ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ.ಕ ಹಿಂದುಳಿಯಲು ನಾವೇ ಕಾರಣ

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ
Last Updated 3 ಡಿಸೆಂಬರ್ 2020, 14:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕ ಹಿಂದುಳಿಯಲು ಕಾರಣ ನಾವೇ ಹೊರತು ಬೇರೆಯವರಲ್ಲ. ಈ ಬಗ್ಗೆ ರಾಜಕಾರಣಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಈ ಭಾಗದವರು ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯ ಸಚಿವರಾಗಿದ್ದರೂ ಅಭಿವೃದ್ಧಿಗಾಗಿ ಏನು ಮಾಡಿದೆವು ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಅಧಿಕಾರ ಸಿಕ್ಕಾಗ, ನಮ್ಮ ಮೂಲವನ್ನು ಮರೆಯಬಾರದು’ ಎಂದರು.

‘ಇಂದಿನ ರಾಜಕಾರಣ ಹೇಸಿಗೆ ಮೂಡಿಸುತ್ತದೆ. ನಾವು ಈ ಕ್ಷೇತ್ರಕ್ಕೆ ಸೂಕ್ತವಲ್ಲ ಎನಿಸುತ್ತದೆಯಾದರೂ, ಅದು ನಮ್ಮನ್ನು ಬಿಡುವುದಿಲ್ಲ. ಇದೊಂದು ರೀತಿ ಡ್ರಗ್ಸ್ ಇದ್ದಂತೆ. ಒಮ್ಮೆ ತೆಗೆದುಕೊಂಡರೆ ಸುಲಭವಾಗಿ ಬಿಡಲಾಗದು. ಚುನಾವಣೆಗೆ ನಿಲ್ಲುವವರಿಗೆ ಮತ್ತು ಮತ ಹಾಕುವವರಿಗೆ ಹಣವೇ ಮುಖ್ಯವಾಗಿದೆ. ಹೀಗಿದ್ದಾಗ, ಹೊಣೆಗಾರಿಕೆ ಎಲ್ಲಿ ಬರಬೇಕು?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಅಶೋಕ ಶೆಟ್ಟರ್ ಮಾತನಾಡಿ, ‘ಶಿಕ್ಷಣ ಕ್ಷೇತ್ರದಲ್ಲಿ ಮುಂದಿನ 20 ವರ್ಷಗಳಲ್ಲಿ ಭಾರಿ ಬದಲಾವಣೆಯಾಗಲಿದ್ದು, ಉತ್ತರ ಕರ್ನಾಟಕ ಅದಕ್ಕಿನ್ನೂ ತಯಾರಾಗಿಲ್ಲ. ಧಾರವಾಡ ಶಿಕ್ಷಣ ಕಾಶಿ ಎಂದು ಹೆಸರಾಗಿದ್ದರೂ, ಈಗಲೂ ಈ ಭಾಗದವರು ಶಿಕ್ಷಣಕ್ಕಾಗಿ ಬೇರೆ ನಗರಗಳಿಗೆ ಹೋಗುವುದು ತಪ್ಪಿಲ್ಲ. ಶಿಕ್ಷಣದ ಗುಣಮಟ್ಟದ ಈ ಅಂತರವನ್ನು ನಾವು ತುಂಬಬೇಕಿದೆ’ ಎಂದರು.

‘ಹಲವು ವಿಷಯಗಳಲ್ಲಿ ನಾವು ಅಲ್ಪ ತೃಪ್ತರು. ಸಾಧನೆಯ ಹೋಲಿಕೆ ಇನ್ನೂ ಸ್ಥಳೀಯವಾಗಿಯೇ ಇದೆ. ಆಕ್ರಮಣಶೀಲರಾಗಿ ಮುನ್ನುಗ್ಗಿ ಜಾಗತಿಕ ಮಟ್ಟದ ಸ್ಪರ್ಧೆಗೆ ನಮ್ಮನ್ನು ಒಡ್ಡಿಕೊಳ್ಳಬೇಕಾಗಿದೆ. ಆಗಷ್ಟೇ, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಮೂರುಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಡಿಎಸ್ ಮುಖಂಡರಾದ ಎನ್‌.ಎಚ್. ಕೋನರಡ್ಡಿ, ರಾಜಣ್ಣ ಕೊರವಿ, ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಮಾಜಿ ಅಧ್ಯಕ್ಷರಾದ ರಮೇಶ ಪಾಟೀಲ, ಶಂಕರಣ್ಣ ಮುನವಳ್ಳಿ, ಉಪಾಧ್ಯಕ್ಷ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಜಿ.ಜಿ. ಹೊಟ್ಟಿಗೌಡರ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಜಯಪ್ರಕಾಶ ಟೆಂಗಿನಕಾಯಿ ಇದ್ದರು.

‘ಅಡ್ಡಾಡಿಕೊಂಡು ಇದ್ದವ್ನ ಮಂತ್ರಿ ಮಾಡಿದ್ದು ದೇವೇಗೌಡ್ರು’

‘ಒಮ್ಮೆ ಮನೆಗೆ ಬಂದಿದ್ದ ಯಡಿಯೂರಪ್ಪ ಅವರು, ಜೆಡಿಎಸ್‌ನಲ್ಲಿ ಯಾಕೆ ಇರ್ತಿಯಾ. ಎಂ.ಪಿ. ಪ್ರಕಾಶ್, ಸಿದ್ದರಾಮಯ್ಯ ಸೇರಿದಂತೆ ಬಹುತೇಕ ನಾಯಕರು ಹೊರಗೆ ಬಂದಿದ್ದಾರೆ. ಬಿಜೆಪಿಗೆ ಬಾ, ನಿನ್ನ ಮಂತ್ರಿ ಮಾಡ್ತಿನಿ ಎಂದು ಕರೆದರು. ನಾ ಬರೊಲ್ಲ ಎಂದೆ. ಯಾಕೆ? ಎಂದು ಪ್ರಶ್ನಿಸಿದರು. ಶಿಕ್ಷಕರ ಜತೆ ಅಡ್ಡಾಡಿಕೊಂಡಿದ್ದ ನನ್ನನ್ನು ಕರೆದು ಮಂತ್ರಿ ಮಾಡಿದ್ದು ಎಚ್‌.ಡಿ. ದೇವೇಗೌಡ್ರು. ಅಧಿಕಾರ ಕೊಟ್ಟ ಜೆಡಿಎಸ್‌ ಬಿಟ್ಟು ಎಲ್ಲಿಗೂ ಹೋಗಲ್ಲ ಎಂದೆ. ಹಾಗಾದರೆ, ಮುಂದಿನ ಚುನಾವಣೆಯಲ್ಲಿ ನಿನ್ನ ಸೋಲಿಸ್ತಿನಿ ನೋಡು ಎಂದು ಗರಂ ಆದರು. ಅಂತೆಯೇ ನನ್ನ ವಿರುದ್ಧ ಭರ್ಜರಿ ಪ್ರಚಾರ ಮಾಡಿದರು. ಆದರೂ, ನಾನು ನಂಬಿದ್ದ ಶಿಕ್ಷಕರಿಂದ ಗೆದ್ದೆ’ ಎಂದು ಹೊರಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT