ಭಾನುವಾರ, ಜೂನ್ 20, 2021
25 °C
ಅನುಮತಿ ನೀಡದಿದ್ದರೆ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ

ವಾರ್ಡ್‌ಗೊಂದು ಗಣೇಶ; ಅಸಮಾಧಾನ

ನಾಗರಾಜ್‌ ಬಿ.ಎನ್‌. Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಾರ್ವಜನಿಕ ಗಣೇಶೋತ್ಸವಕ್ಕೆ ನಿಷೇಧ ಹೇರಿದ್ದ ಸರ್ಕಾರ, ಇದೀಗ ಷರತ್ತುಬದ್ಧ ಅನುಮತಿ ನೀಡಿದೆ. ಆದರೆ, ವಾಣಿಜ್ಯ ನಗರಿಯ ಗಣೇಶೋತ್ಸವ ಸಮಿತಿಗಳು ‘ವಾರ್ಡ್‌ಗೊಂದು ಗಣೇಶ’ ಎನ್ನುವ ಷರತ್ತು ಉಲ್ಲಂಘಿಸುವ ಲಕ್ಷಣಗಳು ದಟ್ಟವಾಗಿ ಕಂಡು ಬರುತ್ತಿವೆ.

ಪ್ರತಿವರ್ಷ ಕನಿಷ್ಠ 700 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ವಾರ್ಡ್‌ಗೆ ಒಂದು ಗಣೇಶ ಮೂರ್ತಿಯನ್ನಷ್ಟೇ ಪ್ರತಿಷ್ಠಾಪಿಸಲು ಸರ್ಕಾರ ಅನುಮತಿ ನೀಡಿದೆ. ನಗರದಲ್ಲಿ 43 ವಾರ್ಡ್‌ಗಳಿದ್ದು, 43 ಮೂರ್ತಿಗಳನ್ನಷ್ಟೇ ಪ್ರತಿಷ್ಠಾಪಿಸಬೇಕು. ಆದರೆ, ಇಲ್ಲಿ ಒಂದೊಂದು ವಾರ್ಡ್‌ನಲ್ಲಿ 15 ರಿಂದ 20 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾರೆ. ವಾರ್ಡ್‌ಗೆ ಒಂದು ಗಣೇಶ ಎನ್ನುವ ಆದೇಶ ಉತ್ಸವ ಸಮಿತಿಯ ಆಸಮಾಧಾನಕ್ಕೆ ಕಾರಣವಾಗಿದೆ.

‘ಗಣೇಶ ಹಬ್ಬಕ್ಕೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಇದೆ. ಈಗಾಗಲೇ ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಹಿಂದಿನಂತೆಯೇ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿ, ಸರಳವಾಗಿ ಆಚರಿಸುತ್ತೇವೆ. ಪರವಾನಗಿ ನೀಡಲು ಏಕ ಗವಾಕ್ಷಿ ಕೇಂದ್ರ ತೆರೆದಿಲ್ಲ. ಪಾಲಿಕೆ ಆಯುಕ್ತರಿಂದ ಮಾಹಿತಿ ಬಂದಿಲ್ಲ ಎಂದು ಪಾಲಿಕೆ ಸಿಬ್ಬಂದಿ ಹೇಳುತ್ತಾರೆ’ ಎಂದು ಬಾರದಾನಗಲ್ಲಿ ಗಣೇಶೋತ್ಸವ ಸಮಿತಿ ಸದಸ್ಯ ದೀಪಕ ಮೆಹರವಾಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹುಬ್ಬಳ್ಳಿಯ ಗಣೇಶೋತ್ಸವ ಎಂದರೆ ದೊಡ್ಡ ಜಾತ್ರೆ. ಸರ್ಕಾರ ಸೂಚಿಸಿದ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುತ್ತೇವೆ. ಆದರೆ, ವಾರ್ಡ್‌ಗೆ ಒಂದು ಗಣೇಶ ಎನ್ನುವ ನಿಯಮ ಒಪ್ಪಲು ಸಾಧ್ಯವಿಲ್ಲ’ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಹೇಳಿದರು.

‘ಸರ್ಕಾರದ ಆದೇಶದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಗಣೇಶೋತ್ಸವ ಸಮಿತಿಗಳಿಗೆ ಷರತ್ತು ಬದ್ಧ ಅನುಮತಿ ನೀಡಲಾಗುವುದು. ತಾಂತ್ರಿಕ ತೊಂದರೆಯಿಂದಾಗಿ ಬುಧವಾರ ಏಕ ಗವಾಕ್ಷಿ ಕೇಂದ್ರ ತೆರೆಯಲು ಸಾಧ್ಯವಾಗಿಲ್ಲ. ಗುರುವಾರ ಬೆಳಿಗ್ಗೆ ಕೇಂದ್ರ ಆರಂಭವಾಗಲಿವೆ’ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್‌ ತಿಳಿಸಿದರು.

ದೇವಸ್ಥಾನಗಳಲ್ಲಿ ಪ್ರತಿಷ್ಠಾಪನೆ: ‘ವಾರ್ಡ್‌ಗೆ ಒಂದು ಗಣೇಶ ಎನ್ನುವುದು ಬೆಂಗಳೂರಿಗೆ ಮಾತ್ರ ಅನ್ವಯವಾಗುತ್ತದೆ. ಒಂದು ವೇಳೆ ಸಾರ್ವಜನಿಕ ಗಣೇಶನನ್ನು ಎಲ್ಲೆಡೆ ಪ್ರತಿಷ್ಠಾಪಿಸಲು ಪಾಲಿಕೆ ಅನುಮತಿ ನೀಡದಿದ್ದರೆ, ಹತ್ತಿರದ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸುತ್ತೇವೆ’ ಎಂದು ಅಮರೇಶ ಹಿಪ್ಪರಗಿ ತಿಳಿಸಿದರು.

ಪ್ರತಿವರ್ಷ ಪ್ರತಿಷ್ಠಾಪಿಸುತ್ತಿದ್ದ ಆರು ಅಡಿ ಎತ್ತರದ ಗಣೇಶ ಮೂರ್ತಿ ಬದಲಾಗಿ, ಈ ವರ್ಷ ಮೂರುವರೆ ಅಡಿ ಎತ್ತರದ್ದನ್ನು ಪ್ರತಿಷ್ಠಾಪಿಸುತ್ತೇವೆ. ಚಿಕ್ಕ ಪೆಂಡಾಲ್‌ ಹಾಕಿ, ಸರಳವಾಗಿ ಉತ್ಸವ ಆಚರಿಸುತ್ತೇವೆ ಎಂದು ಹಿರೇಪೇಟೆ ಗಣೇಶೋತ್ಸವ ಸಮಿತಿಯ ಸದಸ್ಯ ಮಲ್ಲಿಕಾರ್ಜುನ ಶಿರಗುಪ್ಪಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.