ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಷಮ್ ಕಾರ್ಯಕರ್ತರ ತರಬೇತಿ ಶಿಬಿರ 15ಕ್ಕೆ

Last Updated 13 ಮೇ 2022, 4:06 IST
ಅಕ್ಷರ ಗಾತ್ರ

ಸಕ್ಷಮ್ ಕಾರ್ಯಕರ್ತರ ತರಬೇತಿ ಶಿಬಿರ 15ಕ್ಕೆ

ಹುಬ್ಬಳ್ಳಿ: ಸಕ್ಷಮ್ ಉತ್ತರ ಕರ್ನಾಟಕ ಪ್ರಾಂತ ಹುಬ್ಬಳ್ಳಿ ಘಟಕದಿಂದ ಇಲ್ಲಿನ ಕಲ್ಯಾಣ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿಮೇ 15ರಂದು ಉತ್ತರ ಕರ್ನಾಟಕ ವ್ಯಾಪ್ತಿಯ 13 ಜಿಲ್ಲೆಗಳ ಕಾರ್ಯಕರ್ತರ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಕ್ಷಮ್ ಪ್ರಾಂತ ಅಧ್ಯಕ್ಷ ಎಸ್.ಬಿ. ಶೆಟ್ಟಿ ಹೇಳಿದರು.

ಶಿಬಿರದಲ್ಲಿ 100ಕ್ಕೂ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ.ಪ್ರಾಂತವು ಅಂಗವಿಕಲರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿದೆ. ಅಂಗವಿಕಲರ ಹಕ್ಕುಗಳು, ಸೌಲಭ್ಯಗಳು ಹಾಗೂ ಸಕ್ಷಮ್ ಕಾರ್ಯಚಟುವಟಿಕೆಗಳ ಕುರಿತು ಶಿಬಿರದಲ್ಲಿ ಭಾಗವಹಿಸುವ ಕಾರ್ಯಕರ್ತರಿಗೆ ತಿಳಿಸಿ ಕೊಡಲಾಗುವುದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿಬಿರದ ಮುಖ್ಯ ಅತಿಥಿಯಾಗಿ ಸಕ್ಷಮ್ ಅಖಿಲ ಭಾರತ ಅಧ್ಯಕ್ಷ ಗೋವಿಂದರಾಜ, ದೃಷ್ಟಿ ಪ್ರಕೋಷ್ಠಕ ಪ್ರಮುಖ ವಿನೋದ ಪ್ರಕಾಶ, ಸದಸ್ಯರಾದ ವಸಂತ ಮಾಧವ ಭಾಗವಹಿಸುವರು. ಶಿಬಿರವು ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ನಡೆಯಲಿದೆ ಎಂದರು.

ಸಕ್ಷಮ ಉತ್ತರ ಕರ್ನಾಟಕ ಪ್ರಾಂತದ ಉಪಾಧ್ಯಕ್ಷ ಡಾ.‌ ವಿಜಯ ವಿಠಲ ಮನಗೋಳಿ, ಡಾ.‌ ಸುನೀಲ ಗೋಖಲೆ, ಸಕ್ಷಮ ಹುಬ್ಬಳ್ಳಿ ಘಟಕದ ಅಧ್ಯಕ್ಷ ನಾಗಲಿಂಗ ಮುರಗಿ ಇದ್ದರು.

ಸ್ಕೇಟಿಂಗ್‌: ಸಿಯಾಗೆ ಕಂಚು

ಹುಬ್ಬಳ್ಳಿ: ಭಾರತ ರೋಲರ್‌ ಸ್ಕೇಟಿಂಗ್‌ ಫೆಡರೇಷನ್‌ ಪಂಜಾಬ್‌ನ ಮೊಹಾಲಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಚೊಚ್ಚಲ ಇಂಡಿಯಾ ಸ್ಕೇಟ್‌ ರೋಲರ್‌ ಗೇಮ್ಸ್‌ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಸಿಯಾ ಅಜಯ ನಾಗರಾಳ ಕಂಚಿನ ಪದಕ ಜಯಿಸಿದ್ದಾಳೆ.

ಹುಬ್ಬಳ್ಳಿ ರೋಲರ್‌ ಸ್ಕೇಟಿಂಗ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಸಿಯಾ 5ರಿಂದ 7 ವರ್ಷದ ಒಳಗಿನವರ ಬಾಲಕಿಯರ ವಿಭಾಗದ ಇನ್‌ಲೈನ್‌ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾಳೆ.

ಉತ್ತಮ ಸಾಧನೆ

ಹುಬ್ಬಳ್ಳಿ: ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯದಲ್ಲಿ ಇದೇ ಮಾರ್ಚ್‌ನಲ್ಲಿ ನಡೆದ ಬಿ.ಎ.ಎಂ.ಎಸ್. ಪದವಿ ಕೋರ್ಸ್‌ನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಪ್ರಥಮ ವರ್ಷದ ಬಿ.ಎ.ಎಂ.ಎಸ್. ಕೋರ್ಸ್‌ನಲ್ಲಿ ಮಯೂರ ಮೋಹಿತೆ, ವಿನಾಯಕ ಮುಜುಮದಾರ, ದ್ವೀತಿಯ ವರ್ಷದಲ್ಲಿ ಹರ್ಷಿತಾ ಭಂಡಾರೆ, ಜೀವಿತಾ ತಾಪ್ಸೆ, ಮಾನಸಾ ಪಾಟೀಲ, ಸೌಖ್ಯಾ ಹಿರೇಮಠ, ಸೌರಭ ಮಿರಾಜೆ, ತೃತೀಯ ವರ್ಷದಲ್ಲಿ ಸ್ನೇಹಾ ಕೆ.ಎಚ್, ಸೌಜನ್ಯಾ ತಮ್ಮಣಗೌಡರ, ಸುಪ್ರೀತಾ, ವೇದಾ ಕಡ್ಡಿ ಅವರು ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮಟ್ಟದಲ್ಲಿ ಡಿಸ್ಟಿಂಕ್ಷನ್‌ ಪಡೆದಿದ್ದಾರೆ.

ವಿ.ವಿ. ನಡೆಸಿದ ಶಲ್ಯತಂತ್ರ ವಿಭಾಗದ ಸ್ನಾತಕ ಪದವಿ ಕೋರ್ಸ್‌ನಲ್ಲಿ ಡಾ. ಪ್ರಿಯಾಂಕಾ ನಾರಾಯಣ ಕೊನೊ 8ನೇ ರ್‍ಯಾಂಕ್‌, ಡಾ. ವಿಶಾಲಕುಮಾರ 10ನೇ ರ್‍ಯಾಂಕ್‌, ಡಾ. ಅಪೂರ್ವಾ ಕೋಟೇಶ್ವರ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

ಶಾರೀರ ರಚನಾ ವಿಭಾಗದಲ್ಲಿ ಡಾ. ಸಂದೀಪ ಕುರಡೆ 10ನೇ ರ್‍ಯಾಂಕ್‌, ರೋಗನಿಧಾನ ವಿಭಾಗದಲ್ಲಿ ಡಾ. ಪ್ರಿಯಾಂಕಾ ಕಲ್ಲಿಹಾಳ 8ನೇ ರ್‍ಯಾಂಕ್‌, ಮೌಲಿಕ ಸಿದ್ದಾಂತ ವಿಭಾಗದಲ್ಲಿ ಡಾ. ಪ್ರಿಯಾಂಕಾ ಡಿಸ್ಟಿಂಕ್ಷನ್‌ನಲ್ಲಿ ಸಾಧನೆ ಮಾಡಿದ್ದಾರೆ.

ಸಹಾಯಧನಕ್ಕೆ ಅರ್ಜಿ ಆಹ್ವಾನ

ಹುಬ್ಬಳ್ಳಿ: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹಣ್ಣು (ಬಾಳೆ), ಹೂ (ಬಿಡಿ ಸೇವಂತಿಗೆ, ಗುಲಾಬಿ, ಚೆಂಡು ಹೂ ಸುಗಂಧರಾಜ) ಹಾಗೂ ತರಕಾರಿಗಳ ಹೊಸ ಪ್ರದೇಶ ವಿಸ್ತರಣೆ, ನೀರು ಸಂಗ್ರಹಣಾ ಘಟಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಸಹಾಯಧನಕ್ಕಾಗಿ ತೋಟಗಾರಿಕೆ ಇಲಾಖೆಯು ಕುಂದಗೋಳ ತಾಲ್ಲೂಕಿನ ರೈತರಿಂದ ಅರ್ಜಿ ಆಹ್ವಾನಿಸಿದೆ .

ಜೂನ್ 8ರೊಳಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ಸಂಪರ್ಕ ಸಂಖ್ಯೆ: 08304 290538 ಸಂಪರ್ಕಿಸಿ.

ದಶಮಾನೋತ್ಸವ ಕಾರ್ಯಕ್ರಮ

ಹುಬ್ಬಳ್ಳಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಇದೀಗ ದಶಮಾನೋತ್ಸವ ಸಂಭ್ರಮದಲ್ಲಿದ್ದು, ಇದುವರೆಗೆ ಪರಿಷತ್ತಿನ ಅಧ್ಯಕ್ಷರಾದ ಎಲ್ಲಾ ಮಠಾಧೀಶ ಸಾಹಿತಿ
ಗಳನ್ನು ದಶಮಾನೋತ್ಸವ ಸಂಭ್ರಮಕ್ಕೆ ಆಮಂತ್ರಿಸುವ ಕಾರ್ಯಕ್ರಮ ರೂಪಿಸಲಾಗಿದೆ.

ನಗರದ ಮೂರು ಸಾವಿರ ಮಠದಲ್ಲಿ ಜೂನ್ 19ರಂದು ಬೆಳಿಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯ ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಕವಿಗಳು ಮತ್ತು ಬರಹಗಾರರು‌ ಪಾಲ್ಗೊಳ್ಳಲಿದ್ದಾರೆ. ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮೇ 19ರಂದು ಅಂಬಲ್ ಪಾಡಿ ದೇವಸ್ಥಾನದ ಸಭಾಂಗಣದಲ್ಲಿ ತುಳು ಕನ್ನಡ ಸಾಮರಸ್ಯ ಕಾರ್ಯಕ್ರಮ, ಜೂನ್ 29ರಂದು ಬಾಗಲಕೋಟೆ ಸೀತಾಗಿರಿಯ ಇಂಚಗೇರಿ ಶಾಖಾಮಠದಲ್ಲಿ, ನಂತರದ ದಿನಗಳಲ್ಲಿ ಮುಂಡರಗಿ, ಕೊಪ್ಪಳ ಹಾಗೂ ಹಾವೇರಿ ಮಠಗಳಲ್ಲಿ ದಶಮಾನೋತ್ಸವ ಸಂಭ್ರಮ ವರ್ಷಪೂರ್ತಿ ಜರುಗಲಿದೆ ಎಂದು ಪರಿಷತ್‌ನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು,
ಸಂಘಟನಾ ಕಾರ್ಯದರ್ಶಿ ಅನಂತ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT