ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟಾಫಿಮ್ ಜೊತೆ ವಾಲ್ಮಿ ಒಡಂಬಡಿಕೆ

ನೀರು ಬಳಕೆಯ ಕುರಿತು ಜಾಗೃತಿಗಾಗಿ ಜತೆಗೂಡಿದ ಸಂಸ್ಥೆಗಳು
Last Updated 21 ಅಕ್ಟೋಬರ್ 2022, 6:52 IST
ಅಕ್ಷರ ಗಾತ್ರ

ಧಾರವಾಡ: ರಾಜ್ಯದ ವಿವಿಧ ಸೂಕ್ಷ್ಮ ನೀರಾವರಿ ಯೋಜನೆಗಳಲ್ಲಿ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲು ರಾಜ್ಯ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆಯು (ವಾಲ್ಮಿ) ಇಸ್ರೇಲ್‌ನ ನೆಟಾಫಿಮ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ನೆಟಾಫಿಮ್ ಕಂಪನಿ ಪ್ರತಿನಿಧಿ ಶಾಯಿ ಲಾವರೆ ಮಾತನಾಡಿ, ‘ಕರ್ನಾಟಕಕ್ಕೆ ಹೋಲಿಸಿದರೆ ಭೌಗೋಳಿಕವಾಗಿ ಇಸ್ರೇಲ್ ಒಂದು ಚಿಕ್ಕ ಪ್ರದೇಶ. ಹೀಗಿದ್ದರೂ ಕೃಷಿಯಲ್ಲಿ ಅಗಾಧ ಸಾಧನೆ ಮಾಡಿ ವಿಶ್ವಕ್ಕೆ ಮಾದರಿಯಾಗಿದೆ. ಇಸ್ರೇಲ್‌ನಲ್ಲಿ ಮಳೆ ತೀರಾ ಕಡಿಮೆ ಆಗುತ್ತದೆ. ಲಭ್ಯವಿರುವ ನೀರಿನಲ್ಲೇ ಅತ್ಯಂತ ಗರಿಷ್ಠ ಮಟ್ಟದ ಕೃಷಿ ಉತ್ಪಾದನೆ ಸಾಧಿಸಲಾಗಿದೆ. ಇದಕ್ಕೆ ಮೂಲ ಕಾರಣ ಸಮುದಾಯ ಆಧಾರಿತ ಸೂಕ್ಷ್ಮ ನೀರಾವರಿ ಯೋಜನೆಗಳು’ ಎಂದರು.

‘ಮಳೆನೀರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಮುದ್ರದ ಉಪ್ಪು ನೀರನ್ನೇ ಸಂಸ್ಕರಿಸಿ ಮರು ಬಳಕೆ ಮಾಡಿಕೊಂಡು ನೀರಿನ ಅತ್ಯಂತ ಅಧಿಕ ಉತ್ಪಾದಕತೆಯನ್ನು ಸಾಧಿಸಲಾಗಿದೆ. ಸೂಕ್ಷ್ಮ ನೀರಾವರಿ ತಂತ್ರಜ್ಞಾನ ಅತ್ಯಂತ ಲಾಭದಾಯಕವಾಗಿದ್ದು, ಜಲ ಸಂಕಷ್ಟದ ಸಂದರ್ಭದಲ್ಲಿ ಆಹಾರ ಭದ್ರತೆಯನ್ನು ಸಾಧಿಸಲು ಸೂಕ್ತ ಮಾರ್ಗೋಪಾಯವಾಗಿದೆ. ವಾಲ್ಮಿಯೊಂದಿಗಿನ ಈ ಒಡಂಬಡಿಕೆಯು ಅದಕ್ಕೆ ಸಹಕಾರಿಯಾಗಲಿದೆ’ ಎಂದರು.

ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ್, ‘ರಾಜ್ಯದಲ್ಲಿಮಳೆಯಾಶ್ರಿತ ಅಥವಾ ಒಣ ಬೇಸಾಯ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿದ್ದು, ಸೂಕ್ಷ್ಮ ನೀರಾವರಿ ಅಳವಡಿಕೆಗೆ ಸಾಕಷ್ಟು ಅವಕಾಶಗಳಿವೆ. ಸೂಕ್ಷ್ಮ ನೀರಾವರಿ ಪದ್ಧತಿಯ ಅಳವಡಿಕೆಯಿಂದ ಸಾಕಷ್ಟು ಲಾಭಗಳಿವೆ. ನೀರಿನ ಬಳಕೆಯ ಸಾಮರ್ಥ್ಯವನ್ನು ಶೇ 90ಕ್ಕೆ ಹೆಚ್ಚಿಸಬಹುದು. ಬೆಳೆ ಉತ್ಪಾದಕತೆಯನ್ನೂ ಹೆಚ್ಚಿಸಬಹುದು’ ಎಂದರು.

‘ಅಮೂಲ್ಯ ನೀರು ಪೋಲಾಗುವುದನ್ನು ತಡೆಗಟ್ಟಬಹುದು. ಕೃಷಿ ಕಾರ್ಮಿಕರ ಕೊರತೆ,ಸವುಳು ಜವುಳು, ಕಳೆ ನಿಯಂತ್ರಣ, ಭೂಮಿಯ ಸಮತಟ್ಟಿನ ಸಮಸ್ಯೆಗಳನ್ನು ಏಕ ಕಾಲಕ್ಕೆ ಬಗೆಹರಿಸಬಹುದು. ಸೂಕ್ಷ್ಮ ನೀರಾವರಿ ಪದ್ಧತಿ ಹವಾಮಾನ ವೈಪರೀತ್ಯಕ್ಕೊಂದು ಪರಿಹಾರ. ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿವೆ. ನೆಟಾಫಿಮ್ ಕಂಪನಿಯೊಂದಿಗೆ ಕಳೆದ ಮೂರು ವರ್ಷಗಳಿಂದ ಪ್ರಾತ್ಯಕ್ಷಿಕೆಗಳು, ಜಾಗೃತಿ ಕಾರ್ಯಕ್ರಮಗಳು ಮತ್ತು ಪ್ರದರ್ಶನ ಮಳಿಗೆ ಮುಂತಾದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT