ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯೂಆರ್‌ ಕೋಡ್‌ ಕಳುಹಿಸಿ ₹ 8.98 ಲಕ್ಷ ವಂಚನೆ

Last Updated 12 ಸೆಪ್ಟೆಂಬರ್ 2022, 4:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೀಸೋ ಆ್ಯಪ್‌ನಲ್ಲಿ ಲಕ್ಕಿ ಡ್ರಾ ಬಂದಿದೆ ಎಂದು ಲಿಂಗರಾಜ ನಗರದ ಲಕ್ಷ್ಮಿಬಾಯಿ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಿದ ವ್ಯಕ್ತಿ, ಅವರಿಂದ ₹8.98 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಮೀಸೋ ಆ್ಯಪ್‌ನಲ್ಲಿ ಲಕ್ಷ್ಮಿಬಾಯಿ ತರಕಾರಿ ಖರೀದಿಸುತ್ತಿದ್ದರು. ಅಲ್ಲಿಂದ ಅವರ ಮಾಹಿತಿ ಪಡೆದ ವಂಚಕ, ಆ್ಯಪ್‌ನಿಂದ ₹12 ಲಕ್ಷ ಲಕ್ಕಿ ಡ್ರಾ ಬಂದಿದ್ದು, ಖಾತೆಗೆ ವರ್ಗಾಯಿಸಲು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ನಂಬಿಸಿದ್ದಾನೆ. ನಂತರ, ಅವರ ವಾಟ್ಸ್‌ಆ್ಯಪ್‌ಗೆ ಕ್ಯೂಆರ್‌ ಕೋಡ್‌ ಕಳುಹಿಸಿ ಸ್ಕ್ಯಾನ್‌ ಮಾಡುವಂತೆ ಹೇಳಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶ್ಲೀಲ ದೃಶ್ಯ ಅಪ್‌ಲೋಡ್: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನ ‘ಬಸವರಾಜ ವೈ’ ಖಾತೆಯಲ್ಲಿ ಅಶ್ಲೀಲ ದೃಶ್ಯವಳಿಯನ್ನು ಅಪ್‌ಲೋಡ್‌ ಮಾಡಿದ ಇಲ್ಲಿನ ಉಣಕಲ್‌ನ ಈರಪ್ಪ ಉಂಡಿ ವಿರುದ್ಧ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಈರಪ್ಪ ಫೇಸ್‌ಬುಕ್‌ ಖಾತೆಯಲ್ಲಿ ಹತ್ತು ಅಶ್ಲೀಲ ವಿಡಿಯೊ ಮತ್ತು ಮೂರು ಚಿತ್ರಗಳನ್ನು ಅಪ್‌ಲೋಡ್‌ ಮಾಡಿದ್ದ. ಯುವತಿಯೊಬ್ಬರು ಅವುಗಳನ್ನು ಸಿ.ಡಿ.ಯಲ್ಲಿ ಸಂಗ್ರಹಿಸಿ ಸೈಬರ್‌ ಠಾಣೆಗೆ ಅಂಚೆ ಮೂಲಕ ಕಳಿಸಿದ್ದರು.

ವಂಚನೆ: ಮನೆ ಬಾಡಿಗೆ ಪಡೆಯುವುದಾಗಿ ಹೇಳಿ ಧಾರವಾಡದ ವಿದ್ಯಾಗಿರಿಯ ವೆಂಕಟೇಶ ಅವರಿಗೆ ಕರೆ ಮಾಡಿದ ವ್ಯಕ್ತಿ, ಮುಂಗಡ ಹಣ ನೀಡುವುದಾಗಿ ಹೇಳಿ ಅವರಿಂದಲೇ ₹2.40 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ವೆಂಕಟೇಶ ಅವರ ಪತ್ನಿ ಹೆಸರಲ್ಲಿ ಬೆಂಗಳೂರಿನಲ್ಲಿರುವ ಅಪಾರ್ಟ್‌ಮೆಂಟ್‌ ಒಂದರಲ್ಲಿ ಮನೆಯಿದ್ದು, ಅದನ್ನು ಬಾಡಿಗೆ ನೀಡುವುದಾಗಿ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದರು. ಮನೋಹರ ಹೆಸರಿನ ವ್ಯಕ್ತಿ ಕರೆ ಮಾಡಿ, ಸೇನಾ ಅಧಿಕಾರಿಯೆಂದು ಪರಿಚಯಿಸಿಕೊಂಡು ಮನೆ ಬಾಡಿಗೆ ಪಡೆಯುವುದಾಗಿ ಹೇಳಿದ್ದ.

ಮುಂಗಡವಾಗಿ ಬ್ಯಾಂಕ್‌ ಖಾತೆಗೆ ₹20 ಲಕ್ಷ ವರ್ಗಾಯಿಸುವುದಾಗಿ ನಂಬಿಸಿದ್ದ. ನಂತರ, ವೆಂಕಟೇಶ ಅವರ ಗೂಗಲ್‌ ಪೇ, ಪೇಟಿಎಂ ಆ್ಯಪ್‌ನ ವಾಲೆಟ್‌ ತೆರೆಸಿ, ತನ್ನ ಬ್ಯಾಂಕ್‌ ಖಾತೆಯ ನಂಬರ್‌ ಹಾಕಿಸಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈದ್ಯರಿಗೆ ವಂಚನೆ
ಹುಬ್ಬಳ್ಳಿ:
ಬಿಎಸ್‌ಎಫ್‌ ಕ್ಯಾಂಪ್‌ ಸಿಬ್ಬಂದಿಗೆ ಮಾಡುವ ಎಂಡೋಸ್ಕೋಪಿಯ ಶುಲ್ಕ ಮುಂಗಡ ಕಳುಹಿಸುವುದಾಗಿ ಇಲ್ಲಿನ ಶಿರೂರ ಪಾರ್ಕ್‌ನ ಡಾ. ಗಣೇಶ ಅವರಿಗೆ ಕರೆ ಮಾಡಿದ ವ್ಯಕ್ತಿ, ಅವರಿಂದಲೇ ₹1.37 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಆರ್ಮಿ ಅಧಿಕಾರಿ ಹೆಸರಲ್ಲಿ ಡಾ. ಗಣೇಶ ಅವರಿಗೆ ದೂರವಾಣಿ ಕರೆ ಮಾಡಿದ ವ್ಯಕ್ತಿ, ಕೆಲವಷ್ಟು ಸಿಬ್ಬಂದಿಯನ್ನು ಎಂಡೋಸ್ಕೋಪಿ ಪರೀಕ್ಷೆಗೆ ಕಳುಹಿಸುವುದಾಗಿ ಹೇಳಿದ್ದಾನೆ. ನಂತರ ಅವರಿಂದಲೇ ಫೋನ್‌ಪೇ ಮೂಲಕ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT