ಧಾರವಾಡ: ವೃದ್ಧ ತಾಯಿಯನ್ನು ಕೊಲೆ ಮಾಡಿ ತಂದೆ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಅಣ್ಣಿಗೇರಿ ತಾಲ್ಲೂಕು ಬೆನ್ನೂರಿನ ಬಸವರಾಜ ಕಲ್ಲಪ್ಪ ಅಣ್ಣಿಗೇರಿಗೆ ಜೀವಾವಧಿ ಶಿಕ್ಷೆಯನ್ನು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ವಿಧಿಸಿದೆ.
ನ್ಯಾಯಾಧೀಶ ಎನ್.ಸುಬ್ರಮಣ್ಯ ಆದೇಶ ನೀಡಿದ್ದಾರೆ.
ಏನಿದು ಪ್ರಕರಣ: 2022ರ ಮೇ 1ರಂದು ಬಸವರಾಜ, ತಾಯಿಯನ್ನು ಕೊಲೆ ಮಾಡಿದ್ದ ಪ್ರಕರಣ ನಡೆದಿತ್ತು. ಕುಟುಂಬದ ಎಲ್ಲ ಆಸ್ತಿ ತನ್ನ ಹೆಸರಿಗೆ ಮಾಡಿಕೊಡುವಂತೆ ಬಸವರಾಜ ತಂದೆ–ತಾಯಿ ಜೊತೆ ಜಗಳವಾಡಿ ಅವರಿಗೆ ಥಳಿಸಿದ್ದ. ಗ್ರಾಮದ ಹಿರಿಯರು ಬುದ್ಧಿವಾದ ಹೇಳಿ ಎರಡೂವರೆ ಎಕರೆ ಜಮೀನನ್ನು ಅವನ ಪಾಲಿಗೆ ಭಾಗ ಮಾಡಿಕೊಟ್ಟಿದ್ದರು. ಬಾಕಿ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಹಠ ಹಿಡಿದು ಪದೇಪದೇ ಹೆತ್ತವರ ಜೊತೆ ಜಗಳ ಮುಂದುವರೆಸಿದ್ದ.
2022ರ ಮೇ 1ರಂದು ಅವನು ತಂದೆಗೆ ಹೊಡೆಯುವಾಗ ತಾಯಿ ಬಿಡಿಸಲು ಮುಂದಾಗಿದ್ದಾರೆ. ಆಗ ತಾಯಿಗೆ ಹೊಡೆದು ಕೊಲೆ ಮಾಡಿದ್ದ. ಬಸವರಾಜ ತಂದೆ ಅಣ್ಣಿಗೇರಿ ಠಾಣೆಯಲ್ಲಿ ದೂರು ನೀಡಿದ್ದರು. ಇನ್‌ಸ್ಪೆಕ್ಟರ್ ಸಿ.ಜಿ. ಮಠಪತಿ ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಶಾಂತ್ ಎಸ್. ತೋರಗಲ್ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.