ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯ ಲಾಲ್‌ಬಾಗ್ ಈ ತೋಳನಕೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ರೂಪ

ಪಾಳು ಬಿದ್ದಂತಿದ್ದ ಕೆರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ರೂಪ
Last Updated 23 ಆಗಸ್ಟ್ 2022, 11:40 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಉತ್ತರ ಕರ್ನಾಟಕದ ಹುಬ್ಬಳ್ಳಿ ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ. ಸ್ಮಾರ್ಟ್ ಸಿಟಿ ಎಂಬ ಗರಿಯೂ ಬಂದಿದೆ. ಅಭಿವೃದ್ಧಿ ಕೆಲಸಗಳಿಗೆ ಸ್ಮಾರ್ಟ್‌ ಸ್ಪರ್ಶ ನೀಡುವ ಜೊತೆಗೆ, ನಗರದ ಮೊಹರಾಗಿರುವ ಹಲವು ಸ್ಥಳಗಳನ್ನು ಆಕರ್ಷಕ ತಾಣಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಅದರಲ್ಲಿ32.64 ಎಕರೆ ವಿಸ್ತಾರವಾದ ತೋಳನಕೆರೆ ಮುಖ್ಯವಾದುದು.

ತೋಳಗಳು ಈ ಭಾಗದಲ್ಲಿ ಹೆಚ್ಚಾಗಿದ್ದಿದ್ದರಿಂದ ಇಲ್ಲಿಗೆ ತೋಳನಕೆರೆ ಎಂಬ ಹೆಸರು ಬಂದಿದೆ. ಕೆಲ ವರ್ಷಗಳ ಹಿಂದೆ ಕೆರೆ ಪ್ರದೇಶವು ಪಾಳು ಬಿದ್ದಂತ್ತಿತ್ತು. ಸುತ್ತಲೂ ಬೆಳೆದಿದ್ದ ಗಿಡಗಂಟಿಗಳು ಬೆಳೆದಿದ್ದವು. ಕೆರೆಯೊಡಲು ಸೇರುತ್ತಿದ್ದ ಕೊಳಚೆ ನೀರು, ಜನರು ಕೆರೆಯತ್ತ ಸುಳಿಯದಂತೆ ಮಾಡಿದ್ದವು. ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿ, ಕೆರೆಗೆ ಹೊಸ ರೂಪ ಸಿಕ್ಕಿದ್ದು, ನಗರದ ಆಕರ್ಷಕ ಸ್ಥಳಗಳಲ್ಲೊಂದಾಗಿದೆ.

ತೆರೆದ ಜಿಮ್

ಕೆರೆ ಪ್ರದೇಶದಲ್ಲಿ ಅತ್ಯಾಕರ್ಷಕ ಉದ್ಯಾನ ನಿರ್ಮಿಸಲಾಗಿದೆ. ವಾಯು ವಿಹಾರಕ್ಕಾಗಿ 1.5 ಕಿ.ಮೀ. ನಡಿಗೆ ಪಥ ನಿರ್ಮಿಸಲಾಗಿದೆ. ವಿವಿಧ ಜಾತಿಯ ಮರಗಳು, ತರಹೇವಾರಿ ಗಿಡಗಳು, ಸಾಲು ಮರಗಳು, ಹುಲ್ಲು ಹಾಸು, ಮನಮೋಹಕ ಪುಷ್ಪಗಳು ಉದ್ಯಾನಕ್ಕೆ ಮೆರಗು ತಂದಿವೆ. ಕೆರೆ ಬದಿಯಲ್ಲಿರುವ ತೋಳಗಳ ಹಿಂಡಿನ ಸಿಮೆಂಟ್ ಕಲಾಕೃತಿಗಳು ಗಮನ ಸೆಳೆಯುತ್ತವೆ. ಹಸಿರ ರಾಶಿಯ ಈ ಜಾಗ ಯುವಜನರ ಫೋಟೊಶೂಟ್ ಸ್ಪಾಟ್ ಆಗಿದೆ.

‘ಯುವಜನರು, ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೂ ಪ್ರತ್ಯೇಕವಾದ ತೆರೆದ ಜಿಮ್ ವ್ಯವಸ್ಥೆ, ಹರ್ಬಲ್ ಮತ್ತು ಸೆನ್ಸರಿ ಉದ್ಯಾನ, ಸಾಹಸ ಕ್ರೀಡೆಗಳಿಗಾಗಿ ಬೂಟ್ ಕ್ಯಾಂಪ್ ಪ್ರದೇಶ, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್ ಹಾಗೂ ಷಟಲ್ ಬ್ಯಾಡ್ಮಿಂಟನ್ ಅಂಕಣಗಳಿವೆ. ಮಕ್ಕಳ ಮನರಂಜನೆ‌ಗಾಗಿಯೇ ಪ್ರತ್ಯೇಕ ಆಟದ ಪ್ರದೇಶವಿದೆ. ಸಾಂಸ್ಕೃತಿಕ ಸೇರಿದಂತೆ ಇತರ ಕಾರ್ಯಕ್ರಮಗಳಿಗಾಗಿ 400 ಜನರ ಸಾಮರ್ಥ್ಯದ ತೆರೆದ ಸಭಾಂಗಣ ನಿರ್ಮಿಸಲಾಗಿದೆ. ಜನರ ಹೊಟ್ಟೆ ತಣಿಸಲು ಒಳಗಡೆ ಫುಡ್ ಕಿಯೋಸ್ಕ್‌ ನಿರ್ಮಿಸಲಾಗಿದೆ’ ಎನ್ನುತ್ತಾರೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್.

ವೀಕ್ಷಣಾ ಗೋಪುರ

ಇಡೀ ಪ್ರದೇಶವನ್ನು ಕಣ್ತುಂಬಿಕೊಳ್ಳಲು 2 ಕಡೆ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ನೀರು ಶುದ್ಧೀಕರಣಕ್ಕಾಗಿ ಕೆರೆಯಲ್ಲಿ ಫ್ಲೋಟಿಂಗ್ ಏರಿಯೇಟರ್‌ಗಳನ್ನು ಅಳವಡಿಸಲಾಗಿದೆ. ಗಲೀಜು ನೀರು ಕೆರೆ ಸೇರದಂತೆ ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಸೌರಫಲಕಗಳನ್ನು ಅಳವಡಿಸಿ ಸೌರವಿದ್ಯುತ್ ಬಳಸಲಾಗುತ್ತಿದೆ.

‘ಉದ್ಯಾನದಲ್ಲಿನ ಎಲೆಗಳು, ಹೂವು, ಹುಲ್ಲು ಸೇರಿದಂತೆ ಮಣ್ಣಿನಲ್ಲಿ ಕರಗುವ ಕಸಗಳಿಂದ ಗೊಬ್ಬರ ತಯಾರಿಸಲು ಎರೆಹುಳು ಗೊಬ್ಬರ ತಯಾರಿಕಾ ಘಟಕ ನಿರ್ಮಿಸಲಾಗಿದೆ. ಉದ್ಯಾನ ಪ್ರವೇಶದ ದ್ವಾರದ ಎರಡೂ ಬದಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 6ರಿಂದ 8ರವರೆಗೆ ಮತ್ತು ಸಂಜೆ 4ರಿಂದ 6.30ರವರೆಗೆ ಕೆರೆಗೆ ಪ್ರವೇಶವಿದೆ’ ಎಂದು ಶಕೀಲ್ ಅಹ್ಮದ್ ಹೇಳಿದರು.

‘ಜಿಮ್‌ನಲ್ಲಿರುವ ಉಪಕರಣಗಳು ಉದ್ಘಾಟನೆಗೂ ಮುನ್ನವೇ ಹಾಳಾಗಿವೆ. ಇಲ್ಲಿ ಓಡಾಡಲು ಅಂಗವಿಕಲರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಸೌಲಭ್ಯ ಒದಗಿಸಬೇಕು’ ಎಂದು ಸ್ಥಳೀಯ ನಿವಾಸಿ ಲಿಂಗರಾಜ ಧಾರವಾಡಶೆಟ್ರು ಒತ್ತಾಯಿಸಿದರು.

ಪ್ರವೇಶ ಶುಲ್ಕ, ಕ್ಯಾಮೆರಾ ನಿಗಾ

ಕೆರೆ ಪ್ರದೇಶ ಮತ್ತು ಉದ್ಯಾನದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾ ವಹಿಸಲಾಗಿದೆ. ಪ್ರೇಮಿಗಳು ಸೇರಿದಂತೆ ಯಾರೇ ಬಂದೂ ಅಸಭ್ಯವಾಗಿ ನಡೆದುಕೊಳ್ಳುವುದು, ಉದ್ಯಾನವನ್ನು ಹಾನಿಗೊಳಿಸದಂತೆ ತಡೆಯಲು ಖಾಸಗಿ ಭದ್ರತಾ ಸಿಬ್ಬಂದಿ ಸಹ ನಿಯೋಜಿಸಲಾಗಿದೆ.

‘ಉದ್ಯಾನಕ್ಕೆ ಸದ್ಯ ಉಚಿತವಾಗಿ ಪ್ರವೇಶವಿದ್ದು, ಉದ್ಘಾಟನೆ ಬಳಿಕ ₹10 ಪ್ರವೇಶ ಶುಲ್ಕ ನಿಗದಿಯಾಗಲಿದೆ. ಅಕ್ರಮವಾಗಿ ಉದ್ಯಾನಕ್ಕೆ ಪ್ರವೇಶ ಮಾಡದಂತೆ ಸುತ್ತಲೂ ಎತ್ತರವಾದ ಕಾಂಪೌಂಡ್ ನಿರ್ಮಿಸಲಾಗಿದೆ. ಎರಡೂ ಪ್ರವೇಶ ದ್ವಾರದ ಬಳಿ ಹಾಗೂ ಒಳ ಭಾಗದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆರೆ ಮತ್ತು ಉದ್ಯಾನ ಅಭಿವೃದ್ಧಿಯ ಕೆಲಸಗಳು ಪೂರ್ಣಗೊಂಡಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ. ಆಗಸ್ಟ್ ಅಂತ್ಯದೊಳಗೆ ಅಧಿಕೃತವಾಗಿ ಉದ್ಘಾಟನೆಯಾಗಲಿದೆ’ ಎಂದು ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ತಿಳಿಸಿದರು.

ನಿರ್ವಹಣೆ ಹೊಣೆ ಖಾಸಗಿಗೆ

ತೋಳನಕೆರೆ ಉದ್ಯಾನ ನಿರ್ವಹಣೆ ಹೊಣೆಯನ್ನು ಖಾಸಗಿಯವರಿಗೆ ವಹಿಸಲು ಹು–ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ನಿರ್ಧರಿಸಿದೆ. ಅದಕ್ಕಾಗಿ ಟೆಂಡರ್ ಕೂಡ ಕರೆದಿದೆ.

‘ಮೂರು ವರ್ಷಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ. ಪ್ರವೇಶ ಶುಲ್ಕ, ಪಾರ್ಕಿಂಗ್, ಬೋಟಿಂಗ್, ಫುಡ್ ಕಿಯೋಸ್ಕ್, ತೆರೆದ ಸಭಾಂಗಣದ ಶುಲ್ಕ, ಕ್ರೀಡಾ ಚಟುವಟಿಕೆ ಸೇರಿದಂತೆ ವಿವಿಧ ಮೂಲಗಳಿಂದ ಆದಾಯದ ಬರಲಿದೆ. ಟೆಂಡರ್ ಪಡೆಯುವವರು ನಿರ್ವಹಣೆ ಜೊತೆಗೆ, ನಮಗೆ ವಾರ್ಷಿಕ ನಿಗದಿತ ಮೊತ್ತ ಪಾವತಿಸಲಿದ್ದಾರೆ’ ಎಂದು ಶಕೀಲ್ ಅಹ್ಮದ್ ತಿಳಿಸಿದರು.

ಜನ ಏನಂತಾರೆ...?

* ತೋಳನಕೆರೆಯನ್ನು ಚೆನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ಮಕ್ಕಳಿಗೂ ಈ ಸ್ಥಳ ಅಚ್ಚುಮೆಚ್ಚು. ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕು. ನಾಗರಿಕರು ಅದಕ್ಕೆ ಸಹಕರಿಸಿ ಜವಾಬ್ದಾರಿ ಮೆರೆಯಬೇಕು

– ಲಿಂಗರಾಜ ಧಾರವಾಡಶೆಟ್ರು, ಸ್ಥಳೀಯರು

***

* ತೋಳನಕೆರೆಗೆ ಹಿಂದೆ ಬರದಂತಹ ಸ್ಥಿತಿ ಇತ್ತು. ಈಗ ಕೆರೆಗೆ ಹೊಸ ರೂಪ ಬಂದಿದೆ. ಕೆರೆ ಹಾಗೂ ಉದ್ಯಾನದ ಸೌಂದರ್ಯ ಸವಿಯುತ್ತಾ ವಾಕಿಂಗ್‌ ಮಾಡಲು ಖುಷಿಯಾಗುತ್ತದೆ
– ಮಾಲನ್ ಪೈ, ಸ್ಥಳೀಯರು

***

* ನಗರದ ಆಕರ್ಷಣೀಯ ಸ್ಥಳವಾಗಿರುವ ತೋಳನಕೆರೆಗೆ ಕೊಳಚೆ ನೀರು ಸೇರುತ್ತಿರುವುದರಿಂದ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಹಾಗಾಗಿ, ಗಟಾರದ ನೀರು ಬಾರದಂತೆ ತಡೆಯಬೇಕು
– ಡಾ. ಲಿಂಗರಾಜ ಅಂಗಡಿ, ಪ್ರಾಧ್ಯಾಪಕ

****

32.64 ಎಕರೆ ತೋಳನಕೆರೆಯ ಒಟ್ಟು ವಿಸ್ತೀರ್ಣ

₹29.29 ಕೋಟಿ: ಕೆರೆ ಪ್ರದೇಶದ ಅಭಿವೃದ್ಧಿಯ ವೆಚ್ಚ

1.5 ಕಿ.ಮೀ.:ನಡಿಗೆ ಪಥ ನಿರ್ಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT