ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ಗೆ ಬರಲು ವಿದ್ಯಾರ್ಥಿಗಳ ಹಿಂದೇಟು

ಮನೆಯಲ್ಲೇ ಉಳಿದುಕೊಂಡು ಆನ್‌ಲೈನ್‌ ಪಾಠಕ್ಕೆ ಮೊರೆ; ಕೋವಿಡ್ ನೆಗೆಟಿವ್ ವರದಿ ತಂದವರಿಗೆ ಮಾತ್ರ ಪ್ರವೇಶ
Last Updated 2 ಡಿಸೆಂಬರ್ 2020, 15:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸರ್ಕಾರಿ ಹಾಸ್ಟೆಲ್‌ಗಳು ಬಾಗಿಲು ತೆರೆದು ಹದಿನೈದು ದಿನವಾಗುತ್ತಾ ಬಂದರೂ, ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಬರಲು ಉತ್ಸಾಹ ತೋರುತ್ತಿಲ್ಲ. ಕೊರೊನಾ ಕಾರಣದಿಂದಾಗಿ, ಬಹುತೇಕ ವಿದ್ಯಾರ್ಥಿಗಳು ಮನೆಯಲ್ಲಿದ್ದುಕೊಂಡೇ ಆನ್‌ಲೈನ್ ತರಗತಿಗಳ ಮೊರೆ ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಮೆಟ್ರಿಕ್ ನಂತರದ 41 ಮತ್ತು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 16 ಹಾಸ್ಟೆಲ್‌ಗಳಿವೆ. ಎರಡಂಕಿಯಿಂದ ಆರಂಭವಾದ ವಿದ್ಯಾರ್ಥಿಗಳ ಪ್ರವೇಶವೀಗ, ಮೂರಂಕಿ ತಲುಪಿದೆ. ಆದರೂ, ಒಟ್ಟು ಸಂಖ್ಯೆಗೆ ಹೋಲಿಸಿದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ.

‘ನಾವು 1,084 ವಿದ್ಯಾರ್ಥಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ. ಮಂಗಳವಾರದವರೆಗೆ 149 ವಿದ್ಯಾರ್ಥಿಗಳು ಮಾತ್ರ ಬಂದಿದ್ದಾರೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಧಾರವಾಡದ ಜಂಟಿ ನಿರ್ದೇಶಕ ಎನ್. ಪುರುಷೋತ್ತಮ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಪೈಕಿ, ಧಾರವಾಡದ ಸಪ್ತಾಪೂರದಲ್ಲಿರುವ ಹಾಸ್ಟೆಲ್‌ಗೆ ಅತಿ ಹೆಚ್ಚು 22 ವಿದ್ಯಾರ್ಥಿಗಳು ಬಂದಿದ್ದಾರೆ. ಹುಬ್ಬಳ್ಳಿಯ ಶಿರಡಿನಗರದಲ್ಲಿರುವ ಹಾಸ್ಟೆಲ್‌ನಲ್ಲಿ ಕೇವಲ ಮೂವರಷ್ಟೇ ಇದ್ದಾರೆ. ಹಾಸ್ಟೆಲ್‌ಗೆ ಬರುವುದು ವಿದ್ಯಾರ್ಥಿಗಳು ಮತ್ತು ಪಾಲಕರ ಆಯ್ಕೆಯಾಗಿದೆ. ಹಾಗಾಗಿ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ’ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಹೋಲಿಸಿದರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.

‘ಜಿಲ್ಲೆಯಲ್ಲಿರುವ ಬಿಸಿಎಂ ಇಲಾಖೆಯ 41 ಹಾಸ್ಟೆಲ್‌ಗಳಲ್ಲಿ ಸದ್ಯ 400 ವಿದ್ಯಾರ್ಥಿಗಳಿದ್ದಾರೆ. ಒಟ್ಟು 1,200 ಮಂದಿ ಉಳಿಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಮರು ಪ್ರವೇಶ ಪಡೆಯುವವರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ ಹೇಳಿದರು. ‘ಪೋಷಕರ ಒಪ್ಪಿಗೆ ಪತ್ರದ ಜತೆಗೆ, ಕೋವಿಡ್–19 ಪರೀಕ್ಷೆಯ ನೆಗೆಟಿವ್ ವರದಿ ತಂದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಗ್ರಾಮೀಣ ಭಾಗದ ಕೆಲ ವಿದ್ಯಾರ್ಥಿಗಳಿಗೆ ಪರೀಕ್ಷೆಯ ವರದಿ ಕೈ ಸೇರುವುದು ತಡವಾಗುತ್ತಿದೆ. ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಬರಲು ತಡವಾಗಲು ಇದೂ ಒಂದು ಕಾರಣವಾಗಿದೆ’ ಎಂದು ತಿಳಿಸಿದರು.

ನ. 17ರಂದು ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಆರಂಭವಾದ ಬೆನ್ನಲ್ಲೇ, ವಿದ್ಯಾರ್ಥಿಗಳು ಉಳಿದುಕೊಳ್ಳಲು ಹಾಸ್ಟೆಲ್‌ಗಳನ್ನು ಶುರು ಮಾಡಲಾಗಿದೆ.

ಕೋವಿಡ್ ಮುನ್ನೆಚ್ಚರಿಕೆ

ಹಾಸ್ಟೆಲ್‌ಗಳಲ್ಲಿ ಕೋವಿಡ್‌–19 ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂತರ ಕಾಯ್ದುಕೊಳ್ಳಬೇಕಿರುವುದರಿಂದ, 10 ವಿದ್ಯಾರ್ಥಿಗಳಿದ್ದ ಕೊಠಡಿಯಲ್ಲಿ 5 ಮಂದಿಗಷ್ಟೇ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿಯನ್ನೂ ಒಳಗೊಂಡಂತೆ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್‌ಬಳಕೆ ಕಡ್ಡಾಯಗೊಳಿಸಲಾಗಿದೆ.

‘ನಿತ್ಯ ಹಾಸ್ಟೆಲ್‌ ಕಟ್ಟಡವನ್ನು ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸಲಾಗುತ್ತಿದೆ. ಅನಗತ್ಯವಾಗಿ ಯಾರೂ ಹೊರಗೆ ಹೋಗುವಂತಿಲ್ಲ. ಅಪರಿಚಿತರೂ ಒಳಗೆ ಬರುವಂತಿಲ್ಲ. ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಎನ್. ಪುರುಷೋತ್ತಮ್ ಹೇಳಿದರು.

‘ಪ್ರತಿ ಹಾಸ್ಟೆಲ್‌ನಲ್ಲಿ ಐಸೊಲೇಷನ್ ಕೊಠಡಿ ಇದ್ದು, ಕೊರೊನಾ ಲಕ್ಷಣಗಳು ಕಾಣಿಸಿಕೊಳ್ಳುವ ವಿದ್ಯಾರ್ಥಿಯನ್ನು ಅಲ್ಲಿ ಇರಿಸಲಾಗುವುದು. ಮಾರನೆಯ ದಿನ ಕೋವಿಡ್ ಪರೀಕ್ಷೆ ಮಾಡಿಸಿ, ವರದಿ ಪಾಸಿಟಿವ್ ಬಂದರೆ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್‌ಗೆ ಕಳಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT