ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟರ ಪರಿಶ್ರಮದ ಬದುಕು ಎಲ್ಲರಿಗೂ ಮಾದರಿ

ಮಹಾಗಣಪತಿ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಚಾಲನೆ; ಸಿ.ಎಂ. ಬೊಮ್ಮಾಯಿ
Last Updated 15 ಜನವರಿ 2023, 5:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಂಟ ಸಮಾಜದವರು ಎಲ್ಲೇ ಹೋದರೂ ಕನ್ನಡ ನಾಡಿನ ಹೆಸರನ್ನು ಎತ್ತಿ ಹಿಡಿಯುತ್ತಾರೆ. ಅವರಲ್ಲಿರುವ ಕಠಿಣ ಪರಿಶ್ರಮದ ಬದುಕು ಎಲ್ಲರಿಗೂ ಮಾದರಿಯಾಗಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದ ಆವರಣದಲ್ಲಿ ಶನಿವಾರ ಹುಬ್ಬಳ್ಳಿ-ಧಾರವಾಡ ಬಂಟರ ಸಂಘ ಹಮ್ಮಿಕೊಂಡಿದ್ದ ಪ್ರಸನ್ನ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸಮಾಜದ ಅಭಿವೃದ್ಧಿಗೆ ಬಂಟ ಸಮಾಜದ ಕೊಡುಗೆ ಅಪಾರವಾಗಿದೆ. ಹೋದಲ್ಲೆಲ್ಲ ನಾಯಕತ್ವ ವಹಿಸಿಕೊಳ್ಳುವ ಗುಣ ಅವರಲ್ಲಿದ್ದು, ರಾಜಕಾರಣಕ್ಕೂ ಸೈ ಎನಿಸಿಕೊಂಡಿದ್ದಾರೆ’ ಎಂದರು.

‘ಆಗದ ಕೆಲಸವನ್ನು ಮಾಡಿ ತೋರಿಸುವ ಅಸಾಮಾನ್ಯರಿಗೆ ಶೆಟ್ಟರು ಎನ್ನುತ್ತಾರೆ. ಸಾಹಸಮಯ ಪ್ರವೃತ್ತಿ ಅವರಲ್ಲಿದ್ದು, ಏನೇ ಮಾಡಿದರೂ ಯಶಸ್ವಿಯಾಗುತ್ತಾರೆ. ಅವರಲ್ಲಿರುವ ಕೌಶಲ, ಜಾಣ್ಮೆ, ಹೊಂದಾಣಿಕೆ ಬದುಕು ಮೆಚ್ಚುವಂತಹದ್ದು. ಮುಂಬೈನಲ್ಲಿ‌ ದೊಡ್ಡ ಹೆಸರು ಮಾಡಿರುವ ಅವರು, ಅಲ್ಲಿ ಕನ್ನಡಿಗೆ ಕೆಲಸ ನೀಡಿ ರಕ್ಷಣೆ ನೀಡುತ್ತಿದ್ದಾರೆ. ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಹುಟ್ಟಿದ ಊರು ಹಾಗೂ ಕುಲದೇವರನ್ನು ಮರೆಯದ ಅವರ ಗುಣ ವಿಶೇಷವಾಗಿದೆ’ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ಎಲ್ಲದರಲ್ಲೂ ಪಾರಾಗುವವನಿಗೆ ಬಂಟ ಎನ್ನುತ್ತಾರೆ. ಅಂತಹ ಶಕ್ತಿ ಈ ಸಮಾಜದವರಲ್ಲಿದ್ದು, ಅವರ ನಡವಳಿಕೆ, ಹೃದಯ ಶ್ರೀಮಂತಿಕೆ ಆದರ್ಶನೀಯವಾಗಿದೆ. ಕೊಡುಗೈ ದಾನಿಗಳಾಗಿರುವ ಅವರು, ಎಲ್ಲರನ್ನೂ ಸರಿಸಮಾನವಾಗಿ ಕಾಣುತ್ತ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ದೇಶದ ತುಂಬೆಲ್ಲ ವ್ಯಾಪಿಸಿ ಬದುಕು ಕಟ್ಟಿಕೊಂಡಿರುವುದು ಶ್ಲಾಘನೀಯ’ ಎಂದರು.

ಶ್ರೀ ಸುಬ್ರಹ್ಮಣ್ಯಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು. ಶ್ರೀಕಾಂತ ಶೆಟ್ಟಿ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಿದರು. ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಪ್ರಶಾಂತ ರೈ ಅವರನ್ನು ಸನ್ಮಾನಿಸಲಾಯಿತು. ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ರೂಪಾ ಶೆಟ್ಟಿ, ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಶಾಂತರಾಮ ಶೆಟ್ಟಿ, ಅಶೋಕ ಶೆಟ್ಟಿ, ಮಹೇಶ ಶೆಟ್ಟಿ, ಅನಂತ ಪೂಜಾರಿ, ಸುಧೀರ ಶೆಟ್ಟಿ, ಸತೀಶ ಶೆಟ್ಟಿ ಇದ್ದರು.

ಸಿ.ಎಂ ಭಾಷಣದಲ್ಲಿ ಹಾಸ್ಯ ಚಟಾಕಿ...

ಬಾರ್‌, ರೆಸ್ಟೋರೆಂಟ್‌ಗಳನ್ನು ನಡೆಸುವ ಕೆಲವರು, ಕೆಲವು ಪರವಾನಗಿ ಪಡೆಯಲು ಸಾಧ್ಯವಾಗದೆ ಅರ್ಧಕ್ಕೆ ಬಂದ್‌ ಮಾಡಿರುತ್ತಾರೆ. ಆದರೆ, ಬಂಟ ಸಮುದಾಯದವರು ಹಟಕ್ಕೆ ಬಿದ್ದು, ಅದನ್ನು ನವೀಕರಿಸಿ ಮುಂದುವರಿಸುತ್ತಾರೆ. ‘ನಿಮ್ಮಿಂದ ಅಸಾಧ್ಯ’ ಎಂದು ಯಾರಾದರೂ ಹೇಳಿದರೆ, ‘ಮತ್ತೆ ನೋಡೋಣ’ ಎನ್ನುತ್ತಲೇ ಯಶಸ್ಸಿನ ಹಾದಿ ಹಿಡಿಯುತ್ತಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದಾಗ ಸಭೆಯಲ್ಲಿ ನಗೆಗಡಲು.

‘ಹೋಟೆಲ್‌ಗೆ ಬಂದ ಗ್ರಾಹಕರಿಂದ ಬಂಟರು ನಯಾ ಪೈಸೆ ಬಿಡುವುದಿಲ್ಲ. ಹುಟ್ಟಿದ ಊರಲ್ಲಿ ದೇವಸ್ಥಾನ ನಿರ್ಮಾಣಕ್ಕೆ, ಧಾರ್ಮಿಕ ಕಾರ್ಯಗಳಿಗೆ ಲಕ್ಷ ಲಕ್ಷ ರೂಪಾಯಿ ನೀಡುತ್ತಾರೆ. ತಮ್ಮ ಇರುವಿಕೆ ಹಾಗೂ ಸಾಮರ್ಥ್ಯವನ್ನು ತೋರಿಸುವ ಅವರ ಈ ಗುಣ ವಿಶಿಷ್ಟವಾಗಿದೆ’ ಎಂದಾಗ ಕರತಾಡನ.

ಕೋಟ್‌...

ವಿಶ್ವದಲ್ಲಿ ಮಾನವೀಯತೆ ಜಾಗೃತವಾಗಿದೆ. ಸನಾತನ ಧರ್ಮದ ಸಂಸ್ಕೃತಿ, ಸಂಸ್ಕಾರದಿಂದ ಭಾರತ ವಿಶ್ವದ ನಾಯಕತ್ವ ವಹಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ
–ಬಸವರಾಜ ಬೊಮ್ಮಾಯಿ, ಮುಖ್ಮಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT