ಶನಿವಾರ, ಜನವರಿ 25, 2020
22 °C

ಶೌಚಾಲಯ ಉದ್ಘಾಟನೆ, ಪೇವರ್ಸ್‌ ಅಳವಡಿಕೆಗೆ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಶತಮಾನ ಕಂಡ ನಾಗಶೆಟ್ಟಿಕೊಪ್ಪದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಮಿಡ್‌ಟೌನ್‌ ನಿರ್ಮಿಸಿರುವ ಶೌಚಾಲಯದ ಉದ್ಘಾಟನೆ ಹಾಗೂ ಶಾಲೆಯ ಆವರಣದಲ್ಲಿ ಪೇವರ್ಸ್‌ ಅಳವಡಿಕೆಗೆ ಭೂಮಿಪೂಜೆ ಕಾರ್ಯುಕ್ರಮ ಶನಿವಾರ ನಡೆಯಿತು.

ಮಿಡ್‌ಟೌನ್‌ನ ಚೇರ್ಮನ್‌ ವಿವೇಕ ನಾಯ್ಕ ಮಾತನಾಡಿ ‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೌಚಾಲಯ ನಿರ್ಮಿಸಿದ್ದೇವೆ. ಇದನ್ನು ಬಳಸಿಕೊಂಡು, ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡು ಹೋಗುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ನಮ್ಮ ಅಭಿವೃದ್ಧಿಯನ್ನು ಹೊರಗಿನಿಂದ ಬಂದು ಯಾರೂ ಮಾಡುವುದಿಲ್ಲ. ಎಲ್ಲವನ್ನೂ ನಾವೇ ಮಾಡಿಕೊಳ್ಳಬೇಕಾದ ಕಾರಣ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದರು. ₹5 ಲಕ್ಷ ವೆಚ್ಚದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ ‘ರೋಟರಿ ಸಂಸ್ಥೆಯವರು ಕಡಿಮೆ ಹಣದಲ್ಲಿ ಗುಣಮಟ್ಟದ ಶೌಚಾಲಯ ನಿರ್ಮಿಸಿದ್ದಾರೆ. ಇದೇ ಕಾಮಗಾರಿಯನ್ನು ಸರ್ಕಾರದಿಂದ ಮಾಡಿದ್ದರೆ ಎರಡ್ಮೂರು ಪಟ್ಟು ಹೆಚ್ಚು ಹಣ ಖರ್ಚಾಗುತ್ತಿತ್ತು’ ಎಂದರು.

‘ಸರ್ಕಾರಿ ಶಾಲೆಗಳಿಗೆ ಮಧ್ಯಮ ವರ್ಗದ ಕುಟುಂಬದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದ್ದರಿಂದ ಎಲ್ಲ ಸರ್ಕಾರಿ ಶಾಲೆಗಳು ಮಾದರಿಯಾಗಬೇಕು. ₹12 ಲಕ್ಷ ವೆಚ್ಚದಲ್ಲಿ ಪೇವರ್ಸ್‌ ಅಳವಡಿಸಿ ಈ ಶಾಲೆಯನ್ನು ಮಾದರಿ ಮಾಡಲಾಗುವುದು. ಶಾಲೆ ಆರಂಭವಾಗಿ ನೂರು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಶತಾಬ್ಧಿ ಭವನ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

ಹುಬ್ಬಳ್ಳಿ ನಗರ ಬಿಇಒ ಶ್ರೀಶೈಲ ಕರಿಕಟ್ಟಿ, ಶೌಚಾಲಯ ನಿರ್ಮಾಣ ಯೋಜನೆಯ ಚೇರ್ಮನ್‌ ಲಿಂಗರಾಜ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ ದಾಸರ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶೇಖರಗೌಡ ಸೋಮನಗೌಡ್ರ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಉಮಾಶಂಕರ ಸಣ್ಣಕ್ಕಿ, ಮುತ್ತು ಪಾಟೀಲ, ಮಾಜಿ ಉಪ ಮೇಯರ್‌ ಮೇನಕಾ ಹುರಳಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)