ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಮಾವಿನ ಫಸಲು ಕಡಿಮೆ, ಬೆಲೆಯೂ ಹೆಚ್ಚು

ಮಹಾರಾಷ್ಟ್ರಕ್ಕೆ ಹೋಗಬೇಕಿದ್ದ ಮಾವಿನ ಹಣ್ಣುಗಳು ಸ್ಥಳೀಯವಾಗಿಯೇ ಮಾರಾಟ
Last Updated 4 ಮೇ 2020, 1:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಾವಿನ ಹೂ ಚಿಗುರೊಡೆಯುವ ಸಮಯದಲ್ಲಿ ವಿಪರೀತ ಇಬ್ಬನಿ ಬಿದ್ದ ಕಾರಣ ಧಾರವಾಡ ಜಿಲ್ಲೆಯಲ್ಲಿ ಹಣ್ಣಿನ ಫಸಲು ಈ ಬಾರಿ ಕಡಿಮೆಯಾಗಿದೆ. ಆದ್ದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಕೊರೊನಾ ಸೋಂಕಿನಿಂದ ರೈತರಿಗೂ ಲಾಭವಿಲ್ಲದಂತಾಗಿದೆ.

ಕಳೆದ ವರ್ಷ ಧಾರವಾಡ ಜಿಲ್ಲೆಯಲ್ಲಿ 10,500 ಹೆಕ್ಟೇರ್‌ ಪ್ರದೇಶದಲ್ಲಿ 75 ಸಾವಿರ ಟನ್‌ ಮಾವು ಬೆಳೆಯಲಾಗಿತ್ತು. ಈ ಸಲದ ಋತುವಿನ ಅಂತ್ಯಕ್ಕೆ ಗರಿಷ್ಠ 45 ಸಾವಿರ ಟನ್‌ ಮಾವು ಬರಬಹುದು ಎಂದು ತೋಟಗಾರಿಕಾ ಇಲಾಖೆ ಅಂದಾಜಿಸಿದೆ.

ಜಿಲ್ಲೆಯಲ್ಲಿ ಅಲ್ಫಾನ್ಸೊ, ಕೇಸರ್‌, ದಶೇರಿ, ಮಲ್ಲಿಕಾ, ತೋತಾಪುರಿ ಮತ್ತು ಕಲ್ಮಿ ತಳಿಯ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇಲ್ಲಿ ಬೆಳೆದ ಹಣ್ಣುಗಳನ್ನು ಪ್ರತಿ ವರ್ಷ ಪುಣೆ ಮತ್ತು ಮುಂಬೈನಿಂದ ಬಂದು ವ್ಯಾಪಾರಿಗಳು ಖರೀದಿಸುತ್ತಿದ್ದರಿಂದ ರೈತರಿಗೆ ಹೆಚ್ಚು ಲಾಭ ಸಿಗುತ್ತಿತ್ತು.

ಆದರೆ ಈ ಬಾರಿ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿರುವ ಕಾರಣ ಅಲ್ಲಿನ ವ್ಯಾಪಾರಿಗಳಿಗೆ ಮಾರಲು ಜಿಲ್ಲೆಯ ರೈತರು ಒಪ್ಪುತ್ತಿಲ್ಲ. ಸ್ಥಳೀಯ ದಲ್ಲಾಳಿಗಳನ್ನೇ ನೆಚ್ಚಿಕೊಂಡು ವ್ಯಾಪಾರ ಮಾಡುವಂತಾಗಿದೆ. ರೈತರಿಗೆ ಹೆಚ್ಚು ಲಾಭ ಸಿಗುತ್ತಿಲ್ಲ; ಗ್ರಾಹಕರಿಗೂ ಕಡಿಮೆ ಬೆಲೆಗೆ ಹಣ್ಣುಗಳು ಲಭಿಸುತ್ತಿಲ್ಲ.

ಕೊರೊನಾ ಕಾರಣ ಜನ ಹಣ್ಣು ಖರೀದಿಸುತ್ತಿಲ್ಲ ಎಂದು ರೈತರಿಗೆ ಕಡಿಮೆ ಬೆಲೆ ನೀಡಲಾಗುತ್ತಿದೆ. ಹಣ್ಣುಗಳೇ ಸಿಗುತ್ತಿಲ್ಲ ಎಂದು ಗ್ರಾಹಕರಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತನಿಗೂ ಲಾಭವಿಲ್ಲ. ಗ್ರಾಹಕರಿಗೆ ತೃಪ್ತಿ ಇಲ್ಲದಂತಾಗಿದೆ.

ಧಾರವಾಡ ತಾಲ್ಲೂಕಿನ ಹಳ್ಳಿಗೇರಿ ಗ್ರಾಮದಲ್ಲಿ ತಮ್ಮ ಒಂಬತ್ತು ಎಕರೆ ತೋಟದಲ್ಲಿ ಮಾವು ಬೆಳೆದಿರುವ ರೈತ ಗಂಗಾಧರ ಹೊಸಮನಿ ‘ನಿರೀಕ್ಷೆಯಷ್ಟು ಫಸಲು ಬಂದಿಲ್ಲ. ಹಣ್ಣುಗಳಿಗೆ ರಾಸಾಯನಿಕ ಮಿಶ್ರಣ ಮಾಡಿ, ಕಳಪೆ ಗುಣಮಟ್ಟದ ಹಣ್ಣುಗಳನ್ನು ಕಡಿಮೆ ಬೆಲೆಗೆ ಮಾರುವ ತಂತ್ರಗಾರಿಕೆ ನಡೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಹಣ್ಣಿನ ವ್ಯಾಪಾರಿ ಗೌರಮ್ಮ ಕಳ್ಳಿಹಾಳ ‘ಫಸಲು ಕಡಿಮೆ ಇರುವ ಕಾರಣ ಬೆಲೆ ಹೆಚ್ಚಾಗಿದೆ. ಸಣ್ಣ ಗಾತ್ರದ ಹಣ್ಣುಗಳನ್ನು ಡಜನ್‌ಗೆ ₹300ರಿಂದ ₹400ಗೆ ಮಾರುತ್ತಿದ್ದಾರೆ. ಒಳ್ಳೆಯ ಹಣ್ಣುಗಳನ್ನು ₹700 ರಿಂದ ₹800 ಮಾರಾಟ ಮಾಡುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT