ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಕೌಶಲ ಕೇಂದ್ರ ತೆರೆಯಲು ಆಗ್ರಹ

ಹುಬ್ಬಳ್ಳಿಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಸಂಭ್ರಮ
Last Updated 12 ಡಿಸೆಂಬರ್ 2019, 14:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರತಿ ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ಕೌಶಲ ಕೇಂದ್ರಗಳನ್ನು ತೆರೆದು, ಮೊಬೈಲ್‌, ಟಿವಿ, ಕಂಪ್ಯೂಟರ್‌, ಮಿಕ್ಸಿ ಸೇರಿದಂತೆ ಇನ್ನಿತರ ತರಬೇತಿ ನೀಡಿ,ಸ್ವಾವಲಂಭಿ ಜೀವನ ನಡೆಸಲು ನೆರವಾಗಬೇಕು ಎಂದು ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಶಿಕ್ಷಣ ಸೇವಾಶ್ರಮ ಸಮಿತಿ ಅಧ್ಯಕ್ಷ ಐ.ಕೆ.ಲಕ್ಕುಂಡಿ ಒತ್ತಾಯಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಅಂಗವಿಕಲ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇಲ್ಲಿನ ಇಂದಿರಾ ಗ್ಲಾಸ್‌ಹೌಸ್‌ ಆವರಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಅಂಗವಿಕಲ ಮಕ್ಕಳ ಶಾಲೆಗಳಿಗೆ ರಾಜ್ಯ ಸರ್ಕಾರವು ಶಿಶು ಆಧಾರಿತ ಯೋಜನೆ ಅಡಿಯಲ್ಲಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಕಿವುಡರಿಗೆ ಮತ್ತು ಅಂಧರಿಗೆ ಶೈಕ್ಷಣಿಕ ತರಬೇತಿ ಕೊಡಲು ವಿಶೇಷ ಶಿಕ್ಷಣ ತರಬೇತಿ ಕೇಂದ್ರವನ್ನು ಮೈಸೂರಿನಲ್ಲಿ ಆರಂಭಿಸಿರುವಂತೆ ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲೂ ತಲಾ ಒಂದೊಂದು ಕೇಂದ್ರವನ್ನು ಆರಂಭಿಸಬೇಕು ಎಂದು ಹೇಳಿದರು.

ಅಂಗವಿಕಲರಿಗೆ ಆಧಾರ್‌ ಯೋಜನೆಯಡಿ ಸದ್ಯ ನೀಡಲಾಗುತ್ತಿರುವ ₹ 35 ಸಾವಿರ ಸಾಲದ ಮೊತ್ತವನ್ನು ₹ 1 ಲಕ್ಷಕ್ಕೆ ಹೆಚ್ಚಿಸಬೇಕು. ಅಂಗವಿಕಲರು ಸ್ವಯಂ ಉದ್ದಿಮೆ ತೆರೆಯಲು ಕೆಎಸ್‌ಎಫ್‌ಸಿ ಅಡಿ ಕನಿಷ್ಠ ₹ 5 ಲಕ್ಷದ ವರಗೆ ಸಾಲ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿ ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ಸಂಗೀತ ಶಾಲೆಗಳನ್ನು ಸರ್ಕಾರ ತೆರೆಯಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳನ್ನು ಶೇ 10ರಷ್ಟು ಅಂಗವಿಕಲರಿಗೆ ಮೀಸಲಿಡಬೇಕು ಎಂದು ಹೇಳಿದರು.

ಶೇ 10ರಷ್ಟು ಅನುದಾನ ಮೀಸಲು:ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಎಸ್‌.ಬಿ.ಬೇವೂರ, ಸರ್ಕಾರದ ನಿರ್ದೇಶನದಂತೆ ಮಹಾನಗರ ಪಾಲಿಕೆಯು ಶೇ 10ರಷ್ಟು ಅನುದಾನವನ್ನು ಅಂಗವಿಕಲರ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟಿದೆ ಎಂದು ಹೇಳಿದರು.

ಪಾಲಿಕೆಯು ಮೀಸಲಿಟ್ಟಿರುವ ಶೇ 10ರಷ್ಟು ಅನುದಾನದಲ್ಲಿ ಅಂಗವಿಕಲರಿಗೆ ಅನುಕೂಲವಾಗುವಂತೆ ವಿಶೇಷ ಶೌಚಾಲಯ ಮತ್ತು ಸಮುದಾಯ ಭವನಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗುತ್ತಿದೆ ಎಂದರು.

ಮಹಾವೀರ ಲಿಂಬ್‌ ಸೆಂಟರ್‌ ವತಿಯಿಂದ ಅಂಗವಿಕಲರಿಗೆ ಕೃತಕ ಕಾಲುಗಳನ್ನು ವಿತರಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತ 350 ಅಂಗವಿಕಲ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮಹಾವೀರ ಲಿಂಬ್‌ ಸೆಂಟರ್ ಅಧ್ಯಕ್ಷ ವೀರೇಂದ್ರ ಜೈನ್‌, ಸಂಸ್ಕೃತಿ ಸಂಸ್ಥೆಯ ಮಹಾವೀರ ಕುಂದೂರ, ಪ್ರಿಯದರ್ಶಿನಿ ಜನ ಸೇವಾ ಸಂಸ್ಥೆಯ ಡಿ.ಡಿ.ಮೇಚಣ್ಣವರ, ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕರ್ಪೂರಮಠ, ಧಾರವಾಡದ ಮಮತಾ ಶಿಕ್ಷಣ ಸಂಸ್ಥೆಯ ತಾರಾ ಫರ್ನಾಂಡಿಸ್‌, ಹೊನ್ನಮ್ಮ ಶಿಕ್ಷಣ ಸಂಸ್ಥೆಯ ಕವಿತಾ ಕಳಸದ, ರಂಜನಾ ಬಾದ್ರಿ, ಬಿ.ಪಿ.ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT