ಸೋಮವಾರ, ಮಾರ್ಚ್ 1, 2021
31 °C

ಸಂಚಾರ ಪೊಲೀಸರಿಂದಲೇ ಸಂಚಕಾರ!

ಈರಪ್ಪ ನಾಯ್ಕರ್‌‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ–ಧಾರವಾಡ ಮಹಾನಗರ ದಿನೇ ದಿನೆ ಬೆಳೆಯುತ್ತಿದೆ. ವಾಹನಗಳ ಸಂಖ್ಯೆಯಲ್ಲೂ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ನಗರದ ರಸ್ತೆಗಳ ಸಾಮರ್ಥ್ಯಕ್ಕಿಂತ ಎರಡು ಮೂರುಪಟ್ಟು ಅಧಿಕ ಸಂಖ್ಯೆಯ ವಾಹನಗಳು ಸಂಚರಿಸುತ್ತಿವೆ. ಅದರಿಂದ ಸಹಜವಾಗಿ ವಾಹನಗಳ ದಟ್ಟಣೆ ಸಮಸ್ಯೆ ಸುಗಮ ಸಂಚಾರವನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಪಿ.ಬಿ ರಸ್ತೆ ನಡುವೆ ಬಿಆರ್‌ಟಿಎಸ್‌ ಕಾರಿಡಾರ್‌ ಸೇರಿಕೊಂಡು ಸಂಚಾರ ವೇಳೆ ಎದುರಾಗುವ ಗೊಂದಲಗಳಿಂದ ಸಾರ್ವಜನಿಕರು ಇನ್ನೂ ಸಂಪೂರ್ಣ ಹೊರಬಂದಿಲ್ಲ. ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ನುಗ್ಗಿಕೊಂಡು ಸಾಗುವ ಕೆಲವು ಖಾಸಗಿ ವಾಹನಗಳಿಂದ ಚಿಗರೆ ಓಟಕ್ಕೆ ಅಡ್ಡಿಯುಂಟಾಗುತ್ತಿದೆ. ಇದರಿಂದ ಅಪಘಾತಗಳೂ ಘಟಿಸುತ್ತಲೇ ಇವೆ. ಇದಕ್ಕೆಲ್ಲ ಕಡಿವಾಣ ಹಾಕಲೆಂದು ಮೊನ್ನೆ ಜುಲೈ 1ರಿಂದ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಿ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿಡಲಾಗಿದೆ. ಜೊತೆಜೊತೆಗೆ ಸಾರ್ವಜನಿಕರ ಸಂಚಾರಕ್ಕಿರುವ ರಸ್ತೆಯಲ್ಲಿ ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರನ್ನು ಬೆನ್ನಟ್ಟುವ ಭರದಲ್ಲಿ ಸುಗಮ ಸಂಚಾರಕ್ಕೆ ಸಂಚಕಾರ ಎದುರಾಗುತ್ತಿದೆ.

ಸಂಚಾರ ಪೊಲೀಸರು ತಮ್ಮ ಕೆಲಸವನ್ನು ನಿರ್ವಹಿಸುವ ಭರದಲ್ಲಿ ಅವರೇ ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ. ಅದನ್ನು ಯಾರು ಕೇಳಬೇಕು ಎಂಬುದು ಸವಾರರ ಪ್ರಶ್ನೆಯಾಗಿದೆ.

ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಸವಾರರನ್ನು ಹಿಡಿದು ದಂಡ ವಿಧಿಸಲಿ. ಆದರೆ ಅವರನ್ನು ಬೆನ್ನಟ್ಟುವ ಭರದಲ್ಲಿ ಹಿಂಬದಿಯಲ್ಲಿ ಬರುವ ವಾಹನಗಳ ಸವಾರರನ್ನು ಕಂಗಾಲಾಗುವಂತೆ ಮಾಡುತ್ತಾರೆ. ನಾಲ್ಕು ಚಕ್ರಗಳ ವಾಹನಗಳು ಹೇಗೆ ಮೆನೇಜ್‌ ಮಾಡಿಕೊಂಡು ಹೋಗಿಬಿಡುತ್ತಾರೆ. ಆದರೆ ಬೈಕ್‌ ಸವಾರರ ಗತಿ ಏನು ಎಂಬುದು ಹಲವರ ಆತಂಕವಾಗಿದೆ.

ಕೆಲವು ಲಾರಿಗಳನ್ನು ಹಿಡಿಯುವ ಸಲುವಾಗಿ ಹರಸಾಹಸ ಪಟ್ಟು ರಸ್ತೆಯ ನಡುವೆಯೇ ತಡೆದು, ಅವುಗಳ ದಾಖಲೆಗಳನ್ನು ತಪಾಸಿಸುತ್ತಾರೆ. ಆಗ ಟ್ರಾಫಿಕ್‌ ಜಾಮ್‌ ಉಂಟಾಗಲಿದೆ. ಕೆಲವು ವಾಹನಗಳು ತಪ್ಪಿಸಿಕೊಂಡು ಹೋಗುವ ಭರದಲ್ಲಿ ಅಪಘಾತವನ್ನುಂಟು ಮಾಡುತ್ತಿದೆ. ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಬೇಕಾದ ಸಂಚಾರ ಪೊಲೀಸ್ ಅಧಿಕಾರಿಗಳಿಂದಲೇ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಇನ್ನೂ ಕೆಲವು ವೇಳೆ ನೋ ಪಾರ್ಕಿಂಗ್ ಸ್ಥಳಗಳಲ್ಲಿ ನಿಂತುಕೊಂಡು ವಾಹನ ತಪಾಸಣೆ ನಡೆಸುತ್ತಿದ್ದಾರೆ. ಇವೆಲ್ಲವೂ ಸಂಚಾರ ಪೊಲೀಸರಿಂದಲೇ ಸಂಚಾರ ನಿಯಮ ಉಲ್ಲಂಘನೆಗೆ ದಾರಿಯಾಗುತ್ತಿದೆ.

ಇದನ್ನು ಗಮನಿಸದೆ ಎಷ್ಟೋ ಬಾರಿ ಮುಖ್ಯ ರಸ್ತೆಯ ತಿರುವುಗಳಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ನಡು ರಸ್ತೆಯ ಮಧ್ಯದಲ್ಲಿ ನಿಂತು ಬೈಕ್, ಲಾರಿ ಹಾಗೂ ಕಾರುಗಳನ್ನು ತಡೆದು ಮತ್ತಷ್ಟು ಹೆಚ್ಚು ವಾಹನ ದಟ್ಟಣೆಗೆ ದಾರಿ ಮಾಡುತ್ತಾರೆ.

ಯಾವ ಮಾರ್ಗದಿಂದ ಬಿಆರ್‌ಟಿಎಸ್‌ ಬಸ್‌ಗಳು ಬರುತ್ತವೆ ಎಂದು ಆಕಡೆ ಇಕಡೆ ಗಮನಹರಿಸಿ ಎಷ್ಟೋ ಜಾಗರೂಕತೆಯಿಂದ ವಾಹನ ತೆಗೆದುಕೊಂಡು ದಾಟುವಾಗಲೂ ಕೆಲವು ಭಾರಿ ಅಪಘಾತ ಸಂಭವಿಸಿದ್ದಿದೆ. ಜನನಿಬಿಡ ಅಥವಾ ಜನ ಸಂಚಾರ ಇರುವ ಸ್ಥಳಗಳಲ್ಲಿ ನಿಂತು ವಾಹನ ತಪಾಸಣೆ ಮಾಡುತ್ತಿರುತ್ತಾರೆ.

ಇದ್ಯಾವುದನ್ನು ಗಮನ ಹರಿಸದೆ ನಗರದ ಮುಖ್ಯ ರಸ್ತೆಗಳಾದ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಬಿವಿಬಿ ಬಸ್ ನಿಲ್ದಾಣ, ಹೊಸೂರು ವೃತ್ತ, ಪಿಬಿ ರಸ್ತೆಯ ಪೆಟ್ರೋಲ್ ಪಂಪ್ ಸಮೀಪ, ಕೋರ್ಟ್‌ ವೃತ್ತದ ಸಾಯಿ ಮಂದಿರದ ಹತ್ತಿರ, ಸರ್ವೋದಯ ಸರ್ಕಲ್‌, ಬಸವ ವನದ ಹಿಂಭಾಗದ ರಸ್ತೆ , ಕಾರವಾರ ರಸ್ತೆಯ ಬೈಪಾಸ್ ಹಾಗೂ ವಿದ್ಯಾನಗರದ ಮುಖ್ಯ ರಸ್ತೆಗಳಲ್ಲಿ ರಸ್ತೆ ಮಧ್ಯದಲ್ಲಿ ಇಳಿದು ವಾಹನವನ್ನು ತಪಾಸಣೆ ನಡೆಸಲು ಮುಂದಾಗುತ್ತಿರುವುದಕ್ಕೆ ಹಲವು ಸವಾರರು ಆಕ್ಷೇಪ ವ್ಯಕ್ತಪಡಿಸುತ್ತಾರೆ.

ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಸಂಬಂಧಪಟ್ಟ ಇಲಾಖೆಗಳು ಕೆಲವೊಂದು ಕ್ರಮಗಳನ್ನು ಕೈಗೊಂಡಿರುವುದು ಒಪ್ಪತಕ್ಕದ್ದೆ. ಬಿಆರ್‌ಟಿಎಸ್‌ ಪ್ರತ್ಯೇಕ ಕಾರಿಡಾರ್‌ನಲ್ಲಿ ಬಿಆರ್‌ಟಿಎಸ್ ಬಸ್‌ ಹೊರತು ಪಡಿಸಿ ಯಾವುದೇ ಖಾಸಗಿ ವಾಹನಗಳು ಸಂಚಾರ ನಡೆಸುವಂತಿಲ್ಲ. ಅದಕ್ಕಾಗಿಯೇ ವಿಶೇಷವಾಗಿ ಭದ್ರತಾ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳವನ್ನು ಈಗಾಗಲೇ ನೇಮಕ ಮಾಡಲಾಗಿದೆ. ಹುಬ್ಬಳ್ಳಿಯ ಬಿಆರ್‌ಟಿಎಸ್ ರಸ್ತೆಯ ನಿರ್ಮಾಣದಿಂದಾಗಿ ಎಡ ಮತ್ತು ಬಲ ಬದಿಯಲ್ಲಿ ಬ್ಯಾರಿಕೇಡ್ ಇರುವುದರಿಂದ ಬೈಕ್, ಕಾರು, ಆಟೊ, ಬಸ್ ಹಾಗೂ ಲಾರಿ ವಾಹನ ಚಾಲಕರಿಗೆ ಒಳಗೆ ಹೋಗದಂತೆ ತಡೆಯಲಾಗಿದೆ. ಖಾಸಗಿ ವಾಹನ ಸವಾರರು ಬಿಆರ್‌ಟಿಎಸ್ ಕಾರಿಡಾರ್ ಒಳಗೆ ಪ್ರವೇಶ ಮಾಡದೇ ಮುಖ್ಯ ರಸ್ತೆಯ ಇಕ್ಕಟ್ಟಾದ ಜಾಗದಿಂದ ಸಂಚರಿಸುವುದನ್ನು ತಡೆಯಬೇಕಿದೆ.

**

ಇಂತಹದೇ ಸ್ಥಳಗಳಲ್ಲಿ ವಾಹನ ತಪಾಸಣೆ ಮಾಡಬೇಕು ಎಂಬ ನಿಖರತೆ ಇಲ್ಲ. ಹುಬ್ಬಳ್ಳಿಯ ಯಾವುದೇ ಸ್ಥಳಗಳಲ್ಲಿ ನಿಂತು ವಾಹನ ತಪಾಸಣೆ ಮಾಡಬಹುದು. ಹುಬ್ಬಳ್ಳಿಯ ರಸ್ತೆಗಳು ಸಣ್ಣದಾಗಿರುವುದರಿಂದ ಟ್ರಾಫಿಕ್ ಪೊಲೀಸ್‌ ಅಧಿಕಾರಿಗಳಿಗೆ ವಾಹನ ತಪಾಸಣೆ ಮಾಡುವುದು ಸಮಸ್ಯೆ ಆಗಿದೆ. ಆದ್ದರಿಂದ ಕೆಲವು ಸ್ಥಳಗಳನ್ನು ನಾವೆ ಗುರುತಿಸಿ ಜನರಿಗೆ ತೊಂದರೆ ಆಗದಂತೆ ವಾಹನ ತಪಾಸಣೆ ಮಾಡುವುದಾಗಿ ನಮ್ಮ ಸಿಬ್ಬಂದಿ ವರ್ಗದವರಿಗೆ ಸೂಚನೆ ನೀಡಲಾಗುವುದು

ಎಸ್.ಎಂ.ಸಂದಿಗವಾಡ, ಉತ್ತರ ಸಂಚಾರ ವಿಭಾಗ ಎಸಿಪಿ

**

ಜನರು ಎಚ್ಚೆತ್ತುಕೊಂಡು ಟ್ರಾಫಿಕ್‌ಗೆ ಸಂಬಂಧ ಪಟ್ಟ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಅದರಂತೆ ಜನರಿಗೆ ತೊಂದರೆಯಾಗದ ಸ್ಥಳದಲ್ಲಿ ನಿಂತು ಟ್ರಾಫಿಕ್‌ ಪೊಲೀಸ್‌ ಅಧಿಕಾರಿಗಳು ಕಾರ್ಯಾಚರಣೆ ಮಾಡಬೇಕು

ಶೇಕ್ರಯ್ಯ ಮಠಪತಿ, ಹುಬ್ಬಳ್ಳಿ

**

ಮಳೆಗಾಲದ ಸಮಯದಲ್ಲಿ ರಸ್ತೆಗಳ ಮಧ್ಯ ನಿಂತು ಟ್ರಾಫಿಕ್ ಪೊಲೀಸ್‌ ಅಧಿಕಾರಿಗಳು ವಾಹನ ತಡೆದು ತಪಾಸಣೆ ಮಾಡುತ್ತಿರುವುದು ಮೃತ್ಯುವಿಗೆ ಆಹ್ವಾನ ನೀಡಿದಂತೆ

- ಐ.ಬಿ. ಬೆಡಸೂರ, ವಿದ್ಯಾನಗರ ಹುಬ್ಬಳ್ಳಿ

**

ರಸ್ತೆ ನಡುವೆ ಕೈ ಮಾಡಿ ವಾಹನ ತಡೆಯುವುದರಿಂದ ಹಿಂಬದಿ ವಾಹನ ಸವಾರರು ಆಯಾ ತಪ್ಪಿ ಬಿದ್ದು ಅಪಘಾತ ಆಗುವ ಸಂಭವ ಹೆಚ್ಚು. ಜನ ಸಾಮಾನ್ಯರಿಗೆ ತೊಂದರೆ ಆಗದಂತೆ ಇದಕ್ಕೆ ಸಂಬಂಧ ಪಟ್ಟ ಸೂಕ್ತ ಕ್ರಮಗಳನ್ನು ಕೈಗೊಂಡು ಅಧಿಕಾರಿಗಳು ಕಾರ್ಯ ನಿರ್ವಹಿಸಿದರೆ ಅಹಿತಕರ ಘಟನೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ

- ಸಂಜು ದುಮ್ಮಕನಾಳ, ಹುಬ್ಬಳ್ಳಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.