ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಶಾಲೆಗೆ ಗೈರು, ತರಬೇತಿಗೆ ಹಾಜರ್‌!

ಬಿಇಒಗಳಿಗೆ ಡಿಡಿಪಿಐ ಪತ್ರ; ವರದಿ ನೀಡಲು ಸೂಚನೆ
Last Updated 23 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಶಾಲಾ ಅವಧಿಯಲ್ಲಿ ಮಕ್ಕಳನ್ನು ತರಬೇತಿ ಕೇಂದ್ರಗಳಿಗೆ ಕಳುಹಿಸುತ್ತಿರುವ ಪಾಲಕರ ಸಂಖ್ಯೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ಮಕ್ಕಳನ್ನು ನವೋದಯ, ಮೊರಾರ್ಜಿ ಶಾಲೆಗಳಿಗೆ ಸೇರಿಸಬೇಕೆಂಬ ಒತ್ತಾಸೆಯಿಂದ ಪಾಲಕರು 5ನೇ ತರಗತಿ ಮಕ್ಕಳನ್ನು ವಸತಿ ಸಹಿತ ತರಬೇತಿ ಕೇಂದ್ರಗಳಿಗೆ ಸೇರಿಸುತ್ತಿದ್ದಾರೆ.

‘ಸರ್ಕಾರಿ, ಅನುದಾನಿತ ಹಾಗೂ ಅನುದಾನ‌ ರಹಿತ ಶಾಲೆಯ 5ನೇ ತರಗತಿ ಮಕ್ಕಳು ಶಾಲಾ ಅವಧಿಯಲ್ಲಿ ತರಬೇತಿ ಕೇಂದ್ರಕ್ಕೆ ತೆರಳುತ್ತಿದ್ದಾರೆ’ ಎಂದು ಕಲಘಟಗಿಯ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ, ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಮುಖೇನ ದೂರು ಸಲ್ಲಿಸಿದ್ದರು. ಅದರನ್ವಯ ಜಿಲ್ಲೆಯ ಎಲ್ಲ ಬಿಇಒಗಳಿಗೆ ಉಪನಿರ್ದೇಶಕರು ಪತ್ರ ಬರೆದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಆ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಉಪನಿರ್ದೇಶಕರ ಪತ್ರದ ಅನ್ವಯ ಶಿಕ್ಷಣ ಇಲಾಖೆ ಅಧಿಕಾರಿಗಳು ಕಲಘಟಗಿಯ ಒಂದೆರಡು ಸಣ್ಣಪುಟ್ಟ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯ ಕೆಲವು ಶಾಲೆಗಳಿಗೆ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿ, ಎಚ್ಚರಿಕೆ ನೀಡಿ ಬಂದಿದ್ದಾರೆ. ಅಂದಾಜು 400ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಗೈರಾಗಿ, ತರಬೇತಿ ಕೇಂದ್ರಕ್ಕೆ ತೆರಳುತ್ತಿದ್ದಾರೆ ಎನ್ನಲಾಗುತ್ತಿದೆ.ಆದರೆ, ಅವರನ್ನು ಮರಳಿ ಶಾಲೆಗೆ ಕರೆತರುವಲ್ಲಿ ಮಾತ್ರ ಶಿಕ್ಷಣ ಇಲಾಖೆಯಿಂದ ಸಾಧ್ಯವಾಗುತ್ತಿಲ್ಲ.

ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಎಚ್ಚರಿಕೆ ನೀಡಿರುವ ಬೆನ್ನಲ್ಲೆ, ಕೆಲವು ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಯ ಶಿಕ್ಷಕರು, ತರಬೇತಿಗೆ ಕಳುಹಿಸಿರುವ ಮಕ್ಕಳ ಪಾಲಕರ ಸಭೆ ನಡೆಸಿದ್ದಾರೆ. ‘ಮುಂದೆ ಎದುರಾಗುವ ಎಲ್ಲ ಸಮಸ್ಯೆಗಳಿಗೂ ನಾವೇ ಜವಾಬ್ದಾರರು’ ಎಂದು ಪಾಲಕರಿಂದ‌ ಮುಚ್ಚಳಿಕೆ ಸಹ ಬರೆಸಿಕೊಂಡಿದ್ದಾರೆ.

ಧಾರವಾಡ, ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಕುಂದಗೋಳ ಭಾಗದಲ್ಲಿ 40ಕ್ಕೂ ಹೆಚ್ಚು ತರಬೇತಿ ಕೇಂದ್ರಗಳಿವೆ. ಇವುಗಳಲ್ಲಿ 25ರಷ್ಟು ಕೇಂದ್ರಗಳಲ್ಲಿ ಮಕ್ಕಳಿಗೆ ವಸತಿ ಸಹಿತ ತರಬೇತಿ ನೀಡಲಾಗುತ್ತಿದೆ. ಒಂದು ವರ್ಷದ ವಸತಿ ಸಹಿತ ತರಬೇತಿಗೆ ಪಾಲಕರಿಂದ ₹80,000 ದಿಂದ ₹1ಲಕ್ಷದ ವರೆಗೆ ಪಡೆದರೆ, ತರಬೇತಿಯಷ್ಟೇ ಆದರೆ ₹30ಸಾವಿರದಿಂದ ₹40ಸಾವಿರ ಶುಲ್ಕ ಪಾವತಿಸಬೇಕು. ಹಣ ಪಾವತಿಸಿರುವ ಕುರಿತು ಪಾಲಕರಿಗೆ ಯಾವೊಂದು ರಶೀದಿ ನೀಡುವುದಿಲ್ಲ. ನೋಂದಣಿಯಾಗದೆ ಈ ಕೇಂದ್ರಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನುವ ಆರೋಪವೂ ಇದೆ.

‘ಅತ್ತ ಖಾಸಗಿ ಶಾಲೆ ಪ್ರವೇಶಕ್ಕೆ ₹30ಸಾವಿರ ಡೊನೇಷನ್, ಇತ್ತ ತರಬೇತಿ ಕೇಂದ್ರಕ್ಕೂ ₹1 ಲಕ್ಷದವರೆಗೆ ವೆಚ್ಚ ಮಾಡುವ ಪಾಲಕರ ಮನಸ್ಥಿತಿಯಿಂದಾಗಿ ಶಿಕ್ಷಣ ಎನ್ನುವುದು ದೊಡ್ಡ ಮಾಫಿಯಾ ಆಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇದರ ಮಾಹಿತಿಯಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಾರೆ. ಅವರ ನಿರ್ಲಕ್ಷ್ಯ ಮತ್ತು ಒಳ ಒಪ್ಪಂದದಿಂದಾಗಿ ಸರ್ಕಾರದ ನಿಯಮಾವಳಿ ಪಾಲನೆಯಾಗುತ್ತಿಲ್ಲ. ಉಳ್ಳವರ ಮಕ್ಕಳು ಸ್ಪರ್ಧಾತ್ಮಕ ತರಬೇತಿ ಪಡೆದು ನವೋದಯ, ಮೊರಾರ್ಜಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಾರೆ. ಬಡವರ ಮಕ್ಕಳು ಏನು ಮಾಡಬೇಕು’ ಎನ್ನುವುದು ಪ್ರಜ್ಞಾವಂತರ ಪ್ರಶ್ನೆ.

ಡಿಡಿಪಿಐ ಪತ್ರದಲ್ಲಿ ಏನಿದೆ?: ‘ಶಾಲಾ ಅವಧಿಯಲ್ಲಿ ಮಕ್ಕಳು ತರಬೇತಿ ಕೇಂದ್ರಗಳಿಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮತ್ತೆ ಅಂತಹ ಪ್ರಕರಣಗಳು ಕಂಡು ಬಂದರೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಧಾರವಾಡ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಡಿಡಿಪಿಐ ಎಸ್.ಎಸ್.ಕೆಳದಿಮಠ ಪತ್ರ ಬರೆದು ಎಚ್ಚರಿಸಿದ್ದಾರೆ.

‘ತಮ್ಮ ವ್ಯಾಪ್ತಿಯಲ್ಲಿನ ತರಬೇತಿ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇತರ ವೃಂದದ ಅಧಿಕಾರಿಗಳು, ಶಿಕ್ಷಣ ಸಂಯೋಜಕರು, ಬಿಆರ್‌ಪಿ, ಸಿಆರ್‌ಪಿಗಳು ಭೇಟಿ ನೀಡಬೇಕು. ಶಾಲಾ ಅವಧಿಯಲ್ಲಿ ತರಗತಿಗಳಿಗೆ ಗೈರು ಹಾಜರಾಗಿ, ತರಬೇತಿ‌ಗೆ ಹಾಜರಿರುವ ಮಕ್ಕಳ ವಿವರ ದಾಖಲಿಸಿ ವರದಿ ನೀಡಬೇಕು. ಶಾಲಾ ಅವಧಿಯಲ್ಲಿ ಎಲ್ಲಾ ಮಕ್ಕಳು ಶಾಲೆಯಲ್ಲಿಯೇ ಇರುವಂತೆ ಕ್ರಮಕೈಗೊಳ್ಳಬೇಕು. ಮಕ್ಕಳು ಶಾಲೆಗೆ ಬಾರದೆ, ಹಾಜರಿ ಹಾಕಿರುವ ಪ್ರಕರಣಗಳು ಕಂಡುಬಂದರೆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ತರಗತಿ ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸಿ ವರದಿ ನೀಡಬೇಕು. ತಮ್ಮ ವಲಯದಲ್ಲಿ ಅಂತಹ ಯಾವುದೇ ತರಬೇತಿ ಕೇಂದ್ರ ನಡೆಯುತ್ತಿಲ್ಲವೆಂದು ದೃಢೀಕರಣ ಪತ್ರ ನೀಡಬೇಕು’ ಎಂದು ಪತ್ರದಲ್ಲಿ ಅವರು ಸೂಚಿಸಿದ್ದಾರೆ.

*

ಶಾಲೆಗೆ ಗೈರಾಗಿ ತರಬೇತಿ ಕೇಂದ್ರಗಳಿಗೆ ಮಕ್ಕಳು ತೆರಳುವ ಮಾಹಿತಿ ಲಭ್ಯವಾಗಿದ್ದು, ಕೆಲವು ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸಿ ಬಂದ್‌ ಮಾಡಲಾಗಿದೆ. ಮತ್ತೊಮ್ಮೆ ಪರಿಶೀಲಿಸಿ ಕ್ರಮವಹಿಸಲಾಗುವುದು.

–ಸುರೇಶ ಇಟ್ನಾಳ್, ಸಿಇಒ, ಧಾರವಾಡ ಜಿಲ್ಲಾ ಪಂಚಾಯ್ತಿ

*

ಕಲಘಟಗಿ ಬಿಇಒ ಬಿಟ್ಟರೆ ಉಳಿದ ಬಿಇಒಗಳು ವರದಿ ಸಲ್ಲಿಸಿಲ್ಲ. ಶಾಲೆಗೆ ಗೈರಾಗುತ್ತಿರುವ ಮಕ್ಕಳ ಸಂಖ್ಯೆ ಸಂಗ್ರಹಿಸುತ್ತಿದ್ದೇವೆ. ಮಕ್ಕಳಿಗೆ ತರಬೇತಿ ನೀಡುವ ಕೇಂದ್ರಗಳು ನೋಂದಣಿಯಾಗಿರುವುದಿಲ್ಲ.

–ಎಸ್‌.ಎಸ್‌. ಕೆಳದಿಮಠ, ಡಿಡಿಪಿಐ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT