ಮಂಗಳವಾರ, ಅಕ್ಟೋಬರ್ 15, 2019
29 °C

ಮಾನವ–ವನ್ಯಜೀವಿ ಸಂಘರ್ಷ ತಗ್ಗಲಿ: ಜಿಲ್ಲಾಧಿಕಾರಿ

Published:
Updated:
Prajavani

ಹುಬ್ಬಳ್ಳಿ: ‘ಅರಣ್ಯ ನಾಶ ಹಾಗೂ ಅತಿಕ್ರಮಣದಿಂದ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಪರಿಸರದ ಉಳಿವಿಗಾಗಿ ಈ ಸಂಘರ್ಷ ನಿಲ್ಲಬೇಕು’ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು. 

65ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆಯು ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ನಗರದಲ್ಲಿ ಆಯೋಜಿಸಿದ್ದ ‘ವನ್ಯಜೀವಿಗಳಿಗಾಗಿ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ನಿತ್ಯ ಸಮೂಹ ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಕಾಡುಗಳ ನಾಶದಿಂದಾಗಿ ಕೀಟಗಳು, ಹಕ್ಕಿ ಹಾಗೂ ಪ್ರಾಣಿಗಳು ಅಳಿವಿನಿಂಚಿನಲ್ಲಿವೆ. ಹಾಗಾಗಿ, ಪ್ರಾಣಿಗಳ ಆವಾಸ್ಥಾನವನ್ನು ನಾಶ ಮಾಡದೆ ಅವುಗಳ ರಕ್ಷಣೆಗೆ ಎಲ್ಲರೂ ಬದ್ಧರಾಗಬೇಕು’ ಎಂದರು
 
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶ್‍ಕುಮಾರ್ ವನ್ಯ ಜೀವಿಗಳ ಸಂರಕ್ಷಣೆಯ ಪ್ರತಿಜ್ಞಾ ವಿಧಿ ಬೋದಿಸಿಧರು. ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ, ಅರಣ್ಯ ಅಕಾಡೆಮಿಯ ಜಂಟಿ ನಿರ್ದೇಶಕಿ ದೀಪ್ ಜೆ. ಕಾಂಟ್ರಾಕ್ಟರ್, ಡಿಸಿಪಿ ಡಾ. ಶಿವಕುಮಾರ ಗುಣಾರೆ, ಪ್ರಾಧ್ಯಾಪಕ ಸಂಜಯ್ ಕೋಟಬಾಗಿ ಹಾಗೂ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ಬಿವಿಬಿ ಎಂಜಿನಿಯರಿಂಗ್ ಕಾಲೇಜು ದ್ವಾರದಿಂದ ಆರಂಭಗೊಂಡ ನಡಿಗೆ, ಹೊಸೂರಿನ ಬಿಆರ್‌ಟಿಎಸ್‌ ಬಸ್ ನಿಲ್ದಾಣದವರೆಗೆ ತೆರಳಿ ನಂತರ, ಕಾಲೇಜಿಗೆ ವಾಪಸಾಗಿ ಅಂತ್ಯಗೊಂಡಿತು. ವಿವಿಧ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು, ಸಂಘ–ಸಂಸ್ಥೆಗಳ ಸದಸ್ಯರು ಸೇರಿದಂತೆ 1500ಕ್ಕೂ ಹೆಚ್ಚು ಮಂದಿ ನಡಿಗೆಯಲ್ಲಿ ಭಾಗವಹಿಸಿದ್ದರು.

ಅರಣ್ಯ ಅಕಾಡೆಮಿ ಪ್ರಶಿಕ್ಷಣಾರ್ಥಿಗಳು ಪ್ರಸ್ತುತಪಡಿಸಿದ ವನ್ಯಜೀವಿಗಳ ಸಂರಕ್ಷಣೆ ಕುರಿತ ಬೀದಿ ನಾಟಕ ಗಮನ ಸೆಳೆಯಿತು.

Post Comments (+)