೆಗೆದುಕೊಂಡು ಅದೇ ಜಾಗದಲ್ಲಿ ಮರು ಪ್ರತಿಷ್ಠಾಪಿಸಿದರು. ಪೂಜೆ ಸಲ್ಲಿಸಿ ಜೈ ಭೀಮ್ ಘೋಷಣೆಗಳನ್ನು ಕೂಗಿದರು.

ಮಹಾನಗರ ಪಾಲಿಕೆ ಸದಸ್ಯರಾದ ಚೇತನ ಹಿರೇಕೆರೂರ, ಶ್ರುತಿ ಚಲವಾದಿ, ಸಮತಾ ಸೇನೆಯ ಗುರುನಾಥ ಉಳ್ಳಿಕಾಶಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು