ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ಧಾರೂಢ ಮಠ | ದಾಸೋಹಕ್ಕೆ ಸೋಲಾರ್‌: ಕಟ್ಟಿಗೆ ಉಳಿತಾಯ

Published 27 ಜೂನ್ 2024, 5:22 IST
Last Updated 27 ಜೂನ್ 2024, 5:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಸಿದ್ಧಾರೂಢ ಮಠದ ಪ್ರಸಾದ ನಿಲಯದ ಕಟ್ಟಡದ ಮೇಲ್ಭಾಗ ಅಳವಡಿಸಿರುವ ಸೋಲಾರ್‌ ಡಿಶ್‌ನಿಂದ ಪ್ರತಿ ತಿಂಗಳು ಲಕ್ಷಾಂತರ ಕ್ವಿಂಟಲ್ ಕಟ್ಟಿಗೆ ಉಳಿತಾಯ ಆಗುತ್ತಿದೆ. ಕಟ್ಟಿಗೆ ಬಳಕೆ ಪ್ರಮಾಣ ಶೇ 30 ಕಡಿಮೆಯಾಗಿದೆ.

ಶ್ರೀಮಠಕ್ಕೆ ಬರುವ ಅಪಾರ ಸಂಖ್ಯೆ ಭಕ್ತರಿಗೆ ಹಿಂದಿನಿಂದಲೂ ಕಟ್ಟಿಗೆ ಉರಿಯಿಂದ ಪ್ರಸಾದ ಸಿದ್ಧಪಡಿಸಲಾಗುತ್ತಿತ್ತು. ಅನ್ನ, ಸಾಂಬಾರು, ಸಿಹಿ ಸಿದ್ಧಪಡಿಸಲು ವರ್ಷಕ್ಕೆ 16 ಲಾರಿ ಕಟ್ಟಿಗೆ (ಅಂದಾಜು 115 ಟನ್‌) ಅಗತ್ಯವಿತ್ತು. ವರ್ಷದಿಂದ ವರ್ಷಕ್ಕೆ ಕಟ್ಟಿಗೆ ಪ್ರಮಾಣ ಹೆಚ್ಚಾಗುತಿತ್ತು. ಅಗತ್ಯಕ್ಕೆ ತಕ್ಕಷ್ಟು ಅದರ ಸಂಗ್ರಹ ಕಷ್ಟವಾಯಿತು. ಅದಕ್ಕೆ ಪರಿಹಾರವಾಗಿ, ಟ್ರಸ್ಟ್‌ ಸಮಿತಿಯ ಹಿಂದಿನ ಅಧ್ಯಕ್ಷ ಡಿ.ಡಿ. ಮಾಳಗಿ ಅವರು ಸೌರಶಕ್ತಿ ಅಳವಡಿಕೆಗೆ ನಿರ್ಧರಿಸಿ, ಅದನ್ನು ಜಾರಿಗೆ ತಂದರು.

2020ರ ಜೂನ್‌ 30ರಂದು ಕಾಮಗಾರಿ ಆರಂಭಿಸಿ ಆರು ತಿಂಗಳಲ್ಲಿ ಪೂರ್ಣಗೊಳಿಸಲಾಯಿತು. 2021ರ ಜನವರಿಯಿಂದ ದಾಸೋಹಕ್ಕೆ ಕಟ್ಟಿಗೆ ಜೊತೆಗೆ ಸೋಲಾರ್‌ ಅನ್ನು ಬಳಸಲು ಆರಂಭಿಸಲಾಯಿತು. ಪರಿಣಾಮ ಶ್ರೀಮಠದಲ್ಲಿ ಕ್ರಮೇಣ ದಾಸೋಹಕ್ಕೆ ಕಟ್ಟಿಗೆ ಮೇಲಿನ ಅವಲಂಬನೆ ಕಡಿಮೆಯಾಗಿದೆ.

‘ಬೆಳಗಾವಿಯ ಇನಿಸನ್‌ ಟೆಕ್ನಾಲಜಿ ಕಂಪನಿ ₹52 ಲಕ್ಷ ವೆಚ್ಚದಲ್ಲಿ 15 ಸೌರಶಕ್ತಿ ಡಿಶ್‌ಗಳನ್ನು ಅಳವಡಿಸಿದೆ. ನೂತನ ತಂತ್ರಜ್ಞಾನವಿರುವ ಈ ಸೌರಶಕ್ತಿ ವ್ಯವಸ್ಥೆಯಲ್ಲಿ, ಸೌರಶಕ್ತಿ ಸಂಗ್ರಹಿಸಿಟ್ಟುಕೊಳ್ಳುವ ಸಾಧನವಿಲ್ಲ. ಲೈವ್‌ ಸ್ಟೀಮಿಂಗ್‌ (ಆಗಾಗ್ಗೆ ಕಾರ್ಯನಿರ್ವಹಿಸುವ ತಂತ್ರಜ್ಞಾನ) ಮೂಲಕವೇ ಕಾರ್ಯ ನಡೆಯುತ್ತದೆ. ಗಾಜಿನ ಮೇಲೆ ಬಿದ್ದ ಬಸಿಲಿನ ಶಾಖ ರಿಸೀವರ್‌ ಮೂಲಕ ಕಬ್ಬಿಣದ ತಟ್ಟೆಗೆ ರವಾನೆಯಾಗಿ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಅದು ಕಾದು ಉಗಿ ಆಗುವಾಗ ಆ ಶಕ್ತಿಯಿಂದ ಅಡುಗೆ ಮಾಡುತ್ತೇವೆ’ ಎಂದು ಸೌರಶಕ್ತಿ ತಂತ್ರಜ್ಞಾನದ ಕುರಿತು ಶ್ರೀಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ಮಾಹಿತಿ ನೀಡಿದರು.

‘ಈ ಸೌರಶಕ್ತಿ ಶಾಖದಿಂದ ಪ್ರತಿ ದಿನ 5 ಸಾವಿರ ಮಂದಿಗೆ ಅಡುಗೆ ಮಾಡಬಹುದು. ಬಿಸಿಲು ಪ್ರಖರವಾಗಿದ್ದರೆ 25 ನಿಮಿಷದಲ್ಲಿ ಒಂದು ಕ್ವಿಂಟಲ್‌ ಅನ್ನ ಮಾಡಬಹುದು. ಡಿಸೆಂಬರ್‌ನಿಂದ ಜೂನ್‌ ಮೊದಲ ವಾರದವರೆಗೆ 3 ಕ್ವಿಂಟಲ್‌ ಅನ್ನ, 1 ಕ್ವಿಂಟಲ್‌ ಸಾಂಬಾರ್‌ ಮತ್ತು 1 ಕ್ವಿಂಟಲ್‌ ಸಿಹಿ ಮಾಡುತ್ತಿದ್ದೆವು. ಮಳೆಗಾಲದಲ್ಲಿ ಬಿಸಿಲಿನ ತಾಪಮಾನ ಕಡಿಮೆ ಆಗಿರುವುದರಿಂದ, ಸೌರಶಕ್ತಿ ಬಳಕೆ ಪ್ರಮಾಣ ಕಡಿಮೆಯಾಗಿದೆ’ ಎಂದು ಅವರು ತಿಳಿಸಿದರು.

ದಾಸೋಹಕ್ಕೆ ಪ್ರತಿ ದಿನ 7 ಕ್ವಿಂಟಲ್‌ ಕಟ್ಟಿಗೆ ಬೇಕಾಗುತಿತ್ತು. ಸೌರಶಕ್ತಿ ಡಿಶ್‌ ಅಳವಡಿಕೆಯಿಂದ ಕಟ್ಟಿಗೆ ಅವಲಂಬನೆ ಕಡಿಮೆಯಾಗಿದ್ದು ತ್ವರಿತವಾಗಿ ಅನ್ನ ಸಾಂಬಾರು ಮಾಡಬಹುದು.
-ಬಸವರಾಜ್‌ ಕಲ್ಯಾಣಶೆಟ್ಟರ್‌ ಚೇರ್‌ಮನ್‌ ಶ್ರೀ ಸಿದ್ಧಾರೂಢಮಠ ಟ್ರಸ್ಟ್‌ ಕಮಿಟಿ ಹುಬ್ಬಳ್ಳಿ

‘ಬೇಸಿಗೆಯಲ್ಲಿ ಸಮರ್ಪಕ ಬಳಕೆ’

‘ಪ್ರತಿದಿನ ದಾಸೋಹ ಬೆಳಿಗ್ಗೆ 11.30 ರಿಂದ ಆರಂಭವಾಗುತ್ತದೆ. ಕಟ್ಟಿಗೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಅನ್ನ ಸಾಂಬಾರು ಸಿಹಿ ಬೆಳಿಗ್ಗೆಯಿಂದಲೇ ಆರಂಭಿಸುತ್ತೇವೆ. ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗುವುದರಿಂದ ಸೌರಶಕ್ತಿ ಬಳಸುತ್ತೇವೆ. ಒಮ್ಮೊಮ್ಮೆ ತಕ್ಷಣ ಮೋಡ ಆವರಿಸಿದಾಗ ಸೌರಶಕ್ತಿ ಕಾರ್ಯ ಸ್ಥಗಿತವಾಗುತ್ತದೆ. ಆಗ ಕಟ್ಟಿಗೆ ಬಳಸಿ ಅಡುಗೆ ಮಾಡುತ್ತೇವೆ. ಮಳೆಗಾಲ ಹಾಗೂ ಚಳಿಗಾಲದ ಎರಡು ತಿಂಗಳು ಹೊರತುಪಡಿಸಿ ಉಳಿದ ಸಮಯದಲ್ಲಿ ಸೌರಶಕ್ತಿ ಅತಿ ಹೆಚ್ಚು ಬಳಕೆಯಾಗುತ್ತದೆ’ ಎಂದು ವ್ಯವಸ್ಥಾಪಕ ಈರಣ್ಣ ತುಪ್ಪದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT