ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರಸ್ಥರ ತೆರವು; ‍ಪ್ರತಿಭಟನೆ

Last Updated 4 ಜನವರಿ 2021, 16:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಬ್ರಾಡ್‌ ವೇ ರಸ್ತೆಯಿಂದ ಎಂ.ಜಿ. ಮಾರುಕಟ್ಟೆವರೆಗಿನ ರಸ್ತೆಯ ಪಕ್ಕದಲ್ಲಿ ವ್ಯಾಪಾರ ನಡೆಸುತ್ತಿದ್ದವರನ್ನು ಪಾಲಿಕೆ ಅಧಿಕಾರಿಗಳು ಸೋಮವಾರ ತೆರವುಗೊಳಿಸಲು ಮುಂದಾದಾಗ, ಆಕ್ರೋಶಗೊಂಡ ಬೀದಿ ಬದಿ ವ್ಯಾಪಾರಸ್ಥರು ದುರ್ಗದಬೈಲ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

‘ಅನೇಕ ವರ್ಷಗಳಿಂದ ಇಲ್ಲಿ ವ್ಯಾಪಾರ ನಡೆಸುತ್ತ ಬದುಕು ಕಟ್ಟಿಕೊಂಡಿದ್ದೇವೆ. ಪಾದಾಚಾರಿ ಹಾಗೂ ಪಾರ್ಕಿಂಗ್‌ ಸ್ಥಳ ಬಿಟ್ಟು ವ್ಯಾಪಾರ ನಡೆಸುತ್ತಿದ್ದೇವೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿಲ್ಲ. ಆದರೆ, ಏಕಾಏಕಿ ವ್ಯಾಪಾರ ಸ್ಥಗಿತಗೊಳಿಸುವಂತೆ ಹೇಳುತ್ತಿದ್ದಾರೆ. ಅಲ್ಲದೆ, ನಾವು ತಂದಿರುವ ಸಾಮಾನುಗಳನ್ನು ಟ್ರಾಕ್ಟರ್‌ಗಳಲ್ಲಿ ತುಂಬಿಕೊಂಡು ಹೋಗಲು ಮುಂದಾಗಿದ್ದಾರೆ’ ಎಂದು ಕರ್ನಾಟಕ ಬೀದಿಬದಿ ವ್ಯಾಪಾರಸ್ಥರ ಸಂಘದ ಹುಬ್ಬಳ್ಳಿ ಘಟಕದ ಅಧ್ಯಕ್ಷ ಜಾಫರ್‌ ಮುಲ್ಲಾನವರ ಹೇಳಿದರು.

‘ಸರ್ಕಾರದ ಸೂಚನೆ ಮೇರೆಗೆ ಬೀದಿ ಬದಿ ವ್ಯಾಪಾರಸ್ಥರ ಸಂಘಟನೆ ರಚನೆಯಾಗಿದೆ. ಅದರ ಮೂಲಕವಾದರೂ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಬಹುದಿತ್ತು. ಆದರೆ, ಅದ್ಯಾವುದನ್ನೂ ಮಾಡದೆ ಪಾಲಿಕೆ ಅಧಿಕಾರಿಗಳು ಬಡ ವ್ಯಾಪಾರಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವ ತನಕ ನಾವು ಇಲ್ಲಿಯೇ ವ್ಯಾಪಾರ ನಡೆಸುತ್ತೇವೆ’ ಎಂದರು.

ಪ್ರತಿಭಟನಾಕಾರರನ್ನು ಪೊಲೀಸರು ತೆರವುಗೊಳಿಸಲು ಮುಂದಾದಾಗ ಪರಸ್ಪರ ವಾಗ್ವಾದ ನಡೆಯಿತು. ನಂತರ ಪಾಲಿಕೆ ಅಧಿಕಾರಿಗಳು ಬಂದು ಮನವೊಲಿಸಲು ಮುಂದಾದರು. ಅದಕ್ಕೂ ಒಪ್ಪದಿದ್ದಾಗ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದರು. ಬೀದಿ ಬದಿ ವ್ಯಾಪಾರಸ್ಥರ ಸಂಘಟನೆಯ ಇಸ್ಮಾಯಿಲ್‌ ಬಿಳಿಪ್ರಸಾದ, ರಿಯಾಜ್‌ ದಲಾಯತ್‌, ಜಾವಿದ್‌ ಟೀನ್‌ವಾಲೆ, ಪ್ರಕಾಶ ಗದಗಿನಮಠ, ಲಕ್ಷ್ಮೀ ವಾಲಿ, ಕವಿತಾ ದೊಡ್ಡವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT