ಬುಧವಾರ, ಮೇ 12, 2021
17 °C
ರೈಲು ನಿಲ್ದಾಣದ ಪಾರ್ಕ್‌ನಲ್ಲಿ ಗಾಂಜಾ ಮಾರಾಟ; ಬಂಧನ

ಬಿಜೆಪಿ ಮುಖಂಡನ ಮನೆಯಲ್ಲಿ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬಿಜೆಪಿ ಮುಖಂಡ ವೀರಣ್ಣ ಸವಡಿ ಅವರ ತಂದೆ ಸಂಗಪ್ಪ ಅವರ ಆರೈಕೆ ಮಾಡುತ್ತಿದ್ದ ಹಾವೇರಿ ಮೂಲದ ವ್ಯಕ್ತಿ, ಅವರ ಮನೆಯಲ್ಲಿದ್ದ ₹1.60 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ವಾಚ್‌ಗಳನ್ನು ಕಳವು ಮಾಡಿದ್ದಾನೆ.

ವೀರಣ್ಣ ಸವಡಿ ನೀಡಿದ ದೂರಿನ ಮೇರೆಗೆ ಸವಣೂರು ತಾಲ್ಲೂಕಿನ ಬದ್ನಿ ತಾಂಡಾದ ಅರುಣ ನಾಯ್ಕ ವಿರುದ್ಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೀರಣ್ಣ ಅವರು ವಯಸ್ಸಾದ ತಂದೆಯವರ ಆರೈಕೆ ಮಾಡಲೆಂದು ಅರುಣನನ್ನು ನೇಮಕ ಮಾಡಿಕೊಂಡಿದ್ದರು. ಮನೆಯವರ ವಿಶ್ವಾಸಗಳಿಸಿಕೊಂಡಿದ್ದ ಅವನು, ಸಂಗಪ್ಪ ಒಬ್ಬರೇ ಮನೆಯಲ್ಲಿ ಇದ್ದಾಗ ಕಪಾಟಿನಲ್ಲಿದ್ದ ₹1.32 ಲಕ್ಷ ಮೌಲ್ಯದ ಚಿನ್ನಾಭರಣ, ₹23 ಸಾವಿರ ನಗದು ಹಾಗೂ ₹5 ಸಾವಿರ ಮೌಲ್ಯದ ಎರಡು ವಾಚ್‌ಗಳನ್ನು ಕಳವು ಮಾಡಿದ್ದಾನೆ.

ಸಾರಿಗೆ ಸಿಬ್ಬಂದಿ ವಿರುದ್ಧ ಕಳವು ಪ್ರಕರಣ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿಯ ಲೆಕ್ಕಪತ್ರ ಶಾಖೆಯಲ್ಲಿ ಕಿರಿಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ಎಫ್‌. ಚಲವಾದಿ ವಿರುದ್ಧ ಗೋಕುಲ ಪೊಲೀಸ್‌ ಠಾಣೆಯಲ್ಲಿ ಕಪಾಟು ಕಳವು ಪ್ರಕರಣ ದಾಖಲಾಗಿದೆ.

ಗೋಕುಲ ರಸ್ತೆಯ ವಿಭಾಗೀಯ ಕಚೇರಿಯ ಮುಂಭಾಗದಲ್ಲಿ ದಾಖಲಾತಿಗಳನ್ನು ಇಡುವ ಕಬ್ಬಿಣದ ಕಪಾಟನ್ನು ಚಲವಾದಿ, ಕಚೇರಿ ಮುಂದಿರುವ ಕಾಲುವೆಯಲ್ಲಿ ಬಚ್ಚಿಟ್ಟಿದ್ದಳು. ನಂತರ ಅದನ್ನು ಆಟೊದಲ್ಲಿ ತೆಗೆದುಕೊಂಡು ಹೋಗಿದ್ದಳು. ವ್ಯಕ್ತಿಯೊಬ್ಬ ಅದನ್ನು ವಿಡಿಯೊ ಮಾಡಿ, ಕಚೇರಿಯ ಭದ್ರತಾ ಸಿಬ್ಬಂದಿ ಸಂತೋಷ ಚನ್ನಪ್ಪಗೌಡ್ರ ಅವರಿಗೆ ಕಳುಹಿಸಿದ್ದ. ವಿಡಿಯೊ ಆಧರಿಸಿ ಅವರು ಪ್ರಕರಣ ದಾಖಲಿಸಿದ್ದಾರೆ.

ಗಾಂಜಾ ಮಾರಾಟ: ಇಬ್ಬರ ಬಂಧನ: ಚಿಕ್ಕ ಪ್ಯಾಕೆಟ್‌ಗಳಲ್ಲಿ ಗಾಂಜಾ ತುಂಬಿ ಶಿವಮೊಗಕ್ಕೆ ಒಯ್ಯುತ್ತಿದ್ದ ಹಾಗೂ ಅವುಗಳನ್ನು ಮಾರಾಟ ಮಾಡಿದ ಇಬ್ಬರು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿ, 800 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಪಟ್ಟಣದ ವಿದ್ಯಾನಗರ ಸಲ್ಮಾನ್‌ ಮತ್ತು ನಗರದ ಅರಳಿಕಟ್ಟಿ ಓಣಿಯ ಸಾವಿತ್ರಿಬಾಯಿ ಹಬೀಬ ಬಂಧಿತ ಆರೋಪಿಗಳು. ಸಾವಿತ್ರಿಬಾಯಿಯಿಂದ ಸಲ್ಮಾನ್‌ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ಅದನ್ನು ಶಿವಮೊಗ್ಗದ ಬಸ್‌ ನಿಲ್ದಾಣ ಮತ್ತು ಮಾರುಕಟ್ಟೆ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ. ರೈಲ್ವೆ ನಿಲ್ದಾಣದ ಪಕ್ಕದ ಉದ್ಯಾನದಲ್ಲಿ ಇಬ್ಬರು ಆರೋಪಿಗಳು ವ್ಯವಹಾರ ನಡೆಸುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಪ್ರಕರಣ ದಾಖಲಾಗಿದ್ದು, ಸಾವಿತ್ರಿಬಾಯಿಗೆ ಎಲ್ಲಿಂದ ಗಾಂಜಾ ಪೂರೈಕೆ ಆಗುತ್ತಿತ್ತು ಎನ್ನುವ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ₹ 97ಸಾವಿರ ವಂಚನೆ:  ಬೇರೆಯವರ ವಿದ್ಯುತ್‌ ಬಿಲ್‌ ಪಾವತಿಸಿ, ಅದನ್ನು ಮರಳಿ ಪಡೆಯಲು ಗೂಗಲ್‌ನಲ್ಲಿ ದೊರೆತ ಗ್ರಾಹಕರ ಸಹಾಯವಾಣಿಗೆ ಕರೆ ಮಾಡಿದ ಮಹಿಳೆ, ಆನ್‌ಲೈನ್‌ನಲ್ಲಿ ₹ 97 ಸಾವಿರ ಕಳೆದುಕೊಂಡಿದ್ದಾರೆ.

ವಿದ್ಯಾನಗರದ ರುದ್ರಮ್ಮ ಶೆಟ್ಟರ್‌ ಹಣ ಕಳೆದುಕೊಂಡವರು. ಹೆಸ್ಕಾಂ ಬಿಲ್‌ನ್ನು ಫೋನ್‌ಪೇನಲ್ಲಿ ಪಾವತಿಸುವ ವೇಳೆ, ಆರ್‌ಆರ್‌ ನಂಬರ್‌ ತಪ್ಪು ನಮೂದಿಸಿದ್ದರು. ಹೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿದಾಗ, ಹಣ ಮರಳಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಆಗ ಗೂಗಲ್‌ನಲ್ಲಿ ದೊರೆತ ಫೋನ್‌ಪೇ ಗ್ರಾಹಕರ ಸಹಾಯವಾಣಿಗೆ ಕರೆ ಮಾಡಿ ಹಣ ಮರಳಿಸಲು ವಿನಂತಿಸಿದ್ದಾರೆ. ಹಣ ಮರಳಿಸುವುದಾಗಿ ನಂಬಿಸಿದ ವಂಚಕ, ರುದ್ರಮ್ಮ ಅವರಿಂದ ಬ್ಯಾಂಕ್‌ ಖಾತೆ, ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಚಿನ್ನಾಭರಣ ಕಳವು: ಹಳೇಹುಬ್ಬಳ್ಳಿ ಈಶ್ವರ ನಗರದ ನಿಜಗುಣೆಪ್ಪ ಓಂಕಾರಿ ಅವರ ಮನೆ ಬಾಗಿಲು ಮುರಿದು, ₹1.06 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಆಲ್ಮೇರಾದ ಬಾಗಿಲು ಮುರಿದ ಕಳ್ಳರು, 33 ಗ್ರಾಂ ಬಂಗಾರ, 40 ಗ್ರಾಂ ಬೆಳ್ಳಿ ಮತ್ತು ₹1ಸಾವಿರ ನಗದು ಕಳವು ಮಾಡಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು