ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಡಿ ಲಸಿಕೆ: ವಿದ್ಯಾರ್ಥಿಗಳು ಅಸ್ವಸ್ಥ

ಕಿಮ್ಸ್‌ಗೆ ದಾಖಲು; ಆರೋಗ್ಯ ಸುಧಾರಣೆ ನಂತರ ಬಿಡುಗಡೆ
Last Updated 14 ಡಿಸೆಂಬರ್ 2019, 9:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಾಲ್ಲೂಕಿನ ಹೆಬಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಊಟಕ್ಕಿಂತ ಮೊದಲು ಟಿಡಿ(ಟಿಟಾನಸ್‌ ಡೆಫ್ತಿರಿಯಾ) ಚುಚ್ಚುಮದ್ದು ಹಾಕಿದ ಮೇಲೆ 28 ವಿದ್ಯಾರ್ಥಿಗಳು ಶುಕ್ರವಾರ ಅಸ್ವಸ್ಥರಾಗಿ ಕಿಮ್ಸ್‌ಗೆ ದಾಖಲಾಗಿದ್ದರು.

ಆರೋಗ್ಯ ಇಲಾಖೆಯ ವಿಶೇಷ ಶಾಲಾ ಲಸಿಕಾ ಅಭಿಯಾನದಡಿ ಶಾಲೆಯ ಐದನೇ ತರಗತಿಯ 32 ವಿದ್ಯಾರ್ಥಿಗಳಿಗೆ ಹೆಬಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ನರ್ಸ್‌ಗಳು ಲಸಿಕೆ ಹಾಕಿದ್ದರು. ಮೊದಲು ಚುಚ್ಚುಮದ್ದು ಹಾಕಿಸಿಕೊಂಡ ವಿದ್ಯಾರ್ಥಿನಿ ದೀಯಾ ಅಕ್ಕಿ ಸೇರಿ ಮೂವರು ಮಕ್ಕಳು ಅಸ್ವಸ್ಥರಾಗಿದ್ದಾರೆ. ಅದಾದ ಕೆಲವೇ ಹೊತ್ತಿನಲ್ಲಿ ಎಲ್ಲ ಮಕ್ಕಳು ವಾಂತಿ, ತಲೆನೋವು, ಚಳಿಯಿಂದ ಬಳಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೂಡಲೇ ಕಿಮ್ಸ್‌ಗೆ ದಾಖಲಿಸಲಾಯಿತು.

ಚಿಕ್ಕಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆದ ಎಲ್ಲ ವಿದ್ಯಾರ್ಥಿಗಳು, ರಾತ್ರಿ ವೇಳೆ ಮನೆಗೆ ತೆರಳಿದರು.

‘ಮಕ್ಕಳಿಗೆ ಚುಚ್ಚುಮದ್ದು ಹಾಕುವ ವಿಷಯ ನಮಗೆ ಗೊತ್ತಿರಲಿಲ್ಲ. ಎಸ್‌ಡಿಎಂಸಿ ಸದಸ್ಯರೊಬ್ಬರು ದೂರವಾಣಿ ಮೂಲಕ ಕರೆ ಮಾಡಿ, ನಮ್ಮ ಮಗಳು ಚುಚ್ಚುಮದ್ದು ಹಾಕಿಕೊಂಡ ನಂತರ ಅಸ್ವಸ್ಥಳಾಗಿದ್ದಾಳೆ ಎಂದರು. ಕೂಡಲೇ ಶಾಲೆಗೆ ಬಂದು ನೋಡಿದಾಗ ವಾಂತಿ ಮಾಡಿಕೊಂಡು, ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಳು’ ಎಂದು ವಿದ್ಯಾರ್ಥಿನಿ ದೀಯಾ ಅವಳ ತಾಯಿ ಕಾವೇರಿ ಅಕ್ಕಿ ತಿಳಿಸಿದರು.

‘ಸರ್ಕಾರದ ಸೂಚನೆ ಮೇರೆಗೆ ಮಕ್ಕಳಿಗೆ ಟಿಡಿ ಚುಚ್ಚುಮದ್ದು ನೀಡಿದ್ದೇವೆ. ಅಸ್ವಸ್ಥರಾದ ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಯಾವ ಕಾರಣಕ್ಕೆ ಹೀಗಾಗಿದೆ ಎಂದು ನಮಗೆ ಗೊತ್ತಿಲ್ಲ’ ಎಂದು ಲಸಿಕೆ ಹಾಕಿದ ನರ್ಸ್‌ ಎಸ್‌.ಡಿ. ದಂಡಿನ ತಿಳಿಸಿದರು.

‘ಮಧ್ಯಾಹ್ನ 1.30ರ ವೇಳೆ ಮಕ್ಕಳಿಗೆ ಚುಚ್ಚುಮದ್ದು ಹಾಕಲಾಗಿದೆ. ಮೂವರು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವುದನ್ನು ನೋಡಿ, ಎಲ್ಲ ವಿದ್ಯಾರ್ಥಿಗಳು ಮಾನಸಿಕ ಭಯದಿಂದ ಅಸ್ವಸ್ಥರಾಗಿದ್ದಾರೆ. ಚುಚ್ಚುಮದ್ದಿನಿಂದ ಯಾವುದೇ ಅಡ್ಡಪರಿಣಾಮ ಉಂಟಾಗಿಲ್ಲ. ಎಲ್ಲ ವಿದ್ಯಾರ್ಥಿಗಳು ಗುಣಮುಖರಾಗಿದ್ದಾರೆ’ ಎಂದು ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದರು.

ಮಕ್ಕಳನ್ನು ಭೇಟಿ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ‘ಊಟಕ್ಕಿಂತ ಮೊದಲು ಮಕ್ಕಳಿಗೆ ಚುಚ್ಚುಮದ್ದು ಹಾಕಿದ್ದರಿಂದ ಅಸ್ವಸ್ಥಗೊಂಡಿದ್ದಾರೆ. ಇನ್ನುಮುಂದೆ ಊಟದ ನಂತರವೇ ಚುಚ್ಚುಮದ್ದು ಹಾಕಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಿದ್ದೇನೆ’ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ, ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ ಇದ್ದರು.

ಗಂಟಲುಮಾರಿ, ನಾಯಿ ಕೆಮ್ಮು ಮತ್ತು ಧನುರ್ವಾಯು ರೋಗ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ವತಿಯಿಂದ ಐದು ಹಾಗೂ 10ನೇ ತರಗತಿ ಮಕ್ಕಳಿಗೆ ಟಿಡಿ ಲಸಿಕೆ ಹಾಕಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT