ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ನೋಂದಣಿ ಆಗದೇ ವಾಹನಗಳ ಸಂಚಾರ!

ನಾಗರಾಜ್‌ ಬಿ.ಎನ್‌.
Published 7 ಡಿಸೆಂಬರ್ 2023, 3:23 IST
Last Updated 7 ಡಿಸೆಂಬರ್ 2023, 3:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶಾಶ್ವತ ನೋಂದಣಿಯಿಲ್ಲದೆ ವಾಹನಗಳನ್ನು ಡೀಲರ್‌ಗಳು ಮಾರುವಂತಿಲ್ಲ. ವಾಹನಗಳು ರಸ್ತೆಗೆ ಇಳಿಯುವ ಮುನ್ನ ಕಡ್ಡಾಯವಾಗಿ ನಂಬರ್‌ ಪ್ಲೇಟ್‌ ಹೊಂದಿರಬೇಕಾದದ್ದು ಕಡ್ಡಾಯ. ಆದರೆ, ಹುಬ್ಬಳ್ಳಿಯಲ್ಲಿ ನೋಂದಣಿಯಿಲ್ಲದ ಬೈಕ್‌, ಕಾರು, ರಿಕ್ಷಾ, ಜೀಪ್‌, ರೋಲರ್‌ ಹಾಗೂ ಇತರ ವಾಹನಗಳು ಸಂಚರಿಸುತ್ತಿವೆ!

‘ನಂಬರ್‌ ಪ್ಲೇಟ್‌ ಇಲ್ಲದ ವಾಹನಗಳನ್ನು ಹಗಲಿನ ವೇಳೆ ಒಳರಸ್ತೆಗಳಲ್ಲಿ ಹೆಚ್ಚಾಗಿ ಓಡಿಸುತ್ತಾರೆ. ಮುಖ್ಯ ರಸ್ತೆಯಲ್ಲೂ ಕೆಲವರು ಓಡಿಸುತ್ತಾರೆ. ಆದರೆ, ಸಂಚಾರ ಪೊಲೀಸರು ದೂರದಲ್ಲಿ ಕಂಡರೆ, ಅಲ್ಲಿಯೇ ವಾಹನಗಳನ್ನು ತಿರುಗಿಸಿ ಬೇರೆ ಮಾರ್ಗ ಹಿಡಿಯುತ್ತಾರೆ. ಸಿಕ್ಕಿಬೀಳುವ ಕೆಲವರು ದಂಡ ಕಟ್ಟುತ್ತಾರೆ. ಇನ್ನೂ ಕೆಲವರು ನಮ್ಮ ಕಣ್ತಪ್ಪಿಸಿ, ಓಡಿಸುತ್ತಾರೆ. ಅಂತಹ ವಾಹನಗಳು ಬಹುತೇಕ ಸಂದರ್ಭಗಳಲ್ಲಿ ಅಪರಾಧ ಕೃತ್ಯಗಳಿಗೂ ಬಳಕೆಯಾಗುವ ಸಾಧ್ಯತೆ ಇರುತ್ತದೆ’ ಎಂದು ಪೊಲೀಸರು ತಿಳಿಸಿದರು.

‘ಕಳೆದ ವರ್ಷದಿಂದ ವಾಹನ ಗಳಿಗೆ ಹೆಚ್ಚು ಸುರಕ್ಷಿತ ನೋಂದಣಿ ಪ್ಲೇಟ್(HSRP) ಕಡ್ಡಾಯ ಗೊಳಿಸಲಾಗಿದ್ದು, ಡೀಲರ್‌ಗಳು ಅವುಗಳನ್ನು ಅಳವಡಿಸಿಯೇ ಮಾರ ಬೇಕು. ಶಾಶ್ವತ ನೋಂದಣಿಯಿಲ್ಲದ ವಾಹನಗಳನ್ನು ಮಾರಲು ಅವಕಾಶವಿಲ್ಲ. ಆದರೂ, ಕೆಲವು ಡೀಲರ್‌ಗಳು ಮೊದಲಿನಂತೆಯೇ ವಾಹನಗಳನ್ನು ಮಾರಿರುವ ಆರೋಪಗಳು ಕೇಳಿ ಬಂದಿವೆ. ಈಗಾಗಲೇ ಎಚ್ಚರಿಕೆ ಸಹ ನೀಡಲಾಗಿದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕೆ. ದಾಮೋದರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು–ಮೂರು ವರ್ಷಗಳ ಹಿಂದೆ ಖರೀದಿಸಿದ ಬೈಕ್‌, ಕಾರುಗಳಿಗೆ ಕೆಲವರು ಈವರೆಗೂ ನಂಬರ್‌ ಪ್ಲೇಟ್‌ ಅಳವಡಿಸಿಕೊಂಡಿಲ್ಲ. ಇನ್ನು ಕೆಲವರು HSRP ನಂಬರ್‌ ಪ್ಲೇಟ್‌ ಪಡೆದುಕೊಂಡಿದ್ದರೂ ಅಳವಡಿಸಿಕೊಂಡಿಲ್ಲ. ಈಗಾಗಲೇ ಕಾರ್ಯಾಚರಣೆ ನಡೆಸಿ ಮ್ಯಾಕ್ಸಿ ಕ್ಯಾಬ್‌(₹3.21 ಲಕ್ಷ), ರೋಡ್‌ ರೋಲರ್‌ (₹1.34 ಲಕ್ಷ), ಗೂಡ್ಸ್‌(₹23 ಸಾವಿರ) ಸೇರಿದಂತೆ ಐದು ವಾಹನಗಳ ಮಾಲೀಕರಿಂದ ದಂಡ ಪಾವತಿಸಿಕೊಳ್ಳಲಾಗಿದೆ. ಪೊಲೀಸ್‌ ಇಲಾಖೆ ಜೊತೆ ಸಭೆ ನಡೆಸಿ, ಶೀಘ್ರ ಕಾರ್ಯಾಚರಣೆ ನಡೆಸಲಾಗುವುದು’ ಎಂದರು.

ಇಲ್ಲೂ ನಿಯಮ ಉಲ್ಲಂಘನೆ...

ವಾಹನ ನೋಂದಣಿ ಫಲಕದ ಮೇಲೆ ಪದನಾಮ, ಸಂಘಟನೆ ಹೆಸರು ಸೇರಿದಂತೆ ಯಾವ ಬರಹವೂ ಇರಬಾರದು ಎನ್ನುವ ನಿಯಮವಿದೆ. ಆದರೆ, ಇತ್ತೀಚೆಗೆ ಕೆಲವು ರಾಜಕಾರಣಿಗಳು, ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು, ಸಂಘ–ಸಂಸ್ಥೆಗಳ ಮುಖಂಡರು ಪದನಾಮ ಮತ್ತು ಸಂಘನೆಗಳ ಹೆಸರನ್ನು ಬರೆಸಿಕೊಳ್ಳುವುದು ಹೆಚ್ಚಾಗುತ್ತಿದೆ. ಕೆಲವು ನೋಂದಣಿ ಫಲಕದಲ್ಲಿ ವಾಹನದ ನಂಬರ್‌ಗಿಂತ ದೊಡ್ಡದಾಗಿ, ಅವರ ಪದನಾಮವೇ ಇರುತ್ತದೆ.

‘ಅಯ್ಯಪ್ಪ ಗುರುಸ್ವಾಮಿಗಳ ಸಭೆ ಶೀಘ್ರ’

‘ಕೆಲವು ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೈಗೆ ಸರಕು ಸಾಗಾಟದ ವಾಹನಗಳಲ್ಲಿ ತೆರಳುತ್ತಾರೆ. ಇದನ್ನು ನಿಯಂತ್ರಿಸಲು ಕೇರಳ ಸರ್ಕಾರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಸಾರಿಗೆ ಆಯುಕ್ತರು ನಿರ್ದೇಶನದ ಮೇರೆಗೆ ಶೀಘ್ರ ಎಲ್ಲ ಗುರುಸ್ವಾಮಿಗಳ ಸಭೆ ಕರೆದು ಸಾರಿಗೆ ನಿಯಮದ ಬಗ್ಗೆ ಜಾಗೃತಿ ಮೂಡಿಸಲಾಗುವುದು’ ಎಂದು ಆರ್‌ಟಿಒ ಕೆ. ದಾಮೋದರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT