ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಹೂಡಿಕೆ ವಲಯ ಅಭಿವೃದ್ಧಿ: ಅಶ್ವತ್ಥನಾರಾಯಣ

ಬೆಳಗಾವಿಯಲ್ಲಿ ₹150 ಕೋಟಿ ವೆಚ್ಚದಲ್ಲಿ ತಂತ್ರಜ್ಞಾನ ವಿನ್ಯಾಸ ಕೇಂದ್ರ ಸ್ಥಾಪನೆ
Last Updated 3 ಅಕ್ಟೋಬರ್ 2022, 15:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯದಲ್ಲಿ ಉದ್ಯಮಗಳನ್ನು ಬೆಳೆಸಲುತ್ವರಿತಗತಿಯಲ್ಲಿ ವಿಶೇಷ ಹೂಡಿಕೆ ವಲಯಗಳನ್ನು ಅಭಿವೃದ್ಧಿಪಡಿಸುವ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗುವುದು’ ಎಂದು ಐಟಿ, ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್(ಕೆಡಿಇಎಂ) ನಗರದ ಡೆನಿಸನ್ಸ್ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಬಿಯಾಂಡ್ ಬೆಂಗಳೂರು (ಹುಬ್ಬಳ್ಳಿ-ಧಾರವಾಡ, ಬೆಳಗಾವಿ) ಟೆಕ್ಸಿಲರೇಷನ್- 2022 ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಬೆಳಗಾವಿಯಲ್ಲಿ ₹150 ಕೋಟಿ ವೆಚ್ಚದಲ್ಲಿ ಗ್ಲೋಬಲ್ ಎಮರ್ಜಿಂಗ್ ಟೆಕ್ನಾಲಜಿ ಡಿಸೈನ್ ಸೆಂಟರ್ ಸ್ಥಾಪನೆಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಕ್ಲಸ್ಟರ್‌ನ 500 ಎಕರೆಯಲ್ಲಿ ದೇಶದ ಮೊದಲ ವಿದ್ಯುತ್ ವಾಹನಗಳ ಕ್ಲಸ್ಟರ್ ಮತ್ತು ನವೋದ್ಯಮಗಳ ಹಬ್‌ ಅಭಿವೃದ್ಧಿಪಡಿಸಲಾಗುವುದು’ ಎಂದರು.

ಸಕಾರಾತ್ಮಕ ಬೆಳವಣಿಗೆ: ‘ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಸಾಕಾರಗೊಳ್ಳುವ ನಿಟ್ಟಿನಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ. ಕಾರವಾರದ ಬೆಲೆಕೇರಿ ಬಂದರು ಅಭಿವೃದ್ಧಿ ಬಗ್ಗೆಯೂ ಚಿಂತನೆ ನಡೆಯುತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

‘ಪ್ರಧಾನಿ ಮೋದಿ ಅವರು 2047ರ ಹೊತ್ತಿಗೆ ದೇಶವು 32 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕೆಂಬ ಗುರಿ ಹೊಂದಿದ್ದಾರೆ. ಅದಕ್ಕಾಗಿ, ಅಧಿಕಾರಶಾಹಿ ಮತ್ತು ಉದ್ಯಮಿಗಳು ತಮ್ಮ ಮನೋಭಾವ ಬದಲಿಸಿಕೊಳ್ಳಬೇಕು. ಬೆಂಗಳೂರು ಮೋಹ ಬಿಡಬೇಕು’ ಎಂದರು.

ಶಾಸಕ‌ ಅರವಿಂದ ಬೆಲ್ಲದ, ‘ಪ್ರತಿ ನಗರಕ್ಕೂ ಅದರದ್ದೇ ವಿಶೇಷತೆ ಇದೆ. ನಾವು ಬೆಂಗಳೂರು ಸೇರಿದಂತೆ ಯಾವ ನಗರವನ್ನೂ ಅನುಕರಿಸದೆ, ಹುಬ್ಬಳ್ಳಿ-ಧಾರವಾಡದ ವಿಶೇಷತೆಯನ್ನು ಉಳಿಸಿಕೊಂಡು ಅಭಿವೃದ್ಧಿ ಸಾಧಿಸಬೇಕಿದೆ’ ಎಂದು ತಿಳಿಸಿದರು.

ಸಚಿವ ಶಂಕರ ಮುನೇನಕೊಪ್ಪ, ಕೆಡಿಇಎಂ ಮುಖ್ಯಸ್ಥ ಬಿ.ವಿ. ನಾಯ್ಡು, ಐಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್, ವೆಂಚರ್ ಕ್ಯಾಪಿಟಲಿಸ್ಟ್ ರವೀಂದ್ರ ಕೃಷ್ಣಪ್ಪ, ಕ್ರೆಡಾಯ್ ಅಧ್ಯಕ್ಷ ಚೈತನ್ಯ ಕುಲಕರ್ಣಿ, ನಾಸ್ಕಾಂ ಕರ್ನಾಟಕದ ಮುಖ್ಯಸ್ಥ ಭಾಸ್ಕರ ವರ್ಮ, ಕಿಂಡ್ರಲ್ ಇಂಡಿಯಾ ಮುಖ್ಯಸ್ಥ ಲಿಂಗರಾಜ ಸಾವಕಾರ ಇದ್ದರು.

‘ಟೆಕ್ ಪಾರ್ಕ್ ಸ್ಥಾಪನೆ’

‘ಬೆಂಗಳೂರಿನ ಐಟಿಪಿಬಿ ಮಾದರಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲೂ 20 ಸಾವಿರ ಜನ ಕೆಲಸ ಮಾಡುವಂತಹ ಟೆಕ್‌ಪಾರ್ಕ್ ಸ್ಥಾಪಿಸಲಾಗುವುದು. ಹುಬ್ಬಳ್ಳಿ ಕ್ಲಸ್ಟರ್ ಸೀಡ್‌ ಫಂಡ್‌ಗೆ ₹25 ಕೋಟಿ ನೀಡಲಾಗಿದ್ದು,ಕರ್ನಾಟಕ ಸ್ಟಾರ್ಟ್‌ಅಪ್ ಹಬ್‌ನಡಿ 5 ಸಾವಿರ ನವೋದ್ಯಮಗಳಿಗೆ ವಿಶ್ವದರ್ಜೆಯ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ಸಚಿವ ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಚೇರಿ ಉದ್ಘಾಟನೆ: ಅಮೆರಿಕದ ಪೆನ್ಸಿಲ್ವೇನಿಯಾ ಪ್ರಾಂತ್ಯದ ವೇನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಕ್ಸಲರೇಟ್ ಬಹುರಾಷ್ಟ್ರೀಯ ಕಂಪನಿಯು ದೇಶಪಾಂಡೆ ಫೌಂಡೇಷನ್‌ನಲ್ಲಿ ಆರಂಭಿಸಿರುವ ಸ್ಥಳೀಯ ಕಚೇರಿಯನ್ನು ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಉದ್ಘಾಟಿಸಿದರು. ಪತ್ರಕರ್ತ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.

ಅಧಿಕಾರಶಾಹಿ ಅಸಹಕಾರ: ಶೆಟ್ಟರ್

‘ರಾಜ್ಯದಲ್ಲಿ ಉದ್ಯಮಗಳ ಸ್ಥಾಪನೆಗೆ ಅಧಿಕಾರಶಾಹಿ ವರ್ಗ ಪೂರಕವಾಗಿ ಸಹಕರಿಸುತ್ತಿಲ್ಲ. ಸಂಬಂಧಿಸಿದ ಕೆಲಸಗಳನ್ನು ತ್ವರಿತವಾಗಿ ಮಾಡುತ್ತಿಲ್ಲ. ವ್ಯವಸ್ಥೆಯನ್ನು ಮೊದಲು ಸರಿಪಡಿಸಬೇಕಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

‘ಹುಬ್ಬಳ್ಳಿ ಇನ್ಫೊಸಿಸ್ ಕ್ಯಾಂಪಸ್‌ನಲ್ಲಿ ಕೇವಲ ಶೇ 10ರಷ್ಟು ಮಂದಿ‌ ಕೆಲಸ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕೆಲಸ ಮಾಡುವ ನಿಟ್ಟಿನಲ್ಲಿ ಸಚಿವರು ಕಂಪನಿ ಜೊತೆ ಮಾತನಾಡಬೇಕು. ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಅಭಿವೃದ್ಧಿ ನಿಟ್ಟಿನಲ್ಲಿ ಎಸ್‌ಐಆರ್ (ವಿಶೇಷ ಪ್ರಾಂತ್ಯ ಹೂಡಿಕೆ) ಮಸೂದೆಗೆ ಸಚಿವರು ಸಂಪುಟದಲ್ಲಿ ಒಪ್ಪಿಗೆ ಪಡೆಯಬೇಕು. ಇದರಿಂದ ಈ ಭಾಗದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT