ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: 4 ತಿಂಗಳಾದರೂ ಕೈ ಸೇರದ ಸಮಿತಿ ವರದಿ

ಇನ್ನೂ ನಿಗದಿಯಾಗದ ಮಾನದಂಡ: ವಾರ್ಡ್ ಸಮಿತಿ ರಚನೆ ನನೆಗುದಿಗೆ
Last Updated 29 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಾಗರಿಕರ ಸಹಭಾಗಿತ್ವದಲ್ಲಿ ಮಹಾನಗರ ಪಾಲಿಕೆ ಆಡಳಿತವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದ ವಾರ್ಡ್ ಸಮಿತಿ ರಚನೆಯು ದಿನದಿಂದ ದಿನಕ್ಕೆ ನನೆಗುದಿಗೆ ಬೀಳುತ್ತಿದೆ. ಸಮಿತಿ ರಚನೆಗೆ ಮಾನದಂಡಗಳನ್ನು ನಿಗದಿಪಡಿಸುವುದಕ್ಕಾಗಿ, ಮೇಯರ್ ರಚಿಸಿದ್ದ ಸದನ ಸಮಿತಿ, ನಾಲ್ಕು ತಿಂಗಳಾದರೂ ತನ್ನ ವರದಿ ಸಲ್ಲಿಸಿಲ್ಲ.

ಪಾಲಿಕೆಗೆ ಚುನಾಯಿತ ಆಡಳಿತ ಮಂಡಳಿ ಬರುವುದಕ್ಕೆ ಮುಂಚೆ ಏಪ್ರಿಲ್‌ ನಲ್ಲೇ ಸಮಿತಿ ರಚನೆಗೆ 82 ವಾರ್ಡ್‌ಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿಗಳು ಬಾರದಿದ್ದರಿಂದ ಜೂನ್‌ 17ರವರೆಗೆ ಮೂರು ಸಲ ದಿನಾಂಕ ವಿಸ್ತರಿಸಲಾಗಿತ್ತು. ತಲಾ 10 ಮಂದಿ ಇರಬೇಕಾಗಿದ್ದ ಸಮಿತಿಗೆ, ಎಲ್ಲಾ ವಾರ್ಡ್‌ಗಳಿಂದ ಕನಿಷ್ಠ 10ರಂತೆ ಒಟ್ಟು 820 ಅರ್ಜಿಗಳಾದರೂ ಬರಬೇಕಿತ್ತು. ಅಂತಿಮವಾಗಿ ಬಂದಿದ್ದು 626 ಅರ್ಜಿಗಳಷ್ಟೇ.

ಸೆಪ್ಟೆಂಬರ್‌ನಲ್ಲಿ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂತು. ಸಮಿತಿ ರಚನೆಯ ಸ್ವರೂಪದ ಬಗ್ಗೆ ಸಾಮಾನ್ಯ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಸೂಕ್ತ ಮಾನದಂಡಗಳ ನಿಗದಿಪಡಿಸುವುದಕ್ಕಾಗಿ ಆಗಸ್ಟ್‌ ಸಭೆಯಲ್ಲಿ ಮೇಯರ್ ಸದನ ಸಮಿತಿ ರಚಿಸುವುದಾಗಿ ಘೋಷಿಸಿದರು. ವಾರ್ಡ್ 30ರ ಸದಸ್ಯ ರಾಮಣ್ಣ ಬಡಿಗೇರ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸದಸ್ಯರನ್ನೂ ಒಳಗೊಂಡ ಐವರ ಸಮಿತಿ ರಚಿಸಿದ್ದರು.

ಅಭಿಪ್ರಾಯ ಸಂಗ್ರಹ: ‘ಸಮಿತಿ ರಚನೆಗೆ ಸಂಬಂಧಿಸಿದಂತೆ ನಾಗರಿಕ ಸಂಘಟನೆಗಳು, ಸಮಿತಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವವರು ಹಾಗೂ ಅಧಿಕಾರಿಗಳ ಜೊತೆ ಮೂರು ಸಭೆ ನಡೆಸಿದ್ದೇವೆ. ಅಭಿಪ್ರಾಯ ಮತ್ತು ಅಹವಾಲು ಆಲಿಸಿ ಮಾಹಿತಿ ಸಂಗ್ರಹಿಸಿದ್ದೇವೆ’ ಎಂದು ಸದನ ಸಮಿತಿ ಅಧ್ಯಕ್ಷ ರಾಮಣ್ಣ ಬಡಿಗೇರ ‘ಪ್ರಜಾವಾಣಿ’ ತಿಳಿಸಿದರು.

‘ಸಮಿತಿ ಸದಸ್ಯರಿಗೆ ಇರಬೇಕಾದ ಅರ್ಹತೆ ಹಾಗೂ ಆಯ್ಕೆಯ ಮಾನದಂಡಗಳ ಕುರಿತು ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ಪಕ್ಷಪಾತ ಹಾಗೂ ಗೊಂದಲಕ್ಕೆ ಅವಕಾಶವಿಲ್ಲದಂತೆ ಪಾರದರ್ಶಕವಾಗಿ ಸಮಿತಿ ರಚಿಸಬೇಕು. ಈ ನಿಟ್ಟಿನಲ್ಲಿ ಸಮಿತಿ ರಚನೆಗೆ ಇರಬೇಕಾದ ಮಾನದಂಡಗಳನ್ನು ಶೀಘ್ರ ಅಂತಿಮಗೊಳಿಸಲಾಗುವುದು. ಜನವರಿ ಅಂತ್ಯದೊಳಗೆ ಮೇಯರ್ ಅವರಿಗೆ ವರದಿ ಸಲ್ಲಿಸಲಾಗುವುದು’ ಎಂದರು.

ಜನಾಂದೋಲನಕ್ಕೆ ಸಿದ್ಧತೆ
ವಾರ್ಡ್ ಸಮಿತಿ ರಚನೆಗಾಗಿ ಪಾಲಿಕೆ ಮೇಲೆ ಒತ್ತಡ ಹೇರುತ್ತಲೇ ಬಂದಿರುವ ಹುಬ್ಬಳ್ಳಿ–ಧಾರವಾಡ ವಾರ್ಡ್ ಸಮಿತಿ ಬಳಗ ಹಾಗೂ ಜನಾಗ್ರಹ ಸಂಸ್ಥೆಯು, ಸಮಿತಿಗಾಗಿ ಅವಳಿನಗರದಲ್ಲಿ ಜನಾಂದೋಲನ ಮಾದರಿಯ ಹೋರಾಟ ನಡೆಸಲು ಮುಂದಾಗಿವೆ.

‘ಬಳಗದಿಂದ ವಾರ್ಡ್ ಹಾಗೂ ವಲಯಗಳ ಮಟ್ಟದಲ್ಲಿ ನಾಗರಿಕರ ಜನಜಾಗೃತಿ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಸಮಿತಿ ಮಹತ್ವ, ಉದ್ದೇಶ, ಕಾರ್ಯಚಟುವಟಿಕೆಗಳನ್ನು ತಿಳಿಸುತ್ತಾ ಅರಿವು ಮೂಡಿಸಲಾಗುತ್ತಿದೆ. ಬಳ್ಳಾರಿ, ಮಂಗಳೂರು, ಬೆಂಗಳೂರು ಪಾಲಿಕೆಗಳಲ್ಲಿ ಈಗಾಗಲೇ ಸಮಿತಿ ರಚಿಸಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪಾಲಿಕೆಯು ಕಡಿಮೆ ಅರ್ಜಿಗಳ ನೆಪ ಹೇಳಿ ವಿಳಂಬ ಮಾಡುತ್ತಿದೆ. ಅರ್ಜಿ ಬಾರದಿರುವ ಕಡೆ ಮತ್ತೆ ಅರ್ಜಿ ಆಹ್ವಾನಿಸಿ ಸಮಿತಿ ರಚಿಸಬೇಕು’ ಎಂದು ಬಳಗದ ಸಂಚಾಲಕ ಲಿಂಗರಾಜ ಧಾರವಾಡಶೆಟ್ಟರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT