ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಶಾಲೆ; 17 ಸಾವಿರ ಕೊಠಡಿಗಳ ಕೊರತೆ

ರಾಜ್ಯದ 7 ಜಿಲ್ಲೆಯ ಶಾಲೆಗಳಲ್ಲಿ 1 ಸಾವಿರಕ್ಕೂ ಅಧಿಕ ಕೊಠಡಿ ಅವಶ್ಯಕತೆ: ಚಿತ್ರದುರ್ಗದಲ್ಲಿಯೇ ಹೆಚ್ಚು
Published 29 ಡಿಸೆಂಬರ್ 2023, 22:47 IST
Last Updated 29 ಡಿಸೆಂಬರ್ 2023, 22:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯದ ಹಲವಾರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಾಲಾ ಕೊಠಡಿಗಳ ಕೊರತೆ ಇದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಶಾಲೆಯ ಆವರಣ, ಕಟ್ಟೆ, ಗ್ರಾಮದ ಸಮುದಾಯ ಭವನಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಲಾಗುತ್ತದೆ.

ರಾಜ್ಯದಲ್ಲಿ 48,285 ಸರ್ಕಾರಿ ಶಾಲೆಗಳಿದ್ದು, 17,258 ಕೊಠಡಿಗಳ ಕೊರತೆ ಇದೆ. ರಾಜ್ಯದ 7 ಜಿಲ್ಲೆಗಳಲ್ಲಿ 1 ಸಾವಿರಕ್ಕೂ ಹೆಚ್ಚು ಕೊಠಡಿಗಳ ಕೊರತೆಯಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 1,664, ವಿಜಯನಗರ–1,159, ದಾವಣಗೆರೆ–1,160, ವಿಜಯಪುರ–1,144, ಬೆಳಗಾವಿ–1,089, ಕಲಬುರಗಿ- 1,025 ಮತ್ತು ರಾಯಚೂರು ಜಿಲ್ಲೆಯಲ್ಲಿ 1,023 ಕೊಠಡಿಗಳ ಕೊರತೆ ಇದೆ.

ಕೆಲವೆಡೆ ಶಾಲಾ ಕೊಠಡಿಗಳು ನಿರ್ಮಾಣ ಹಂತದಲ್ಲಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣ ಆಗಿಲ್ಲ. ಇದರ ಪರಿಣಾಮ ಕೆಲ ಕಡೆ ವಿದ್ಯಾರ್ಥಿಗಳು ಮೈದಾನದಲ್ಲಿ ಕೂತು ಪಾಠ ಆಲಿಸಬೇಕಾದ ಸ್ಥಿತಿಯಿದೆ. ಇನ್ನೂ ಕೆಲ ಕಡೆ ಮುಖ್ಯ ಶಿಕ್ಷಕರ ಕೊಠಡಿಯೇ ಇಲ್ಲದಂತಾಗಿದೆ. ಶಾಲಾ ಸಾಮಗ್ರಿಗಳನ್ನು ಒಂದು ಕೊಠಡಿಯಲ್ಲಿ ಇರಿಸಿ, ಅಲ್ಲಿಯೇ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ.

‘ಕಟ್ಟಡಗಳು ಹಳೆಯದಾಗಿದ್ದು, ಶಿಥಿಲಗೊಂಡಿವೆ. ಚಾವಣಿ ಬಿರುಕು ಬಿಟ್ಟಿದೆ. ಕೊಠಡಿಗಳ ಕೊರತೆ ಇರುವ ಕಾರಣ ಅನಿವಾರ್ಯವಾಗಿ ಕಟ್ಟಡದ ಹೊರಗೆ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ. ಮಳೆ, ಬಿಸಿಲಿನ ಸಂದರ್ಭದಲ್ಲಿ ನಿರ್ವಹಣೆ ಕಷ್ಟವಾಗುತ್ತದೆ’ ಎಂದು ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

‘2ರಿಂದ 3 ತರಗತಿಗಳ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಶಿಕ್ಷಕರು ಪಾಠ ಮಾಡುತ್ತಾರೆ. ಇದರಿಂದ ನಮಗೆ ಪಾಠ ಸರಿಯಾಗಿ ಅರ್ಥವಾಗುವುದಿಲ್ಲ. ಕೂರಲು ಸಹ ಕಷ್ಟವಾಗುತ್ತದೆ. ಶಾಲೆಗೆ ಭೇಟಿ ನೀಡುವ ಅಧಿಕಾರಿಗಳ ಬಳಿ ನಮ್ಮ ಸಮಸ್ಯೆ ತೋಡಿಕೊಂಡಿದ್ದೇವೆ. ಆದರೆ, ಈವರೆಗೆ ಅವರು ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ’ ಎಂದು ಬಾಗಲಕೋಟೆಯ ವಿದ್ಯಾರ್ಥಿಗಳು ಸಮಸ್ಯೆ ತೋಡಿಕೊಂಡರು.

ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಪ್ರಸಕ್ತ ಸಾಲಿನಲ್ಲಿ 7098 ಶಾಲೆಗಳಿಗೆ 9604 ಕೊಠಡಿ ನಿರ್ಮಿಲು ಕ್ರಮ ಕೈಗೊಳ್ಳಲಾಗಿದೆ
ಮಧು ಬಂಗಾರಪ್ಪ ಸಚಿವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ಧಾರವಾಡ ಜಿಲ್ಲೆಯಲ್ಲಿ 295 ಸರ್ಕಾರಿ ಶಾಲಾ ಕೊಠಡಿಗಳು ನಿರ್ಮಾಣ ಹಂತದಲ್ಲಿವೆ. ಫೆಬ್ರುವರಿಯೊಳಗೆ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಲಭ್ಯವಿರುವ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ
ಎಸ್‌.ಎಸ್‌. ಕೆಳದಿಮಠ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT