ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಕುಸಿದ ಮನೆ ಗೋಡೆ

ವಾಣಿಜ್ಯನಗರಿಯಲ್ಲಿ ದಿನವಿಡೀ ವರುಣನ ಅಬ್ಬರ
Last Updated 16 ಜೂನ್ 2021, 14:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ಬುಧವಾರ ದಿನವಿಡೀ ಮಳೆ ಸುರಿಯಿತು. ವರುಣನ ಅಬ್ಬರಕ್ಕೆ ವಾರ್ಡ್ 53ರಲ್ಲಿ ಮನೆಯ ಗೋಡೆ ಕುಸಿದಿದ್ದರೆ, ಕೆಲವೆಡೆ ಮರಗಳು ಮುರಿದು ಬಿದ್ದಿವೆ. ಚರಂಡಿಗಳು ತುಂಬಿ ಹರಿದರೆ, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ಜನ ತೊಂದರೆ ಅನುಭವಿಸಿದರು.

ಸಿದ್ದವೀರಪ್ಪನಪೇಟೆಯ ಟುಮಕೂರು ಗಲ್ಲಿಯಲ್ಲಿರುವ ಗಜಾನನ ಮಿಸ್ಕಿನ್ ಅವರ ಮನೆ ಗೋಡೆ ಬೆಳಿಗ್ಗೆ 9.30ರ ಸುಮಾರಿಗೆ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ.

‘ಎರಡು ದಿನದ ಹಿಂದೆ ಮನೆಯವರೆಲ್ಲರೂ ಗದುಗಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದೆವು. ಬೆಳಿಗ್ಗೆ ಮನೆ ಗೋಡೆ ಬಿದ್ದಿರುವ ವಿಷಯವನ್ನು ಅಕ್ಕಪಕ್ಕದ ಮನೆಯವರು ಕರೆ ಮಾಡಿ ತಿಳಿಸಿದರು. ಹಳೆ ಮನೆಯಾಗಿದ್ದರಿಂದ ಮಳೆಗೆ ಗೋಡೆ ಶಿಥಿಲಗೊಂಡು ಬಿದ್ದಿದೆ. ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ’ ಎಂದು ಗಜಾನನ ಮಿಸ್ಕಿನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆಯಿಂದಾಗಿ ಗೋಡೆಗೆ ಹಾನಿಯಾಗಿ ಕುಸಿದಿದೆ. ಮಿಸ್ಕಿನ್ ಕುಟುಂಬಕ್ಕೆ ಮಹಾನಗರ ಪಾಲಿಕೆ ವತಿಯಿಂದ ಸೂಕ್ತ ಪರಿಹಾರ ನೀಡಬೇಕು’ ಎಂದುಸ್ಥಳಕ್ಕೆ ಭೇಟಿ ನೀಡಿದ್ದ ಪಾಲಿಕೆ ಅಧಿಕಾರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಎಸ್‌ಎಸ್‌ಕೆ ಬ್ಯಾಂಕಿನ ನಿರ್ದೇಶಕ ಪ್ರಕಾಶ ಬುರಬುರೆ ಒತ್ತಾಯಿಸಿದರು.

ಧರೆಗುರುಳಿದ ಮರ:

ಗೋಕುಲ ರಸ್ತೆಯ ಜೆ.ಪಿ. ನಗರ ಮುಖ್ಯರಸ್ಥೆಯಲ್ಲಿರುವ ಈಶ್ವರ ದೇವಸ್ಥಾನ, ಹರಿ ಮಂದಿರ ಹಾಗೂ ಕಲ್ಯಾಣ ನಗರದ ಬಳಿ ಮರಗಳು ಧರೆಗುರುಳಿವೆ. ಇದರಿಂದಾಗಿ ಇಲ್ಲಿನ ರಸ್ತೆಗಳಲ್ಲಿ ಕೆಲ ಹೊತ್ತು ಜನ ಹಾಗೂ ವಾಹನಗಳ ಓಡಾಟಕ್ಕೆ ತೊಂದರೆಯಾಯಿತು.

ಮರಗಳು ಬಿದ್ದಿದ್ದರಿಂದ ಯಾರಿಗೂ ತೊಂದರೆಯಾಗಿಲ್ಲ. ಈ ಕುರಿತು ಸ್ಥಳೀಯರು ಕರೆ ಮಾಡಿ ದೂರು ನೀಡಿದ್ದು, ಮರ ತೆರವಿಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ವಲಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಪಾಲಿಕೆಯ ನಿಯಂತ್ರಣ ಕೊಠಡಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT