ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಕ್ರಾಂತಿ ಸಂಭ್ರಮ’ದಲ್ಲಿ ಸಂಸ್ಕೃತಿ ಅನಾವರಣ

ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ, ಎಳ್ಳುಬೆಲ್ಲ ಕೊಟ್ಟು ಶುಭಾಶಯ ವಿನಿಮಯ
Published 15 ಜನವರಿ 2024, 15:53 IST
Last Updated 15 ಜನವರಿ 2024, 15:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಚವಾಣ್ ಗ್ರೀನ್ ಗಾರ್ಡನ್‌ನಲ್ಲಿ ಗ್ರಾಮೀಣ ಸಂಸ್ಕೃತಿ ಅನಾವರಣಗೊಂಡಿತು. ಮಕ್ಕಳು ಕುದುರೆ ಸವಾರಿ ಮಾಡಿ ಸಂಭ್ರಮಿಸಿದರೆ, ಮಹಿಳೆಯರು ಸಾಂಪ್ರದಾಯಿಕ ಇಳಕಲ್ ಸೀರೆಯಲ್ಲಿ ಕಂಗೊಳಿಸಿದರು...

–ಇವು ಹುಬ್ಬಳ್ಳಿ ತಾಲ್ಲೂಕು ಬಣಜಿಗ ಸಂಘದಿಂದ ಸೋಮವಾರ ಏರ್ಪಡಿಸಿದ್ದ ‘ಸಂಕ್ರಾಂತಿ ಸಂಭ್ರಮ’ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು.

ಚಕ್ಕಡಿ, ಟ್ರ್ಯಾಕ್ಟರ್‌ಗಳ ಎದುರು ಯುವತಿಯರು ಸೆಲ್ಫಿ ತೆಗೆದುಕೊಂಡರು. ಖ್ಯಾತ ಗಾಯಕ ಶಂಭಯ್ಯ ಹಿರೇಮಠ ತಂಡದವರು ಪ್ರಸ್ತುತಪಡಿಸಿದ ಜಾನಪದ ಗೀತೆಗಳ ಗಾಯನ ಮನಸೂರೆಗೊಂಡಿತು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಭಂಡಿವಾಡ– ಅಣ್ಣಿಗೇರಿಯ ಗಿರೀಶ ಆಶ್ರು,ದ ಎ.ಸಿ.ವಾಲಿ ಮಹಾರಾಜರು ಮಾತನಾಡಿ, ‘ದಾನ, ಧರ್ಮದಲ್ಲಿ ಬಣಜಿಗ ಸಮಾಜದವರು ಸದಾ ಮುಂದೆ ಇರುತ್ತಾರೆ.  ಶಿಕ್ಷಣ ಪಡೆಯಲು ಸಾಧ್ಯವಾಗದ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಮಾಜದ ಸಂಘಗಳು ಮುಂದಾಗಬೇಕು’ ಎಂದರು.

ರಾಯನಾಳ ವಿರಕ್ತ ಮಠದ ಅಭಿನವ ರೇವಣಸಿದ್ಧ ಮಹಾಂತ ಸ್ವಾಮೀಜಿ ಮಾತನಾಡಿ, ‘ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳ ಆಚರಣೆಗೆ ವೈಜ್ಞಾನಿಕ ಹಿನ್ನೆಲೆ ಇದೆ. ಋತುಗಳಿಗೆ ಅನುಗುಣವಾಗಿ ಹಬ್ಬಗಳನ್ನು ಆಚರಣೆ ಮಾಡಲಾಗುತ್ತಿದ್ದು, ಅದರ ಅನುಸಾರ ಆಹಾರ ಪದ್ಧತಿ ರೂಢಿಸಿಕೊಂಡು ಬರಲಾಗಿದೆ’ ಎಂದು ಹೇಳಿದರು.

‘ಸಂಕ್ರಾಂತಿ ಹಬ್ಬವನ್ನು ಸುಗ್ಗಿ ಹಬ್ಬ ಎಂತಲೂ ಕರೆಯುತ್ತಾರೆ. ಗ್ರಾಮೀಣ ಭಾಗದಲ್ಲಿ ಜನರು ತಾವು ಬೆಳೆದ ಬೆಳೆಯನ್ನು ರಾಶಿ ಮಾಡಿ ಅದಕ್ಕೆ ಪೂಜೆ ಸಲ್ಲಿಸುತ್ತಾರೆ. ಮಕರ ಸಂಕ್ರಮಣದಂದು ಸೂರ್ಯ ತನ್ನ ಪಥ ಬದಲಿಸುತ್ತಾನೆ. ಅದೇ ರೀತಿ ನಮ್ಮ ಜೀವನದಲ್ಲಿಯೂ ಬದಲಾವಣೆಯ ಪಥ ಆರಂಭವಾಗಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಮಾತನಾಡಿ, ‘ದೇಶದ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವ ಇದೆ. ಸಂಕ್ರಾಂತಿ ಹಬ್ಬದಲ್ಲಿ ಎಳ್ಳು ಬೆಲ್ಲ ಕೊಟ್ಟು ಒಳ್ಳೆಯ ಮಾತನಾಡಬೇಕು ಎಂದು ಹೇಳಲಾಗುತ್ತದೆ. ಇಂದಿನ ಸಂದಿಗ್ದ  ಸ್ಥಿತಿಯಲ್ಲಿ ಬೇರೆಯವರಿಗೆ ಒಳ್ಳೆಯದು ಬಯಸುವ ಮನಸ್ಥಿತಿ ಎಲ್ಲರಲ್ಲಿಯೂ ಬೆಳೆಯಬೇಕು’ ಎಂದು ಹೇಳಿದರು.

‘ವೀರಶೈವ–ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳು ಒಂದಾಗಬೇಕು. ಬಣಜಿಗ ಸಮಾಜದ ತಾಲ್ಲೂಕು ಘಟಕ ಮಾದರಿ ಕೆಲಸ ಮಾಡುತ್ತಿದೆ. ಇದನ್ನು ನೋಡಿ ರಾಜ್ಯ ಮಟ್ಟದ ಸಂಘಟನೆಯೂ ತಪ್ಪುಗಳನ್ನು ತಿದ್ದಿಕೊಂಡು ಸಮಾಜದ ಸಂಘಟನೆಗೆ ಒತ್ತು ನೀಡಬೇಕು’ ಎಂದರು.

‘ಸಮಾಜದ ಸ್ಥಿತಿಗತಿ ಕುರಿತು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮೀಕ್ಷೆ ನಡೆಸುವ ಅಗತ್ಯ ಇದೆ. ಇದರಿಂದ ಸಮಾಜವನ್ನು ಒಗ್ಗೂಡಿಸಲು, ಪರಿಣಾಮಕಾರಿಯಾಗಿ ಸಂಘಟನೆ ಮಾಡಲು ಸಾಧ್ಯ’ ಎಂದು ಹೇಳಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಮಾಜದ ಒಳಿತಿಗೆ ಕಂಕಣಬದ್ಧವಾಗಿ ಕೆಲಸ ಮಾಡುತ್ತೇನೆ’ ಎಂದರು.

ಬೇರೆ ಬೇರೆ ಕಾರಗಳಿಗಾಗಿ ಸಮಾಜದವರು ಒಳಪಂಗಡಗಳ ಹೆಸರು ನಮೂದಿಸಿದ್ದಾರೆ. ಹೀಗಾಗಿ ಜಾತಿಜನಗಣತಿ ವರದಿ ಬಿಡುಗಡೆಯಾದರೆ ಇಡೀ ವೀರಶೈವ ಲಿಂಗಾಯತ ಸಮಾಜಕ್ಕೆ ಆಘಾತ ಎದುರಾಗುವ ಸಾಧ್ಯತೆ ಇದೆ. ಅಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಸಮಾಜಕ್ಕೆ ಶಕ್ತಿ ತುಂಬು ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಗ್ರಾಮೀಣ ಕ್ರೀಡೆಗಳಲ್ಲಿ ವಿಜೇತರಾದ ಮಕ್ಕಳು, ಸಾಂಪ್ರದಾಯಿಕ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಉದ್ಯಮಿಗಳಾದ ವಿಜಯಕುಮಾರ ಶೆಟ್ಟರ್‌, ವೀರೇಂದ್ರ ಕೌಜಲಗಿ, ಹುಬ್ಬಳ್ಳಿ ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ಆನಂದ ಉಪ್ಪಿನ, ಎಸ್.ವಿ.ಅಂಗಡಿ, ತಾರಾದೇವಿ ವಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT