ಸೋಮವಾರ, ಮೇ 23, 2022
21 °C
ವಿನಯ್‌ ಕುಲಕರ್ಣಿ ನ್ಯಾಯಾಂಗ ಬಂಧನಕ್ಕೆ

ವಿನಯ್‌ ಕುಲಕರ್ಣಿ ಬಂಧನ: ಠಾಣೆ ಎದುರು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಬಂಧನಕ್ಕೊಳಗಾಗುತ್ತಿದ್ದಂತೆ, ಉಪನಗರ ಠಾಣೆ ಎದುರು ಜಮಾಯಿಸಿದ ಅವರ ಅಭಿಮಾನಿಗಳು ಬಿಜೆಪಿ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಜಗದೀಶ ಶೆಟ್ಟರ್ ವಿರುದ್ಧ ಘೋಷಣೆ ಕೂಗಿದರು. ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದರು. ನವಲಗುಂದ, ಕಲಘಟಗಿಯಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನ್ಯಾಯಾಂಗ ಬಂಧನ: ಗುರುವಾರ ಸಂಜೆ 4.30ರ ಸುಮಾರಿಗೆ ವಿನಯ ಕುಲಕರ್ಣಿಯನ್ನು ಬಂಧಿಸಿದ ಅಧಿಕಾರಿಗಳು, ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಮೂರು ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಬಿಐ ಪರ ವಕೀಲರು ಕೋರಿದರು. ಆದರೆ ವಿನಯ ಕುಲಕರ್ಣಿ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತು. ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಲಿದೆ.

ಬಿಲ್ಡರ್, ಮಾಳಮಡ್ಡಿಯ ಶಿರೀಶ್ ಪಾಟೀಲ, ವಿನಯ ಡೇರಿ ಉಸ್ತುವಾರಿ ನೋಡಿಕೊಳ್ಳುವ ನಟರಾಜ ಅವರನ್ನೂ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಕೊಲೆ ನಡೆದ ಸಂದರ್ಭದಲ್ಲಿ ಉಪನಗರ ಠಾಣಾಧಿಕಾರಿಯಾಗಿದ್ದ ಚನ್ನಕೇಶವ ಟಿಂಗರೀಕರ್ ಹಾಗೂ ವಿನಯ ಕುಲಕರ್ಣಿ ಸಂಬಂಧಿ ವಿಜಯಪುರದ ಚಂದು ಇಂಡಿ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ನೀಡಿದೆ.

ಭೀಕರ ಹತ್ಯೆ: 2016ರ ಜೂನ್ 15ರಂದು ನಗರದ ಸಪ್ತಾಪುರದ ಉದಯ ಜಿಮ್‌ನಲ್ಲಿ ದುಷ್ಕರ್ಮಿಗಳು ಯೋಗೀಶಗೌಡ ಅವರನ್ನು ಮಚ್ಚು ಲಾಂಗ್‌ನಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿದ್ದರು. ಈ ಪ್ರಕರಣದಲ್ಲಿ ವಿನಯ ಕುಲಕರ್ಣಿ ಕೈವಾಡ ಇದೆ ಎಂದು ಯೋಗೀಶಗೌಡ ಕುಟುಂಬ ಆರೋಪಿಸಿತ್ತು. ಕಳೆದ ವರ್ಷ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿತ್ತು.

‘ರಾಜಕೀಯ ದುರುದ್ದೇಶ ಸಲ್ಲ’

ದಾವಣಗೆರೆ: ‘ಕಾಂಗ್ರೆಸ್‌ ಮುಖಂಡ ವಿನಯ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿರುವ ಹಿಂದೆ ರಾಜಕೀಯ ದುರುದ್ದೇಶ ಇದ್ದರೆ ಅದನ್ನು ಪಂಚಮಸಾಲಿ ಸಮಾಜ ಖಂಡಿಸುತ್ತದೆ’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಎಚ್ಚರಿಸಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು, ‘ಪ್ರಕರಣದಲ್ಲಿ ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆದರೆ, ನ್ಯಾಯ ಕೊಡಿಸುವ ಹಾದಿಯಲ್ಲಿ ಯಾರಿಗೂ ಅನ್ಯಾಯವಾಗಬಾರದು. ಪ್ರಕರಣದಲ್ಲಿ ಯಾರನ್ನು ಬೇಕಾದರೂ ಸಿಬಿಐ ವಿಚಾರಣೆ ನಡೆಸಲಿ. ಆದರೆ, ಅದರಲ್ಲಿ ರಾಜಕೀಯ ದುರುದ್ದೇಶ ಇರಬಾರದು. ಪಂಚಮಸಾಲಿ ಸಮುದಾಯ ಸದಾ ಸತ್ಯ ಮತ್ತು ನ್ಯಾಯದ ಪರವಾಗಿದೆ’ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಸಿಬಿಐ ತನ್ನ ಕೆಲಸ ಮಾಡಿದೆ: ಬಸವರಾಜ ಬೊಮ್ಮಾಯಿ

ಮಡಿಕೇರಿ: ‘ವಿನಯ ಕುಲಕರ್ಣಿ ಬಂಧನ ವಿಚಾರವಾಗಿ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡಲು ಬರುವುದಿಲ್ಲ. ಸಿಬಿಐ ತನ್ನ ಕೆಲಸ ಮಾಡಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ ಇಲ್ಲಿ ಹೇಳಿದರು.

‘ಮಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಗೆ ಅಪೇಕ್ಷಿತರಿಗೆ ಮಾತ್ರ ಆಹ್ವಾನವಿದ್ದು, ನಾನು ಭಾಗವಹಿಸಿಲ್ಲ’ ಎಂದು ಪ್ರತಿಕ್ರಿಯಿಸಿದರು.

***

ತನಿಖೆ ಒಂದು ಹಂತಕ್ಕೆ ತಲುಪಿದ್ದು ಸಂತಸ ತಂದಿದೆ. ಮಕ್ಕಳ ಸುರಕ್ಷೆಯ ದೃಷ್ಟಿಯಿಂದ ನಾನು ಕಾಂಗ್ರೆಸ್ ಸೇರಿದ್ದೇನೆಯೇ ಹೊರತು, ಪತಿಯ ಕೊಲೆ ಪ್ರಕರಣಕ್ಕೆ ಹಿನ್ನಡೆಯಾಗಲು ಅಲ್ಲ. 

- ಮಲ್ಲಮ್ಮ ಗೌಡರ, ಯೋಗೀಶಗೌಡ ಪತ್ನಿ

***

ಗುರುವಾರದ ವಿದ್ಯಮಾನ ನಮಗೆ ಬಹಳ ಖುಷಿ ತಂದಿದೆ. ಕೊಲೆಯಾದ ಮಗನ ಆತ್ಮಕ್ಕೆ ಶಾಂತಿ ದೊರೆತಂತೆ ಭಾಸವಾಗುತ್ತಿದೆ. ಈ ದಿನಕ್ಕಾಗಿ ನಾಲ್ಕು ವರ್ಷಗಳ ಹೋರಾಟ ಮಾಡಿದ್ದೇವೆ.

- ತುಂಗಮ್ಮ, ಯೋಗೀಶಗೌಡರ ತಾಯಿ

***

ಪ್ರಕರಣದಲ್ಲಿ ಸಿಬಿಐ ಪಾರದರ್ಶಕವಾಗಿ ತನಿಖೆ ನಡೆಸುತ್ತದೆ ಎಂಬ ಭರವಸೆ ನಮಗಿದೆ. ವಿನಯ ಕುಲಕರ್ಣಿ ಆರೋಪ ಮುಕ್ತರಾಗಿ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ವಿಶ್ವಾಸವಿದೆ.

– ಶ್ರೀನಿವಾಸ ಮಾನೆ, ವಿಧಾನಪರಿಷತ್ ಸದಸ್ಯ

***

ಇದು ನೂರಕ್ಕೆ ನೂರು ರಾಜಕೀಯ ಪ್ರೇರಿತ. ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.
- ವಿನಯ ಕುಲಕರ್ಣಿ, ಕಾಂಗ್ರೆಸ್‌ ಮುಖಂಡ

***

ವಿನಯ ಕುಲಕರ್ಣಿ ಆರೋಪಿ ಸ್ಥಾನದಲ್ಲಿದ್ದಾರೆ. ಸಾಕ್ಷ್ಯಾಧಾರಗಳು ದೊರೆತಿದ್ದರಿಂದ ಸಿಬಿಐ ವಶಕ್ಕೆ ಪಡೆದಿದೆ. ಯೋಗೀಶ್‌ ಗೌಡ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದು ಎಲ್ಲರ ಆಪೇಕ್ಷೆ. ಈಗಲಾದರೂ ನ್ಯಾಯ ಸಿಗಲಿ.

- ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ

***

ವಿನಯ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದ ಕ್ರಮವನ್ನು ಸ್ವಾಗತಿಸುತ್ತೇನೆ. ನಿರಪರಾಧಿಯಾಗಿ ಹೊರಬಂದರೆ ಖುಷಿಯಾಗುತ್ತದೆ. ಯಾವುದೇ ಕಾರಣಕ್ಕೂ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ.

- ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

***

ಕಾಂಗ್ರೆಸ್‌ಗೆ ಎಲ್ಲದರಲ್ಲೂ ರಾಜಕೀಯ ಹುಡುಕುವ ಹುಚ್ಚಿದೆ. ಕಾಂಗ್ರೆಸ್‌ ಆಡಳಿತದಲ್ಲೂ ಸಿಬಿಐ ದಾಳಿ ಆಗುತ್ತಿತ್ತು. ಸಿಬಿಐ ಸ್ವತಂತ್ರ ಸಂಸ್ಥೆ. ಕಾನೂನು ಪ್ರಕಾರ ವಿನಯ ಕುಲಕರ್ಣಿಯನ್ನು ಬಂಧಿಸಿದೆ.

- ನಳಿನ್‌ಕುಮಾರ್ ಕಟೀಲ್‌, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ

***

ಆರಂಭದಿಂದಲೂ ಈ ಪ್ರಕರಣದಲ್ಲಿ ಗುಮಾನಿಗಳು ಕೇಳಿಬರುತ್ತಿದ್ದವು. ನಾಲ್ಕು ವರ್ಷದ ಬಳಿಕ ಸಿಬಿಐ ತನಿಖೆ ನಡೆಯುತ್ತಿದೆ. ಕೊಲೆಯ ಕುರಿತ ಸಂಪೂರ್ಣ ಸತ್ಯ ಹೊರಬರಲಿ. ಸಿಬಿಐ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕೆಲಸ ಮಾಡಲಿ. ರಾಜಕೀಯ ಪ್ರಭಾವದಿಂದ ತನಿಖೆ ನಡೆಸುವುದು ಬೇಡ.

- ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

***

ವಿನಯ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ‍ಪಡೆದಿರುವುದು ರಾಜಕೀಯ ಪ್ರೇರಿತ. ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ವಿನಯ ಕುಲಕರ್ಣಿ ಅವರೊಂದಿಗೆ ಮಾತನಾಡಿದ್ದೇನೆ. ತಪ್ಪು ಮಾಡಿಲ್ಲವೆಂದು ಅವರು ಹೇಳಿದ್ದಾರೆ. ಪ್ರಕರಣ ವಿಚಾರಣೆಯ ಹಂತದಲ್ಲಿರುವುದರಿಂದ ಹೆಚ್ಚು ಹೇಳಲು ಇಷ್ಟಪಡುವುದಿಲ್ಲ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರಲ್ಲಿ ಪ್ರೌಢಿಮೆ ಇಲ್ಲ. ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ.  

- ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

***

ಬಿಜೆಪಿ ರಾಜಕೀಯ ಕುತಂತ್ರಗಳನ್ನು ಮಾಡುತ್ತಿದೆ. ಸಿಬಿಐ ಅಧಿಕಾರಿಗಳು ಒತ್ತಡಕ್ಕೆ ಮಣಿಯದೆ, ಕಾನೂನು ಚೌಕಟ್ಟಿನಲ್ಲಿ ವಿಚಾರಣೆ ನಡೆಸಲಿ. ಆ ಭಾಗದ ಬಿಜೆಪಿ ನಾಯಕರು ಅವರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ರಾಜಕೀಯದಲ್ಲಿ ಕಾಲಚಕ್ರ ತಿರುಗುತ್ತಿರುತ್ತದೆ. ನಿಮ್ಮ ಕಚೇರಿ ರಾಜಕೀಯ ಅಸ್ತ್ರವಾಗಬಾರದೆಂದು ಸಿಬಿಐ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ.

- ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

***

ವಿನಯ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿರುವುದಕ್ಕೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ವಿನಯ್‌ ಕುಲಕರ್ಣಿ ಅವರ ಮೇಲೆ ಆರೋಪವಿತ್ತು. ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಅವರ ವಿರುದ್ಧ ಹುಬ್ಬಳ್ಳಿ- ಧಾರವಾಡದಲ್ಲಿ ಸಾಕಷ್ಟು ಹೋರಾಟಗಳು ನಡೆದಿದ್ದವು. ಆ ಹೋರಾಟಗಳಿಗೆ ಮಣಿದು ಕಾಂಗ್ರೆಸ್‌ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಇದರಲ್ಲಿ ಬಿಜೆಪಿ ಸರ್ಕಾರದ ಪಾತ್ರವೇನಿದೆ?

ಆದಾಯ ತೆರಿಗೆ, ಇ.ಡಿ ಅಥವಾ ಸಿಬಿಐ ದಾಳಿ ನಡೆದರೆ ಇಲ್ಲವೇ ಯಾರನ್ನಾದರೂ ಬಂಧಿಸಿದರೆ ಅದೆಲ್ಲಕ್ಕೂ ರಾಜಕೀಯ ದ್ವೇಷ ಎಂದು ಬಣ್ಣ ಕಟ್ಟಿ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ.

- ಡಾ.ಸಿ.ಎನ್. ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು