ಶುಕ್ರವಾರ, ಮೇ 20, 2022
19 °C
ಕಾಂಗ್ರೆಸ್ ಅಭ್ಯರ್ಥಿ

ಜೋಶಿ ಮೇಲೆ ಕೋಪ; ಸಮಗ್ರ ಅಭಿವೃದ್ಧಿ ಜಪ: ವಿನಯ ಕುಲಕರ್ಣಿ ಜತೆ ಮಾಧ್ಯಮ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಜಿಲ್ಲೆಯನ್ನು ಪ್ರತಿನಿಧಿಸಿರುವ ಸಂಸದ ಪ್ರಹ್ಲಾದ ಜೋಶಿ ಸುಳ್ಳು ಹೇಳಿಕೊಂಡು ತಿರುಗಿದರೇ ವಿನಾ, ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ’ ಎಂದು ಟೀಕಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ, ‘ನಾನು ಸಂಸದನಾದರೆ ಅವಳಿನಗರಕ್ಕೆ 24X7 ಕುಡಿಯುವ ನೀರು ಪೂರೈಕೆ ಜತೆಗೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ’ ಎಂದರು.

ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದದಲ್ಲಿ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರುತ್ತಲೇ, ತಮ್ಮ ಅಭಿವೃದ್ಧಿ ಕನಸುಗಳನ್ನು ಅವರು ಹಂಚಿಕೊಂಡರು.

‘ಎರಡು ಕೋಟಿ ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್ ತರುವುದು, ರೈತರ ಆದಾಯ ದುಪ್ಪಟ್ಟು ಸೇರಿದಂತೆ ಹಿಂದಿನ ಚುನಾವಣೆಯಲ್ಲಿ ನೀಡಿದ ಒಂದೇ ಒಂದು ಭರವಸೆಯನ್ನು ಬಿಜೆಪಿ ಈಡೇರಿಸಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವ ಸಂಬಂಧ, ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಭರವಸೆ ನೀಡಿದ್ದ ಬಿಜೆಪಿ, ಅಧಿಕಾರಕ್ಕೆ ಬಂದ ನಂತರ ವರದಿ ಜಾರಿ ಮಾಡಿದರೆ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯಲಿದೆ ಎಂದು ಸುಪ್ರೀಂಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿದೆ. ಇದರಲ್ಲೇ ಅವರಿಗಿರುವ ರೈತರ ಕಾಳಜಿ ಏನೆಂದು ಗೊತ್ತಾಗುತ್ತದೆ’ ಎಂದರು.

‘ದನಿ ಎತ್ತದ ಜೋಶಿ’

‘ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಹ್ಲಾದ ಜೋಶಿ ಅವರು ಸಂಸತ್ತಿನಲ್ಲಿ ಒಮ್ಮೆಯೂ ದನಿ ಎತ್ತಿಲ್ಲ. ನ್ಯಾಯಮಂಡಳಿ ತೀರ್ಪು ಬಂದರೂ, ಅವರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಿಲ್ಲ. ಪ್ರಧಾನಿ ಭೇಟಿ ಮಾಡಿದಾಗ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾತನಾಡಲು ಜೋಶಿ ಅವಕಾಶ ನೀಡಲಿಲ್ಲ. ಮಹದಾಯಿ ಹೋರಾಟಗಾರರನ್ನು ಒಮ್ಮೆಯೂ ಭೇಟಿ ಮಾಡದ ಅವರು, ಆ ವಿಷಯದಲ್ಲಿ ಜನರ ದಾರಿ ತಪ್ಪಿಸಿದರು’ ಎಂದು ಟೀಕಿಸಿದರು.

‘ವಿವಾದ ಬಗೆಹರಿಸುವ ಭರವಸೆ ನೀಡಿದ್ದ ಯಡಿಯೂರಪ್ಪ ಅವರು, ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕ್ಕರ್ ಬರೆದ ಪತ್ರ ಓದಿ ಸುಮ್ಮನಾದರು. ಮುಖ್ಯಮಂತ್ರಿಯಾದವರು ಮತ್ತೊಬ್ಬ ಮುಖ್ಯಮಂತ್ರಿಗೆ ಪತ್ರ ಬರೆಯದೆ, ಪಕ್ಷದ ಅಧ್ಯಕ್ಷರಿಗೆ ಬರೆಯುತ್ತಾರೆಂದರೆ ಏನೆನ್ನಬೇಕು. ಇನ್ನು ಮೋದಿ ಅವರು ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳ ಸಭೆ ಕರೆದು ವಿವಾದ ಪರಿಹರಿಸುವ ಪ್ರಯತ್ನ ಮಾಡಲಿಲ್ಲ’ ಎಂದರು.

‘ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ಪ್ರಹ್ಲಾದ ಜೋಶಿ ನಿರಂತರವಾಗಿ ಮಾಡುತ್ತಿದ್ದಾರೆ. ಅದಕ್ಕಾಗಿ ಒಂದು ತಂಡವನ್ನೇ ಬಿಟ್ಟಿದ್ದಾರೆ. ಜಿಲ್ಲೆಗೆ ಐಐಟಿ ಬರಲು ಶ್ರಮಿಸಿದ ನಾನು, ಅದಕ್ಕಾಗಿ 470 ಎಕರೆ ಜಾಗ ಕೊಡಿಸಿದೆ. ಆದರೆ, ಅದನ್ನು ತನ್ನ ಸಾಧನೆ ಎಂದು ಜೋಶಿ ಹೇಳಿಕೊಳ್ಳುತ್ತಾರೆ. ಅವರ ಆದರ್ಶ ಗ್ರಾಮ ಹಾರೋಬೆಳವಡಿ ಅಭಿವೃದ್ಧಿ ವಿಷಯದಲ್ಲೂ ಹೀಗೆ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.‌

‘ನಾವೆಲ್ಲಾ ಒಂದೇ‘

‘ಕೆಲ ಆಚಾರ–ವಿಚಾರದಲ್ಲಿ ವ್ಯತ್ಯಾಸವಿದ್ದರೂ ನಾವು ಹಾಗೂ ವೀರಶೈವ–ಜಂಗಮರು ಒಂದೇ. ನಮ್ಮ ಮನೆಯಲ್ಲಿ ಏನೇ ಕಾರ್ಯಗಳಾದರೂ ಅವರು ಬರಲೇಬೇಕು. ಇನ್ನು ಪ್ರತ್ಯೇಕ ಧರ್ಮ ಹೋರಾಟ ಸಂಬಂಧ, ಸಚಿವ ಡಿ.ಕೆ. ಶಿವಕುಮಾರ್ ನೀಡುತ್ತಿರುವ ಹೇಳಿಕೆಗೂ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ. ಇಷ್ಟಕ್ಕೂ ಅವರು ನಮ್ಮ ಸಮುದಾಯದವರಲ್ಲ’ ಎಂದು ಸ್ಪಷ್ಟಪಡಿಸಿದರು.

‘ಎಂ.ಬಿ. ಪಾಟೀಲ ಅವರು ಸೋನಿಯಾ ಗಾಂಧಿಗೆ ಬರೆದಿದ್ದಾರೆನ್ನಲಾದ ಪತ್ರ ನಕಲಿ. ಪತ್ರಿಕೆಯೊಂದರಲ್ಲಿ ಸುದ್ದಿಯ ರೂಪದಲ್ಲಿ ಪ್ರಕಟವಾದ ಆ ಪತ್ರ ಬಿಜೆಪಿ ಪ್ರಾಯೋಜಿತ ಜಾಹೀರಾತೇ ವಿನಾ ಸುದ್ದಿಯಲ್ಲ’ ಎಂದು ಹೇಳಿದರು.

ವಿನಯ ಅಭಿವೃದ್ಧಿ ಕನಸುಗಳು

* ಅವಳಿನಗರ ವ್ಯಾಪ್ತಿಯ ಎಲ್ಲಾ ಮನೆಗಳಿಗೂ 24X7 ಕುಡಿಯುವ ನೀರು ಪೂರೈಕೆ.

* ಹುಬ್ಬಳ್ಳಿ–ಧಾರವಾಡ ಬೈಪಾಸ್ ರಸ್ತೆಯನ್ನು ಆರು ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವುದು.

* ಚನ್ನಮ್ಮ ವೃತ್ತದ ಸಂಚಾರ ದಟ್ಟಣೆ ತಗ್ಗಿಸಲು ಕ್ರಮ.

* ಬಿಆರ್‌ಟಿಎಸ್ ನ್ಯೂನತೆ ಸರಿಪಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು.

* ಜಿಲ್ಲೆಯ ಕೆರೆಗಳ ಹೂಳು ತೆಗೆಸಿ, ನೀರು ತುಂಬಿಸುವುದು. ಬ್ಯಾರೇಜ್‌ ನಿರ್ಮಾಣ.

* ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು.

* ಅಖಿಲ ಭಾರತ ವೈದ್ಯಕೀಯ ವಿಜ್ಞಾನ (ಎಐಎಂಎಸ್‌) ಸಂಸ್ಥೆಯನ್ನು ಜಿಲ್ಲೆಗೆ ತರಲು ಯತ್ನ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು