ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ವಾರಾಣಸಿ ನಡುವೆ ಎಲ್ಲ ದಿನ ರೈಲು: ಸುರೇಶ ಅಂಗಡಿ

ವಾರದಲ್ಲಿ ಮೂರು ದಿನ ವಿಜಯಪುರ ಮಾರ್ಗವಾಗಿ ಓಡಿಸಲು ನಿರ್ಧಾರ
Last Updated 28 ಜನವರಿ 2020, 15:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ವಾರಾಣಸಿ ನಡುವೆ ಸದ್ಯಕ್ಕೆ ವಾರದಲ್ಲಿ ಎರಡು ದಿನ ಸಂಚರಿಸುತ್ತಿರುವ ರೈಲು ಎಲ್ಲ ದಿನ ಓಡಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ನಗರದಲ್ಲಿ ಮಂಗಳವಾರ ರೈಲ್ವೆ ಅಧಿಕಾರಿಗಳ ಜೊತೆ ಸಭೆಯ ಬಳಿಕ ನಡೆದ ರೈಲ್ವೆ ಮೇಲ್ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಈ ವಿಷಯ ತಿಳಿಸಿದರು.

‘ಈ ರೈಲು ವಾರದಲ್ಲಿ ನಾಲ್ಕು ದಿನ ಬೆಳಗಾವಿ ಮಾರ್ಗವಾಗಿ, ಮೂರು ದಿನ ವಿಜಯಪುರ ಮಾರ್ಗವಾಗಿ ಓಡಿಸಲು ತೀರ್ಮಾನಿಸಲಾಗಿದೆ. ಈ ಕುರಿತು ರೈಲ್ವೆ ಮಂಡಳಿಯಲ್ಲಿ ಅಂತಿಮ ಚರ್ಚೆಯಾಗಬೇಕಿದೆ’ ಎಂದರು.

‘ಹುಬ್ಬಳ್ಳಿ–ವಿಜಯಪುರ ನಡುವೆ ಫೆ. 15ರ ಬಳಿಕ ಇಂಟರ್‌ಸಿಟಿ ರೈಲು ಸಂಚಾರ ಆರಂಭಿಸಲಾಗುವುದು. ಹೊಸ ರೈಲ್ವೆ ಯೋಜನೆಗಳನ್ನು ಘೋಷಿಸುವ ಬದಲು ಬಾಕಿ ಉಳಿದ ಕಾಮಗಾರಿ ಮತ್ತು ಜೋಡಿ ಮಾರ್ಗದ ಕೆಲಸ ಪೂರ್ಣಗೊಳಿಸುವುದಕ್ಕೆ ಒತ್ತು ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಕೂಡ ಇದೇ ಆಗಿದ್ದು, 2022ರ ವೇಳೆಗೆ ದೇಶದಲ್ಲಿ ಬಾಕಿ ಉಳಿದ ಎಲ್ಲ ಜೋಡಿ ಮಾರ್ಗಗಳ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದರು.

‘ರೈಲ್ವೆ ಕ್ಷೇತ್ರದ ಸಮಗ್ರ ಸುಧಾರಣೆಗಾಗಿ ಮುಂದಿನ ಹತ್ತು ವರ್ಷಗಳಲ್ಲಿ ₹50 ಲಕ್ಷ ಕೋಟಿ ವೆಚ್ಚ ಮಾಡಲಾಗುತ್ತದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ನಾಲ್ಕೂವರೆ ತಾಸಿನಲ್ಲಿ ತಲುಪಲು ರೈಲಿನ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.

‘ಹುಬ್ಬಳ್ಳಿ–ಅಂಕೋಲಾ ನಡುವೆ ರೈಲು ಮಾರ್ಗ ಆರಂಭಿಸಲು ವನ್ಯ ಜೀವಿ ಮಂಡಳಿಯ ಅನುಮತಿ ಪಡೆಯುವ ಅಗತ್ಯವಿದೆ. ಈ ನಿಟ್ಟಿನಲ್ಲಿಯೂ ಪ್ರಯತ್ನ ನಡೆಯುತ್ತಿದೆ. ಬೇಲಿಕೇರಿ ಫೋರ್ಟ್‌ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ‘ಹುಬ್ಬಳ್ಳಿಯಿಂದ ನಾಲ್ಕೂವರೆ ತಾಸಿನಲ್ಲಿ ಬೆಂಗಳೂರಿಗೆ ಹೋಗಲು ಭೂಮಿಯ ಅವಶ್ಯಕತೆ ಇದೆ. ಭೂ ಸ್ವಾಧೀನ ಪ್ರಕ್ರಿಯೆಯಿಂದಾಗಿ ರೈಲ್ವೆ ಸಂಚಾರ ತಡವಾಗುತ್ತಿದೆ. ಚಿತ್ರದುರ್ಗ–ದಾವಣಗೆರೆ ನಡುವೆ ಬೇಗನೆ ಕಾಮಗಾರಿ ನಡೆದರೆ ಒಂದು ಗಂಟೆ ಸಮಯ ಉಳಿತಾಯವಾಗುತ್ತದೆ’ ಎಂದರು.

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ಶಾಸಕ ಬಸನಗೌಡ ಪಾಟೀಲ ಯತ್ನಾಳ, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಳಖೇಡೆ, ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿ ಈ. ವಿಜಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT