ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಚಂದ್ರ ಭಟ್‌ ಕಾಸಗೋಡ ಅವರಿಗೆ ಗೀತ–ನುಡಿ–ನಮನ

Last Updated 5 ಆಗಸ್ಟ್ 2019, 17:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಅನೇಕರು ಕಾರ್ಯಕರ್ತರಾಗಿ, ಸ್ವಯಂ ಸೇವಕರಾಗಿ ಸೇರ್ಪಡೆಗೊಳ್ಳುತ್ತಾರೆ. ಜೀವನ ಪರ್ಯಂತ ಇರುವುದಿಲ್ಲ. ಆದರೆ, ರಾಮಚಂದ್ರ ಭಟ್‌ ಕಾಸಗೋಡ ಅವರು ಬದುಕಿನ ಕೊನೆ ಕಾಲದವರೆಗೂ ಸಂಘದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದರು’ ಎಂದು ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು.

ಹಿರಿಯ ಸ್ವಯಂ ಸೇವಕ ರಾಮಚಂದ್ರ ಭಟ್‌ ಅವರ ಸ್ಮರಣಾರ್ಥ ಹುಬ್ಬಳ್ಳಿ–ಧಾರವಾಡ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೋಮವಾರ ನಗರದ ಕೇಶವಕುಂಜದಲ್ಲಿ ಹಮ್ಮಿಕೊಂಡಿದ್ದ ‘ಗೀತ–ನುಡಿ–ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾಷಣ, ಲೇಖನದಲ್ಲಿ ಇಲ್ಲದಿರುವ ಶಕ್ತಿ ಹಾಡಿನಲ್ಲಿರುತ್ತದೆ. ಹಾಡು ಭಾವನೆಯನ್ನು ಅರಳಿಸುತ್ತ, ಬದುಕಿಗೆ ದಿಕ್ಕು–ದೆಸೆ ಸೂಚಿಸುತ್ತದೆ. ಅಂತಹ ಹಾಡುಗಳನ್ನು ರಾಮಚಂದ್ರ ಭಟ್‌ ಅವರು ಭಾವನಾತ್ಮಕವಾಗಿ ಬರೆಯುತ್ತಿದ್ದರು’ ಎಂದರು.

‘ಬ್ಯಾಂಕ್‌ ಉದ್ಯೋಗಿಯಾಗಿದ್ದರೂ ಅವರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಅವರ ಕಾರ್ಯ ತತ್ಪರತೆ, ಸೇವಾ ಮನೋಭಾವ, ಅಹಂ ಇಲ್ಲದ ಬದುಕು, ಭಾಷೆಯ ಮೇಲಿನ ಹಿಡಿತ, ಜ್ಞಾನದ ಹರಿವು ಹಾಗೂ ಶಿಸ್ತು ಎಲ್ಲರಿಗೂ ಆದರ್ಶವಾಗಿದೆ. ಅವರು ಬದುಕಿದ ರೀತಿಗೆ, ನೀಡಿರುವ ಮಾರ್ಗದರ್ಶನಕ್ಕೆ ನಾವು ಕೃತಜ್ಞರಾಗಿರಬೇಕು’ ಎಂದು ಹೇಳಿದರು.

ಉತ್ತರ ಪ್ರಾಂತ ಸಹ ಕಾರ್ಯವಾಹ ಶ್ರೀಧರ ನಾಡಗೇರ ಮಾತನಾಡಿ, ‘ಭಟ್‌ ಅವರಿಗೆ ಭಾಷೆಯ ಮೇಲೆ ಅದ್ಭುತ ಹಿಡಿತವಿತ್ತು. ಅಷ್ಟೇ ಉತ್ತಮವಾಗಿ ಭಾಷಾಂತರ ಮಾಡುತ್ತಿದ್ದರು. ತಮ್ಮ ಪ್ರತಿಭೆಯನ್ನು ಸಂಘಕ್ಕಾಗಿಯೇ ಮುಡಿಪಿಟ್ಟ ಅಪರೂಪದ ವ್ಯಕ್ತಿ’ ಎಂದು ಅವರ ಜತೆ ಕಳೆದ ಕೆಲವು ಘಳಿಗೆಗಳನ್ನು ನೆನಪಿಸಿಕೊಂಡರು.

ಪತ್ರಕರ್ತ ಅಮೃತ ಜೋಶಿ ಮಾತನಾಡಿದರು. ರಾಮಚಂದ್ರ ಭಟ್‌ ಅವರು ರಚಿಸಿರುವ ಮೂರು ಹಾಡುಗಳನ್ನು ಮಂದಾರ ಚಿತಳೆ, ಅಮಿತ್ ಪಿ. ಹಾಗೂ ಪವನ್‌ ಹಾಡಿದರು. ಹುಬ್ಬಳ್ಳಿ–ಧಾರವಾಡ ಸಂಘ ಚಾಲಕ ಶಿವಾನಂದ ಆವಟೆ, ಡಾ. ಮಧುಸೂದನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT