ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ತಿಂಗಳು ರಸ್ತೆಗೆ 1,300 ಹೊಸ ವಾಹನ

Published 20 ಅಕ್ಟೋಬರ್ 2023, 5:47 IST
Last Updated 20 ಅಕ್ಟೋಬರ್ 2023, 5:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೊಸ ವಾಹನಗಳ ಖರೀದಿ ಭರಾಟೆ ಎಂದಿನಂತೆ ಮುಂದುವರಿದಿದ್ದು, ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಸರಾಸರಿ 1,300 ಹೊಸ ವಾಹನಗಳು ನೋಂದಣಿ ಆಗುತ್ತಿವೆ.

2022–23ನೇ ಸಾಲಿನಲ್ಲಿ ಕಾರು, ಬೈಕ್‌ ಸೇರಿ ಒಟ್ಟು 16 ಸಾವಿರ ಹೊಸ ವಾಹನಗಳು ನೋಂದಣಿಯಾಗಿವೆ. ಪ್ರಸಕ್ತ ಹಣಕಾಸು ವರ್ಷ ಸೆಪ್ಟೆಂಬರ್‌ ಅಂತ್ಯದವರೆಗೆ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಒಟ್ಟು 4.78 ಲಕ್ಷ ವಾಹನಗಳು ಇವೆ. ಅದರಲ್ಲಿ 15 ವರ್ಷ ಪೂರ್ಣವಾದ ವಾಹನಗಳು 1.80 ಲಕ್ಷದಷ್ಟಿವೆ. ಇಂತಹ ವಾಹನಗಳ ಪರೀಕ್ಷೆ, ನವೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಆರ್‌ಟಿಒ ಬಹುತೇಕ ಕಾರ್ಯವೆಲ್ಲವೂ ಆನ್‌ಲೈನ್‌ ಆಗಿದ್ದು, ನೋಂದಣಿ ಮಾಡಲು ಜನ ಸರದಿ ನಿಲ್ಲುವ ಅಗತ್ಯವಿಲ್ಲ. ನಿಗದಿತ ದಿನಾಂಕದಂದು ಕಡತಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಶುಲ್ಕ ಕೂಡಾ ಆನ್‌ಲೈನ್‌ನಲ್ಲೇ ಸಂದಾಯ ಆಗುತ್ತದೆ. ಬಹುತೇಕ ವಾಹನಗಳ ನೋಂದಣಿ ಕಾರ್ಯಕ್ಕಾಗಿ ವಾಹನಗಳ ಷೋ ರೂಮ್‌ನಿಂದಲೇ ಕಡತಗಳು ಸಲ್ಲಿಕೆಯಾಗಿ, ನೋಂದಣಿ ಸಂಖ್ಯೆಗಳನ್ನು ನೀಡಲಾಗುತ್ತಿದೆ.

ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಸದ್ಯ ವಾಹನಗಳಲ್ಲೇ ಅತಿಹೆಚ್ಚು 3.39 ಲಕ್ಷ ಬೈಕ್‌ಗಳಿವೆ. ಆನಂತರದ ಸ್ಥಾನದಲ್ಲಿ ಕಾರುಗಳ ಸಂಖ್ಯೆ ಒಟ್ಟು 53,700 ರಷ್ಟಿವೆ. ಸರಕುಗಳನ್ನು ಸಾಗಿಸುವ ಲಾರಿಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರತಿ ತಿಂಗಳು ಹೊಸದಾಗಿ ಲಾರಿಗಳು ನೋಂದಣಿ ಆಗುವುದು ಹಾಗೂ ನವೀಕರಣ ಮಾಡಿಕೊಳ್ಳುವುದು ನಿಯಮಿತವಾಗಿ ನಡೆಯುತ್ತಿದೆ. ಸದ್ಯ 27,935 ಲಾರಿಗಳು ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಓಡಾಡುತ್ತಿವೆ. ಆರ್‌ಟಿಒ ಕಚೇರಿಯಲ್ಲಿ ನೋಂದಣಿ ಆಗಿರುವ ಆಟೋಗಳು ಒಟ್ಟು 12 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿವೆ.

ಸರಕುಗಳನ್ನು ಸಾಗಿಸುವ ತ್ರಿಚಕ್ರ ವಾಹನಗಳ ಸಂಖ್ಯೆ 3,372 ರಷ್ಟಿದೆ. ಹಳದಿ ಬಣ್ಣದ ಫಲಕಗಳಿರುವ ಮೋಟರ್‌ ಕ್ಯಾಬ್‌ಗಳು ಒಟ್ಟು 2,983, ಸರ್ಕಾರಿ ಬಸ್‌ಗಳು 4,050, ಓಮ್ನಿ ಬಸ್‌ಗಳು 1,078, ಜೆಸಿಬಿ ಸೇರಿದಂತೆ ಭೂಮಿ ಅಗೆಯುವುದಕ್ಕೆ ಬಳಸುವ ಯಂತ್ರಗಳು 208, ಕ್ರೂಸರ್‌ನಂತಹ ಆರಕ್ಕಿಂತ ಹೆಚ್ಚು ಪ್ರಯಾಣಿಕರ ವಾಹನಗಳು 1,342 ಇವೆ. ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗುವ ಟ್ರ್ಯಾಕ್ಟರ್‌ಗಳು ಮತ್ತು ಟ್ರ್ಯಾಕ್ಟರ್‌ ಟ್ರೇಲರ್‌ಗಳಿಗೆ ಪ್ರತ್ಯೇಕ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಸದ್ಯ ಹುಬ್ಬಳ್ಳಿ ವ್ಯಾಪ್ತಿಯಲ್ಲಿ 10,253 ಕೃಷಿ ಕಾರ್ಯಕ್ಕೆ ಬಳಕೆಯಾಗುತ್ತಿರುವ ಟ್ರ್ಯಾಕ್ಟರ್‌ಗಳು ನೋಂದಣಿಯಾಗಿವೆ. ಟ್ರ್ಯಾಕ್ಟರ್‌ ಟ್ರೇಲರ್‌ಗಳ ಸಂಖ್ಯೆ 5,367 ರಷ್ಟಿವೆ.

ಧಾರವಾಡ ಆರ್‌ಟಿಒ ವ್ಯಾಪ್ತಿಯಲ್ಲಿ ನೋಂದಣಿಯಾದ ವಾಹನಗಳು, ಅಕ್ಕಪಕ್ಕದ ಜಿಲ್ಲೆಗಳಿಂದ ಬರುವ ವಾಹನಗಳು ಹಾಗೂ ಹುಬ್ಬಳ್ಳಿ ಮೂಲಕ ಸಂಚರಿಸುವ ವಾಹನಗಳು ಸೇರಿ ಪ್ರತಿನಿತ್ಯ ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಸುಮಾರು7 ಲಕ್ಷಕ್ಕೂ ಅಧಿಕ ವಾಹನಗಳು ಓಡಾಡುತ್ತಿವೆ. ವಾಹನಗಳ ದಟ್ಟಣೆ ಆಗದಂತೆ ಸಂಚಾರ ನಿಯಂತ್ರಣ ಮಾಡುವುದು ಸಂಚಾರಿ ಪೊಲೀಸರಿಗೆ ಪ್ರತಿನಿತ್ಯವೂ ಸವಾಲು ಎನಿಸಿದೆ.

ಧಾರವಾಡದಿಂದ ಹುಬ್ಬಳ್ಳಿ ಆರ್‌ಟಿಓ ಕಚೇರಿ 2017ರಲ್ಲಿ ಪ್ರತ್ಯೇಕವಾಗಿದ್ದು, ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವುದು ಮತ್ತು ವಾಹನ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಚಾಲನಾ ಪರೀಕ್ಷಾ ಪಥ ಮಾತ್ರ ಎರಡು ಆರ್‌ಟಿಓ ಕಚೇರಿಗೂ ಸೇರಿ ಒಂದೇ ಇದೆ
ಕೆ.ದಾವೋದರ್‌, ಆರ್‌ಟಿಓ ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT