ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ: 75ರ ವಯಸ್ಸಿನಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡಿ ಆಶಾಭಾವ ಮೂಡಿಸುವ ವೈದ್ಯ

Published 1 ಜುಲೈ 2024, 6:11 IST
Last Updated 1 ಜುಲೈ 2024, 6:11 IST
ಅಕ್ಷರ ಗಾತ್ರ

ಮನೆಯೊಂದರ ದೊಡ್ಡ ಕಿಟಕಿ ಮುಂದೆ ನಿತ್ಯವೂ ಜನರ ಸರದಿ. ತಲೆನೋವು, ಎದೆನೋವು, ಕಾಲುನೋವು, ನೆಗಡಿ, ಕೆಮ್ಮು, ಜ್ವರ ಹೀಗೆ ಅನಾರೋಗ್ಯದಿಂದ ಬಳಲುವವರ ಸಾಲು ಇರುತ್ತದೆ. ನಿಶ್ಯಕ್ತಿ ಕಾಡಿದರೂ ಬೇಗನೇ ಗುಣಮುಖರಾಗುವ ಆಶಾಭಾವ ಅವರಲ್ಲಿ ಇರುತ್ತದೆ. ಇಂತಹ ನಂಬಿಕೆಯನ್ನು 5 ದಶಕಗಳಿಂದ ಜನರ ಮನದಲ್ಲಿ ಗಟ್ಟಿಯಾಗಿಸಿದ್ದು ಹೆಗಡೆ ಡಾಕ್ಟರ್

ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ವೈದ್ಯ ಕೃಷ್ಣ ಮಹಾಬಲೇಶ್ವರ ಹೆಗಡೆ ಬಗ್ಗೆ ಬಹುತೇಕ ಜನರಿಗೆ ನಂಬಿಕೆ. 1975ರಲ್ಲಿ ₹2ರ ಶುಲ್ಕಕ್ಕೆ ಚಿಕಿತ್ಸೆ ನೀಡುತ್ತಿದ್ದ ಅವರು ಇತ್ತೀಚೆಗೆ ಶುಲ್ಕವನ್ನು ₹ 20ಕ್ಕೆ ಏರಿಕೆ ಮಾಡಿದ್ದಾರೆ. ವಿಶೇಷವೆಂದರೆ, ಅವರ ಸೇವೆಗೆ ರಜೆ ಎಂಬುದು ಇಲ್ಲ.

ಹುಬ್ಬಳ್ಳಿಯ ಕೆಎಂಸಿಯಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಸಿದ ಕೃಷ್ಣ ಮಹಾಬಲೇಶ್ವರ ಹೆಗಡೆ  ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಮುಂಡಗೇಸರದವರು. ತಂದೆ ಹುಬ್ಬಳ್ಳಿಯಲ್ಲಿ ಸರ್ಕಾರಿ ನೌಕರರಾಗಿದ್ದು. ಇಲ್ಲಿಯೇ ನೆಲೆಸಿದರು. ಹೀಗಾಗಿ ಹೆಗಡೆ ಅವರು ಇಲ್ಲಿಯೇ ವೃತ್ತಿಜೀವನ ಆರಂಭಿಸಿದರು.

‘ಹೆಗಡೆ ಡಾಕ್ಟರ್ ನೋಡಿದರೆ, ಔಷಧಿ ಕೊಟ್ಟರೆ ಅದೇನೋ ಸಮಾಧಾನ. ಏಷ್ಟೋ ಸಲ ರೋಗಿಗಳ ಬಳಿ ದುಡ್ಡು ಇಲ್ಲವೆಂದರೆ, ಇವರೇ ಉಚಿತವಾಗಿ ತಪಾಸಣೆ ಮಾಡಿ ಮನೆಗೆ ಹೋಗಲು ಹಣವನ್ನೂ ನೀಡಿದ್ದಾರೆ’ ಎಂದು ರೋಗಿಯೊಬ್ಬರನ್ನು ಕರೆ ತಂದ ಹಿರಿಯರೊಬ್ಬರು ತಿಳಿಸಿದರು.

ಜನರಿಕ್ ಔಷಧಿ ಕೇಂದ್ರಗಳಲ್ಲಿ ಸಗಟು ಬೆಲೆಯಲ್ಲಿ ಔಷಧಿ ತರುವ ಅವರು, ಸಮಾಲೋಚನೆಗೆಂದು ಹಣ ಪಡೆಯಲ್ಲ. ಕೋವಿಡ್‌ ವ್ಯಾಪಿಸಿದ ದಿನಗಳಲ್ಲೂ ಅವರಿಗೆ ಹಲವರಿಗೆ ನಿರಂತರ ಚಿಕಿತ್ಸೆ ನೀಡಿದರು.

ಹೆಗಡೆ ವೈದ್ಯರ ಬತ್ತದ ಸೇವಾ ಉತ್ಸಾಹಕ್ಕೆ ಅವರ ಪತ್ನಿ ಬೆಂಬಲವಾಗಿದ್ದಾರೆ. ಅವರ ಮಗ ಬೆಂಗಳೂರಿನಲ್ಲಿ ರೇಡಿಯೊಲಾಜಿಸ್ಟ್, ಮಗಳು ಶ್ರುತಿ ಹೆಗಡೆ ಈಚೆಗೆ ನಡೆದ ಮಿಸ್ ಯುನಿವರ್ಸಲ್ ಪೆಟೀಟ್ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಕೀರಿಟ ಮುಡಿಗೇರಿಸಿಕೊಂಡಿದ್ದಾರೆ. ಅವರು ತುಮಕೂರಿನ ಡರ್ಮಟಾಲಾಜಿಯಲ್ಲಿ ಎಂ.ಡಿ ಮಾಡುತ್ತಿದ್ದಾರೆ.

ಕೃಷ್ಣ ಮಹಾಬಲೇಶ್ವರ ಹೆಗ್ಡೆ
ಕೃಷ್ಣ ಮಹಾಬಲೇಶ್ವರ ಹೆಗ್ಡೆ
₹2ರಿಂದ ಆರಂಭವಾದ ಸೇವೆ
‘1975ರ ಹೊತ್ತಿಗೆ ಉಣಕಲ್ ತೀರಾ ಸಣ್ಣ ಹಳ್ಳಿ. ಆಗ ಹತ್ತಿರದಲ್ಲಿ ಯಾವ ಆಸ್ಪತ್ರೆಯೂ ಇರಲಿಲ್ಲ. ಟೆಲಿಫೋನ್ ವಾಹನ ಯಾವುದರ ಸೌಲಭ್ಯವೂ ಇರಲಿಲ್ಲ. ಆಗ ಮನೆ ಮನೆಗೆ ತೆರಳಿ ಚಿಕಿತ್ಸೆ ಕೊಟ್ಟು ಬರುತ್ತಿದ್ದೆ. ಕೆಲ ವರ್ಷಗಳ ನಂತರ ಲೂನಾ ತೆಗೆದುಕೊಂಡೆ. ₹2 ರೂಪಾಯಿಯಿಂದ ಸೇವೆ ಆರಂಭಿಸಿದ್ದೆ. ನಂತರ ₹5 ಮಾಡಿದ್ದೆ. ಈಚೆಗೆ ₹20 ತೆಗೆದುಕೊಳ್ಳುತ್ತಿದ್ದೇನೆ. ಮೊದಲೆಲ್ಲ ದಿನದ 24 ಗಂಟೆಯೂ ರೋಗಿಗಳನ್ನು ನೋಡುತ್ತಿದ್ದೆ. ಈಗ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನೋಡುತ್ತೇನೆ. ಮಧ್ಯಾಹ್ನ 3ರಿಂದ 5 ವಿರಾಮ ಸಮಯ. ಅದೇ ಸಮಯದಲ್ಲಿ ನನ್ನ ಇತರೇ ಮನೆಗೆಲಸ ಮಾಡಿಕೊಳ್ಳುತ್ತೇನೆ. ಕೆಲವೊಮ್ಮೆ ರೋಗಿಗಳ ಸಂಖ್ಯೆ ಹೆಚ್ಚಿದ್ದರೆ ಆ ಬಿಡುವು ಸಹ ಸಿಗುವುದಿಲ್ಲ. ದಿನಕ್ಕೆ ಕನಿಷ್ಠ 100 ಜನ ತಪಾಸಣೆಗೆ ಬರುತ್ತಾರೆ – ಕೃಷ್ಣ ಮಹಾಬಲೇಶ್ವರ ಹೆಗಡೆವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT