ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ಆರ್ಥಿಕ ಸಂಕಷ್ಟದಲ್ಲಿ ಜಲಮಂಡಳಿ

ಶೇ 90ರಷ್ಟು ಬಳಕೆದಾರರಿಂದ ನೀರಿನ ಶುಲ್ಕ ಬಾಕಿ
Last Updated 24 ಜೂನ್ 2021, 5:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌ ಲಾಕ್‌ಡೌನ್ ಬಿಸಿ ಜಲಮಂಡಳಿಗೂ ತಟ್ಟಿದ್ದು, ನೀರಿನ ಶುಲ್ಕ ಸಂಗ್ರಹ ನೆಲ ಕಚ್ಚಿದೆ. ಸೋಂಕಿನ ಭಯದಿಂದ ಗ್ರಾಹಕರು ಶುಲ್ಕ ಪಾವತಿಗೂ ಹೊರ ಬರಲು ಹಿಂದೇಟು ಹಾಕಿದ್ದರಿಂದ ಮಂಡಳಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಮೇ ತಿಂಗಳಲ್ಲಿ ಶುಲ್ಕದ ರೂಪದಲ್ಲಿ ಬರಬೇಕಿದ್ದ ₹10.85 ಕೋಟಿಯಲ್ಲಿ ಇದುವರೆಗೆ ಸಂಗ್ರಹವಾಗಿರುವುದು ಕೇವಲ ₹1.15 ಕೋಟಿ. ಅಂದರೆ, ಶೇ 10.08ರಷ್ಟು. ಸಂಗ್ರಹಿಸುತ್ತಿದ್ದ ಶುಲ್ಕದಿಂದಲೇ ಸಿಬ್ಬಂದಿಯ ವೇತನ ಸೇರಿದಂತೆ ಎಲ್ಲ ವೆಚ್ಚವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದ ಮಂಡಳಿಗೆನಿರ್ವಹಣೆಯೇ ಸವಾಲಾಗಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ವಿವಿಧ ಬಿಲ್‌ಗಳು ಸಹ ಬಾಕಿ ಉಳಿಸಿಕೊಂಡಿದೆ.

ಬಂದ್ ಆದ ಕೇಂದ್ರಗಳು
‘ನೀರಿನ ಬಳಕೆದಾರರ ಪೈಕಿ ಹೆಚ್ಚಿನ ಮಂದಿ ಹುಬ್ಬಳ್ಳಿ-ಧಾರವಾಡ ಒನ್‌ ಸೆಂಟರ್‌ಗಳಲ್ಲೇ ಪ್ರತಿ ತಿಂಗಳು ಶುಲ್ಕ ಪಾವತಿಸುತ್ತಾರೆ. ಲಾಕ್‌ಡೌನ್‌ನಿಂದಾಗಿ ಮೇ ತಿಂಗಳಲ್ಲಿ ಈ ಸೆಂಟರ್‌ಗಳು ಬಂದ್ ಆದವು. ಇದರಿಂದಾಗಿ ಶುಲ್ಕ ಸಂಗ್ರಹ ಕುಸಿತವಾಯಿತು’ ಎಂದು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ವಸಂತ ಗುಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶುಲ್ಕವನ್ನುಜಲ ಮಂಡಳಿಯು ವೆಬ್‌ಸೈಟ್ ಲಿಂಕ್ ಬಳಸಿ ಸುಲಭವಾಗಿ ಪಾವತಿಸುವ ವ್ಯವಸ್ಥೆ ಇದೆ. ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸುವಂತೆ ಪ್ರಕಟಣೆ ಹಾಗೂ ಜಾಹೀರಾತು ಮೂಲಕ ಮನವಿ ಮಾಡಿದೆವು. ಆದರೆ, ಜನರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ’ ಎಂದು ಹೇಳಿದರು.

ನಿತ್ಯ 140 ಎಂಎಲ್‌ಡಿ ಪೂರೈಕೆ
‘ನೀರಸಾಗರ ಜಲಾಶಯ ಮತ್ತು ಮಲಪ್ರಭಾ ಜಲಾಶಯ ಸೇರಿ ಹುಬ್ಬಳ್ಳಿಗೆ ನಿತ್ಯ 140 ಎಂಎಲ್‌ಡಿ (ದಶಲಕ್ಷ ಲೀಟರ್) ನೀರು ಪೂರೈಕೆಯಾಗುತ್ತದೆ. ಇದರಲ್ಲಿ 126 ಎಂಎಲ್‌ಡಿ ಗೃಹ ಬಳಕೆಗೆ, 10 ಎಂಎಲ್‌ಡಿ ಬಲ್ಕ್‌ಬಳಕೆಗೆ ಹಾಗೂ 4.5 ಎಂಎಲ್‌ಡಿ ವಾಣಿಜ್ಯ ಮತ್ತು ಗೃಹಯೇತರ ಉದ್ದೇಶಕ್ಕೆ ಬಳಕೆಯಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಹೊರಗುತ್ತಿಗೆಯವರೂ ಸೇರಿದಂತೆ ಮಂಡಳಿಯಲ್ಲಿ ಒಟ್ಟು 300 ಸಿಬ್ಬಂದಿ ಇದ್ದೇವೆ. ಸಂಬಳವೂ ಶುಲ್ಕದ ಹಣದಲ್ಲೇ ಆಗಬೇಕಿದೆ. ಸದ್ಯ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುವವರ ಹಾಗೂ ವಿವಿಧ ಕಾಮಗಾರಿಗಳನ್ನು ಕೈಗೊಂಡಿರುವ ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಈಗ ಲಾಕ್‌ಡೌನ್ ಸ್ವಲ್ಪ ಸಡಿಲಗೊಂಡಿರುವುದರಿಂದ ಶುಲ್ಕ ಸಂಗ್ರಹ ಯಥಾಸ್ಥಿತಿಗೆ ಬಂದರೆ, ಎಲ್ಲವೂ ಸರಿಹೋಗುವ ನಿರೀಕ್ಷೆ ಇದೆ’ ಎಂದರು.

ಲಿಂಕ್ ಬಳಸಿ ಶುಲ್ಕ ಪಾವತಿಸಿ
‘ಬಳಕೆದಾರರು ನೀರಿನ ಶುಲ್ಕ ಪಾವತಿಸಲು ipaymyinvoice.com ಎಂಬ ವೆಬ್‌ಸೈಟ್ ಲಿಂಕ್ ನೀಡಲಾಗಿದೆ. ಲಿಂಕ್ ಕ್ಲಿಕ್‌ ಮಾಡಿದರೆ ಕರ್ನಾಟಕ ಜಲ ಮಂಡಳಿಯ ಧಾರವಾಡ, ಹುಬ್ಬಳ್ಳಿ ಹಾಗೂ ಮಂಡ್ಯ ವಿಭಾಗದ ಮೂರು ವಿಂಡೊಗಳು ಕಾಣಿಸಿಕೊಳ್ಳುತ್ತವೆ. ಬಳಕೆದಾರರು ಹುಬ್ಬಳ್ಳಿ/ಧಾರವಾಡದ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ತಮ್ಮ ಬಿಲ್ ಸಂಖ್ಯೆಯನ್ನು ನಮೂದಿಸಿ ಶುಲ್ಕ ಪಾವತಿಸಬೇಕು’ ಎಂದು ವಸಂತ ಗುಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT