ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತ್ತಗುಡ್ಡದ ಸಂಪತ್ತು ಧಕ್ಕೆಗೆ ಯತ್ನ: ಎಸ್‌.ಆರ್‌. ಹಿರೇಮಠ ಆರೋಪ

ಸಂಸದ ಶಿವಕುಮಾರ ಉದಾಸಿ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ವಿರುದ್ಧ ಎಸ್‌.ಆರ್‌. ಹಿರೇಮಠ ಆರೋಪ
Last Updated 25 ಜೂನ್ 2020, 10:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ವಲಯದ ಕ್ಷೇತ್ರವನ್ನು ನಿಯಂತ್ರಿಸಿ ಕೈಗಾಗಿಕೆಗಳಿಗೆ ಮತ್ತು ಅಭಿವೃದ್ಧಿಗೆ ಒತ್ತು ಕೊಡುವಂತೆ ಸಂಸದ ಶಿವಕುಮಾರ ಉದಾಸಿ ಮತ್ತು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅರಣ್ಯ ಸಚಿವ ಆನಂದ ಸಿಂಗ್ ಅವರಿಗೆ ಬತ್ರ ಬರೆದಿದ್ದಾರೆ. ಈ ಮೂಲಕ ಪ್ರಾಕೃತಿಕ ಸಂಪತ್ತಿಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಆರೋಪಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರೇಮಠ ‘ಔಷಧಿ ಸಸ್ಯಗಳನ್ನು ಹೊಂದಿರುವ ಕಪ್ಪತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬೇಕು ಎಂದು ಉದಾಸಿ ಹಾಗೂ ವಿರೂಪಾಕ್ಷಪ್ಪ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಪ್ರಾಕೃತಿಕ ಸಂಪತ್ತು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದ್ದು, ಜನಪ್ರತಿನಿಧಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು. ಒಂದು ವೇಳೆ ಗಣಿಗಾರಿಕೆಗೆ ಅನುಮತಿ ಕೊಟ್ಟರೆ ಕಪ್ಪತಗುಡ್ಡ ಹೋರಾಟ ಸಮಿತಿ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹೋರಾಟ ಮಾಡಲಾಗುವುದು’ ಎಚ್ಚರಿಸಿದರು.

‘ಉದಾಸಿ ಇದೇ ವರ್ಷದ ಫೆ. 24ರಂದು ಆನಂದ್‌ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಜಿಲ್ಲೆಯ ಹಿಂದುಳಿದ ತಾಲ್ಲೂಕುಗಳಾದ ಶಿರಹಟ್ಟಿ ಮತ್ತು ಮುಂಡರಗಿಯನ್ನು ಅಭಿವೃದ್ಧಿ ಮಾಡಲು ಮತ್ತು ಈ ಕ್ಷೇತ್ರಗಳ ಜನರ ಅಭಿವೃದ್ಧಿಯ ದೃಷ್ಟಿಯಿಂದ ಕಪ್ಪತಗುಡ್ಡದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಡಬೇಕು ಎಂದು ಆಗ್ರಹಿಸಿದ್ದಾರೆ. 244.15 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಕೇಂದ್ರ ಸರ್ಕಾರ ಅಧಿಸೂಚನೆಗೆ ಪರಿಗಣಿಸಿದರೆ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಲು ತೊಡಕು ಉಂಟಾಗುತ್ತದೆ ಎಂದು ಪತ್ರದಲ್ಲಿ ಬರೆದಿದ್ದಾರೆ’ ಎಂದು ಹಿರೇಮಠ ಪತ್ರ ತೋರಿಸಿದರು.

27ರಂದು ಸಭೆ: ಮಹಾರಾಷ್ಟ್ರದ ಜನಪರ ಚಿಂತಕ ಡಾ. ಆನಂದ ತೆಲತುಂಬ್ದೆ ಮತ್ತು ಮತ್ತಿತರರನ್ನು ಬಂಧಿಸಲಾಗಿದ್ದು, ಅವರನ್ನು ಬಿಡುಗಡೆ ಮಾಡಬೇಕು ಎಂದು ಹಿರೇಮಠ ಆಗ್ರಹಿಸಿದರು. ಬಂಧನ ವಿರೋಧಿಸಿ ಮತ್ತು ನ್ಯಾಯದ ಪರ ನಿಲ್ಲಲು ಯೋಜನೆಗಳನ್ನು ರೂಪಿಸಲು ಜೂನ್‌ 27ರಂದು ಧಾರವಾಡದಲ್ಲಿ ಸಿಟಿಜನ್‌ ಫಾರ್ ಡೆಮಾಕ್ರಸಿಯ (ಸಿಎಫ್‌ಡಿ) ವಾರ್ಷಿಕ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ನ್ಯಾಯದ ಸಂಕೇತವಾಗಿರುವ ಆನಂದ ಅವರ ಬಂಧನವನ್ನು ವಿಶ್ವವ್ಯಾಪಿಯಾಗಿ ಜನ ವಿರೋಧಿಸುತ್ತಿದ್ದಾರೆ. ಆದ್ದರಿಂದ ಜನಾಂದೋಲನ ಮಹಾಮೈತ್ರಿ ಮತ್ತು ಸಮಾನ ಮನಸ್ಕರ ಸಂಘಟನೆಗಳು ಸೇರಿಕೊಂಡು ಹೋರಾಟ ಮಾಡಲಾಗುವುದು. ಪ್ರತಿ ವರ್ಷದ ಮೇ 16ರಂದು ನ್ಯಾಯದ ದಿನವಾಗಿ ಆಚರಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT