ಮಂಗಳವಾರ, ಅಕ್ಟೋಬರ್ 26, 2021
23 °C

ಆರ್‌ಎಸ್‌ಎಸ್‌ ಇಲ್ಲದಿದ್ದರೆ ಭಾರತ ನಾಲ್ಕೈದು ಪಾಕಿಸ್ತಾನವಾಗುತ್ತಿತ್ತು: ಶೆಟ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಆರ್‌ಎಸ್‌ಎಸ್‌ ಅನ್ನು ಜಿದ್ದಿಗೆ ಬಿದ್ದಂತೆ ಟೀಕಿಸುತ್ತಿವೆ. ದೇಶ ರಕ್ಷಣೆಗೆ ಬದ್ಧವಾಗಿರುವ ಸಂಘ ಇಲ್ಲದೇ ಹೋಗಿದ್ದರೆ ಭಾರತದಲ್ಲಿ ಈ ವೇಳೆಗಾಗಲೇ ನಾಲ್ಕೈದು ಪಾಕಿಸ್ತಾನಗಳು ನಿರ್ಮಾಣವಾಗುತ್ತಿದ್ದವು ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ’ದೊಡ್ಡ ಇತಿಹಾಸ ಹೊಂದಿರುವ ಆರ್‌ಎಸ್‌ಎಸ್‌ನಿಂದಾಗಿ ದೇಶ ಸುರಕ್ಷಿತವಾಗಿ ಹಾಗೂ ಶಾಂತಿರೀತಿಯಿಂದ ಉಳಿದುಕೊಂಡಿದೆ. ದೇಶದ ಒಗ್ಗಟ್ಟು ಹಾಗೂ ಏಕತೆಯನ್ನು ನಿರ್ಮಿಸುವ ಕೆಲಸವನ್ನು ಆರ್‌ಎಸ್‌ಎಸ್‌ ಮಾಡುತ್ತಿದೆ’ ಎಂದರು.

’ಸಂಘವನ್ನು ಟೀಕೆ ಮಾಡುವುದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನವರಿಗೆ ಫ್ಯಾಷನ್‌ ಆಗಿದೆ. ಸ್ಪರ್ಧೆಗೆ ಬಿದ್ದವರಂತೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಸಂಘವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ರಾಜಕಾರಣದ ಸಲುವಾಗಿ ಮಾಡುತ್ತಿರುವ ಟೀಕೆಯಿದು‘ ಎಂದರು.

ಹಿಂದಿನ ಸಂಘವೇ ಬೇರೆ, ಈಗಿನ ಸಂಘವೇ ಬೇರೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್‌ ‘ರಾಜಕಾರಣದಲ್ಲಿ ಹಿಂದಿನ ಜನತಾ ಪರಿವಾರ ಬೇರೆ ಈಗಿನ ಜೆಡಿಎಸ್‌ ಬೇರೆ ಎಂದರೆ ನಂಬಬಹುದು. ಹಿಂದಿನ ಕಾಂಗ್ರೆಸ್‌ ಹಾಗೂ ಇಂದಿನ ಕಾಂಗ್ರೆಸ್‌ ಬೇರೆ ಬೇರೆ ಎಂದರೂ ಒಪ್ಪಬಹುದು. ಆರ್‌ಎಸ್‌ಎಸ್‌ನಲ್ಲಿ ವ್ಯಕ್ತಿಗಳು ಬದಲಾಗಬಹುದು. ಆದರೆ, ವಿಚಾರಧಾರೆಗಳು ಹಾಗೂ ತತ್ವ ಎಂದಿಗೂ ಒಂದೇ. ದೇಶ ಮೊದಲು ಎನ್ನುವ ಧ್ಯೇಯವನ್ನು ಸಂಘ ಈಗಲೂ ಉಳಿಸಿಕೊಂಡು ಬಂದಿದೆ’ ಎಂದು ತಿರುಗೇಟು ನೀಡಿದರು.

ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೆ ಐಟಿ ದಾಳಿ ಕುರಿತು ಕೇಳಲಾದ ಪ್ರಶ್ನೆಗೆ ‘ಈ ದಾಳಿಗೆ ರಾಜಕಾರಣದ ನಂಟು ಅಂಟಿಸಬೇಡಿ. ಕಾನೂನು ರೀತಿಯಲ್ಲಿ ಏನು ಆಗುತ್ತದೆಯೊ ಅದಾಗಲಿ ಎಂದು ಖುದ್ದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಅವರ ಮಾತಿಗೆ ನನ್ನ ಸಹಮತವಿದೆ’ ಎಂದರು.

ಬಿಜೆಪಿಯವರು ಲೂಟರ್ಸ್‌ ಎಂದು ಹುಬ್ಬಳ್ಳಿಯಲ್ಲಿ ಗುರುವಾರ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿ ’ಕೆಟ್ಟ ಪದಗಳನ್ನು ಬಳಸಿ ನಿಂದಿಸುವುದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ಕೆಟ್ಟ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು