ಹುಬ್ಬಳ್ಳಿ: ಅವಿಭಜಿತ ಧಾರವಾಡ ಜಿಲ್ಲೆಯ ಭೂರಹಿತರಿಗೆ ಸಾಮೂಹಿಕವಾಗಿ ಉಳುಮೆ ಮಾಡಲು ಅವಕಾಶ ಮಾಡಿಕೊಟ್ಟ ಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಲಘಟಗಿಯ `ಸಹಕಾರಿ ಬೇಸಾಯ ಸಂಘ~ವನ್ನು ಬರ್ಖಾಸ್ತುಗೊಳಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಹಾಲಿ ಅಲ್ಲಿ ಉಳುಮೆ ಮಾಡುತ್ತಿರುವ ಬೇಸಾಯ ಸಂಘದ ಪ್ರತಿ ಸದಸ್ಯರಿಗೆ ತಲಾ ಎರಡು ಎಕರೆ ಜಮೀನು ನೀಡಿ, ಉಳಿದ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಯೋಜನೆ ಜಿಲ್ಲಾಡಳಿತ ರೂಪಿಸಿದೆ.
1950ರಲ್ಲಿ ಹುಬ್ಬಳ್ಳಿಯ ವೆಂಕಟೇಶ ಮಾಗಡಿ ಎಂಬ ಸಹಕಾರಿ ಮುಖಂಡರು ಕಲಘಟಗಿಯಿಂದ 4 ಕಿ.ಮೀ. ದೂರದ ಗಳಗಿನಕಟ್ಟಿಯಲ್ಲಿ ಸಹಕಾರಿ ಬೇಸಾಯ ಸಂಘವನ್ನು ಆರಂಭಿಸಿದ್ದರು. ಇಲ್ಲಿ ಭೂ ರಹಿತರು ಷೇರುದಾರರಾಗಿ ಸದಸ್ಯತ್ವ ಪಡೆದು ಸಾಮೂಹಿಕವಾಗಿ ಉಳುಮೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ನಂತರ ಇಲ್ಲಿ ಬಂದ ಲಾಭವನ್ನು ಸಮನಾಗಿ ಹಂಚಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ರಷ್ಯಾದ ಕಮ್ಯುನಿಸ್ಟ್ ಆಡಳಿತದಲ್ಲಿ ಕಂಡು ಬರುತ್ತಿದ್ದ `ಸಾಮೂಹಿಕ ಉಳುಮೆಯ ತತ್ವ~ ಕಲಘಟಗಿ ತಾಲ್ಲೂಕಿನಲ್ಲಿ ಆಚರಣೆಗೆ ಬಂದಿತ್ತು. ಇದಕ್ಕೆ ಸರ್ಕಾರದಿಂದ ಆಗ ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡಂತೆ 560 ಎಕರೆ ಜಮೀನು ಮಂಜೂರು ಮಾಡಲಾಗಿತ್ತು.

ನಂತರದ ದಿನಗಳಲ್ಲಿ ಒಳಜಗಳ-ದುರಾಡಳಿತದಿಂದಾಗಿ ಸಂಘ ದುಸ್ಥಿತಿಗೆ ತಲುಪಿತ್ತು. 2001ರ ಜುಲೈ 15ರಂದು ಸಹಕಾರ ಇಲಾಖೆ ಸಂಘವನ್ನು ಸಮಾಪನ (ಲಿಕ್ವಿಡೇಟ್)ಗೊಳಿಸಿ ನಿರ್ವಹಣೆಯನ್ನು ತಹಸೀಲ್ದಾರ್ಗೆ ವಹಿಸಿತ್ತು. ಇದರ ವಿರುದ್ಧ ಕಂದಾಯ ಇಲಾಖೆ ಟ್ರಿಬ್ಯುನಲ್ಗೆ ಸಂಘದ ಸದಸ್ಯರು ಮೇಲ್ಮನವಿ ಸಲ್ಲಿಸಿದ್ದರು. 2006ರಲ್ಲಿ ಅದು ವಜಾಗೊಂಡಿತ್ತು. ಆಗಿನಿಂದಲೂ ಜಿಲ್ಲಾಡಳಿತದ ಸಪರ್ದಿಯಲ್ಲಿದ್ದ ಜಮೀನನ್ನು ಸಂಘದ ಹಿಂದಿನ ಸದಸ್ಯರೇ ಉಳುಮೆ ಮಾಡುತ್ತಿದ್ದರು. ಕಬ್ಬು, ಬತ್ತ, ಮೆಕ್ಕೆಜೋಳ ಬೆಳೆಯುವ ಈ ಜಮೀನು ಕಲಘಟಗಿ ಪಟ್ಟಣಕ್ಕೆ ತಾಗಿಕೊಂಡೇ ಇರುವುದರಿಂದ ಅದನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಯೋಜನೆ ಜಿಲ್ಲಾಡಳಿತ ಹೊಂದಿದೆ.

ಹಾಲಿ ಸಾಗುವಳಿ ಮಾಡುತ್ತಿರುವ 115 ಕುಟುಂಬಗಳಿಗೆ ಪರಿಹಾರ ರೂಪದಲ್ಲಿ ತಲಾ ಎರಡು ಎಕರೆ ಜಮೀನು ನೀಡಿದರೆ ಕನಿಷ್ಠ 300 ಎಕರೆಯಷ್ಟು ಜಮೀನು ಸರ್ಕಾರದ ಅಧೀನದಲ್ಲಿ ಉಳಿಯಲಿದೆ ಎಂಬುದು ಜಿಲ್ಲಾಡಳಿತದ ಯೋಚನೆ. ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಂಘದ ಜಮೀನು ಹಂಚಿಕೆಗೆ ಸಂಬಂಧಿಸಿದಂತೆ ಈಗಾಗಲೇ ಸರ್ವೆ ಕಾರ್ಯ ನಡೆಸಿ ಯೋಜನೆ ಸಿದ್ಧಪಡಿಸಲಾಗಿದೆ. ನೂತನ ಜಿಲ್ಲಾಧಿಕಾರಿ ಬಂದ ನಂತರ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎನ್ನುತ್ತಾರೆ.

ಹಾಲಿ ಬೇಸಾಯ ನಡೆಸುತ್ತಿರುವ ಭೂರಹಿತರಿಗೆ ಅನ್ಯಾಯ ಮಾಡದೆ ಜಿಲ್ಲಾಡಳಿತ ಸಾರ್ವಜನಿಕ ಉದ್ದೇಶದ ಯಾವುದೇ ಯೋಜನೆ ಮಾಡಿದರೂ ಸ್ವಾಗತಿಸುವುದಾಗಿ ಕ್ರೆಡಲ್ ಅಧ್ಯಕ್ಷ ಸಿ.ಎಂ. ನಿಂಬಣ್ಣನವರ ಹೇಳುತ್ತಾರೆ.

ಜಾಗದ ಸಮಸ್ಯೆಗೆ ಪರಿಹಾರ
ಕಲಘಟಗಿ ಪಟ್ಟಣದಲ್ಲಿ ಕೈಗಾರಿಕಾ ಪ್ರದೇಶ, ಕ್ರೀಡಾಂಗಣ, ಸಮುದಾಯ ಭವನ ನಿರ್ಮಾಣದ ಉದ್ದೇಶವಿದ್ದರೂ ಜಾಗ ಸಿಗದೆ ಯೋಜನೆ ಅನುಷ್ಠಾನಗೊಂಡಿರಲಿಲ್ಲ. ನಂಜುಂಡಪ್ಪ ವರದಿಯನ್ವಯ ಹಿಂದುಳಿದ ತಾಲ್ಲೂಕು ಎನಿಸಿದ ಕಲಘಟಗಿಯಲ್ಲಿ ಕೆಎಸ್ಆರ್ಟಿಸಿ ಡಿಪೊ ನಿರ್ಮಾಣಕ್ಕೆ ಸರ್ಕಾರದಿಂದ 2 ಕೋಟಿ ರೂಪಾಯಿ ಮಂಜೂರಾಗಿದೆ. ಜಾಗ ಸಿಗದೆ ಇಲ್ಲಿಯವರೆಗೆ ಕಾಮಗಾರಿ ಆರಂಭಗೊಂಡಿಲ್ಲ. ಅದಲ್ಲದೇ ತಾಲ್ಲೂಕು ಆಡಳಿತದ ವ್ಯಾಪ್ತಿಯ ಹಲವು ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಷ್ಟು ದೊಡ್ಡ ಪ್ರಮಾಣದ ಜಾಗ ಒಂದೆಡೆ ದೊರೆತರೆ ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡಲು ಅನುಕೂಲವಾಗಲಿದೆ ಎಂಬುದು ಜಿಲ್ಲಾಡಳಿತದ ಯೋಜನೆ.

ಸಿಎಂ ಹಸಿರು ನಿಶಾನೆ: ಇತ್ತೀಚೆಗೆ ಹುಬ್ಬಳ್ಳಿಯ ಸರ್ಕ್ಯೂಟ್ಹೌಸ್ನಲ್ಲಿ ನಡೆದ ಸಭೆಯಲ್ಲಿ ಸಿಎಂ ಜಗದೀಶ ಶೆಟ್ಟರ್ ಜಮೀನು ಹಂಚಿಕೆ ಯೋಜನೆಯನ್ನು ತುರ್ತಾಗಿ ಕಾರ್ಯಗತಗೊಳಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದರು. ಸದಸ್ಯರಿಗೆ ಹಂಚಿ ಉಳಿದ ಜಾಗದಲ್ಲಿ ಯಾವುದೇ ಯೋಜನೆ ಅನುಷ್ಠಾನಕ್ಕೆ ಮುಂದಾದರೂ ಅದಕ್ಕೆ ಮಂಜೂರಾತಿ ಕೊಡುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.