ಬುಧವಾರ, ಜೂನ್ 23, 2021
24 °C
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ ಆರೋಪ

ಕಾಂಗ್ರೆಸ್‌ನಿಂದ ದೇಶದ್ರೋಹದ ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಜನ ಸಂಕಷ್ಟದಲ್ಲಿರುವಾಗ ಕಾಂಗ್ರೆಸ್ ಟೂಲ್ ಕಿಟ್‌ ಮೂಲಕ ದೇಶದ್ರೋಹದ ಕೆಲಸ ಮಾಡಿ, ಜನರಲ್ಲಿ ತಪ್ಪು ಸಂದೇಶ ಮೂಡಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜನರಲ್ಲಿ ನಿರಂತರವಾಗಿ ಭೀತಿ ಮೂಡಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಲೇ ಬಂದಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಆ ಪಕ್ಷದ ನಾಯಕರು ಜವಾಬ್ದಾರಿಯಿಂದ ನಡೆದುಕೊಂಡು ಸರ್ಕಾರಕ್ಕೆ ಸಲಹೆ ನೀಡಬೇಕಿತ್ತು. ಏಳು ದಶಕಗಳ ಕಾಲ ಆಡಳಿತದ ಅನುಭವ ಹೊಂದಿರುವ ಕಾಂಗ್ರೆಸ್‌ ಕೋವಿಡ್‌ ನಿಯಂತ್ರಣಕ್ಕೆ ನೆರವಾಗಬೇಕಿತ್ತು. ಇದೆಲ್ಲವನ್ನು ಬಿಟ್ಟು ಹಗುರವಾಗಿ ಮಾತನಾಡಿ ಜನರ ದಾರಿ ತಪ್ಪಿಸುತ್ತಿದೆ’ ಎಂದರು.

‘ಕಾಂಗ್ರೆಸ್‌ ಮನಸ್ಥಿತಿ ಒಪ್ಪುವ ಕೆಲ ಮಾಧ್ಯಮದ ಪ್ರತಿನಿಧಿಗಳು ಹಾಗೂ ಸಾಹಿತಿಗಳನ್ನು ಬಳಸಿಕೊಂಡು ಆ ಪಕ್ಷ ಟೂಲ್‌ ಕಿಟ್‌ ಕೆಲಸ ಮಾಡುತ್ತಿದೆ. ಮಾಡಲು ಯಾವುದೇ ಕೆಲಸವಿಲ್ಲದ ಕಾರಣಕ್ಕೆ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಟ್ಟ ರಾಜಕಾರಣಕ್ಕೆ ಮುಂದಾಗಿದೆ. ಕೋವಿಡ್‌ ಸಂಕಷ್ಟದ ಕಾಲದಲ್ಲಿಯೂ ಕ್ಷೇತ್ರದ ಜನರ ಬಳಿ ಹೋಗಿ ನೆರವಿನ ಹಸ್ತ ಚಾಚುವ ಬದಲು ಆರು ತಿಂಗಳಿನಿಂದ ಟೂಲ್‌ ಕಿಟ್‌ ತಯಾರಿಕೆಯಲ್ಲಿ ತೊಡಗಿದೆ’ ಎಂದು ದೂರಿದರು.

‘ರಾಜ್ಯದಲ್ಲಿ 62 ಆಕ್ಸಿಜನ್‌ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ದೇಶದ 18 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಕಿಸಾನ್‌ ಸಮ್ಮಾನ್‌ ಯೋಜನೆ ಮೂಲಕ ರೈತರಿಗೆ ಆರ್ಥಿಕ ನೆರವು ಘೋಷಿಸಲಾಗಿದೆ. ವೈದ್ಯಕೀಯ ಸಿಬ್ಬಂದಿ ನೇಮಕಾತಿ ಮಾಡಲಾಗಿದೆ. ಸಂಕಷ್ಟದಲ್ಲಿರುವ ಜನರಿಗೆ ಪಕ್ಷದ ವತಿಯಿಂದ ನೆರವಾಗಿದ್ದೇವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವತಿಯಿಂದ ನಿರಂತರವಾಗಿ ಇಷ್ಟೆಲ್ಲ ಕೆಲಸಗಳು ನಡೆಯುತ್ತಿವೆ. ಇದನ್ನು ಸಹಿಸದೆ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸುವ ಭರದಲ್ಲಿ ದೇಶದ ಘನತೆಯನ್ನು ಹರಾಜು ಹಾಕುವ ಕೆಲಸ ಮಾಡುತ್ತಿದೆ’ ಎಂದು ಟೀಕಿಸಿದರು.

‘18ರಿಂದ 44 ವರ್ಷದವರಿಗೂ ಕೋವಿಡ್‌ ಲಸಿಕೆ ನೀಡಲು ರಾಜ್ಯ ಸರ್ಕಾರ ಸರಿಯಾದ ಯೋಜನೆ ರೂಪಿಸಿತ್ತು. ಲಸಿಕೆ ತಯಾರಿಕೆಗೆ ಕಚ್ಚಾ ಸಾಮಗ್ರಿಗಳ ಕೊರತೆ ಮತ್ತು ತಾಂತ್ರಿಕ ಕಾರಣದಿಂದ ಸಾಧ್ಯವಾಗಲಿಲ್ಲ. ಡ್ರಗ್‌ ಮಾಫಿಯಾದಿಂದಾಗಿ ಲಸಿಕೆ ಉತ್ಪಾದನೆಗೆ ತೊಡಕಾಗಿದೆ’ ಎಂದರು.

ಬಿಜೆಪಿ ರಾಜ್ಯ ಘಟಕದ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪ್ರಮುಖರಾದ ಸಿದ್ದು ಮೂಲಿಶೆಟ್ಟರ್‌, ರವಿ ನಾಯ್ಕ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು