ಹುಬ್ಬಳ್ಳಿ: ‘ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್) ಮಾಜಿ ನಿರ್ದೇಶಕರಾದ ಡಾ. ವಿ.ಎನ್.ಬಿರಾದಾರ, ಡಾ.ಕಲಾದಗಿ ಮತ್ತು ಡಾ. ಎಂ.ಜಿ.ಹಿರೇಮಠ ನಡೆಸಿದ್ದಾರೆ ಎನ್ನಲಾದ ಅಕ್ರಮಗಳ ತನಿಖೆಯನ್ನು ಮತ್ತೆ ಲೋಕಾಯುಕ್ತಕ್ಕೇ ವಹಿಸಬೇಕು’ ಎಂದು ವಿಧಾನ ಪರಿಷತ್ತಿನ ಸರ್ಕಾರದ ಭರವಸೆಗಳ ಸಮಿತಿ ಅಧ್ಯಕ್ಷ ಎಂ.ಸಿ.ನಾಣಯ್ಯ ಆಶಿಸಿದರು.

ಬುಧವಾರ ಕಿಮ್ಸ್ಗೆ ಭೇಟಿ ನೀಡಿ ವಿವಿಧ ವಿಭಾಗಗಳಲ್ಲಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಅಕ್ರಮಗಳ ಕುರಿತು ಲೋಕಾಯುಕ್ತ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬೇರೆ ಏಜೆನ್ಸಿಯಿಂದ ತನಿಖೆ ನಡೆಸಲು ಸರ್ಕಾರ ಮುಂದಾಗಬಾರದು. ಮತ್ತೆ ತನಿಖೆ ನಡೆಸುವುದಾದರೆ ಅದನ್ನು ಲೋಕಾಯುಕ್ತಕ್ಕೇ ವಹಿಸಬೇಕು ಎಂದು ಹೇಳಿದರು.

ಅಕ್ರಮ ಎಸಗಿದ ನಿರ್ದೇಶಕರ ಪೈಕಿ ಒಬ್ಬರು ಈಗ ನಿರ್ದೇಶಕರಾಗಲು ಹವಣಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಗಮನಕ್ಕೆ ತಂದಾಗ ‘ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು, ಈ ಕುರಿತು ಸರ್ಕಾರದ ಜೊತೆ ಮಾತುಕತೆ ನಡೆಸಲಾಗುವುದು’ ಎಂದು ತಿಳಿಸಿದರು.

‘2003–06ರ ಅವಧಿಯಲ್ಲಿ ವಿಧಾನ ಪರಿಷತ್ತಿನಲ್ಲಿ ವಿಮಲಾಗೌಡ ಮತ್ತು ವಿಧಾನಸಭೆಯಲ್ಲಿ ಬಸವರಾಜ ಬೊಮ್ಮಾಯಿ ಪ್ರಶ್ನೆ ಕೇಳಿ ಕಿಮ್ಸ್ನಲ್ಲಿ ನಡೆದ ಅಕ್ರಮಗಳ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಗಮನ ಸೆಳೆದಿದ್ದರು. ಅಕ್ರಮ ಪ್ರಕರಣವನ್ನು ಅಂದು ಸರ್ಕಾರ ಲೋಕಾಯುಕ್ತಕ್ಕೆ ವಹಿಸಿತ್ತು. ತನಿಖೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು ₨ 50 ಲಕ್ಷಕ್ಕೂ ಹೆಚ್ಚು ಮೊತ್ತದ ಅಕ್ರಮ ನಡೆದಿರುವುದನ್ನು ಪತ್ತೆ ಮಾಡಿದ್ದರು.

ನಂತರ ಲೋಕಾಯುಕ್ತದಿಂದ ಕಡತಗಳನ್ನು ಹಿಂಪಡೆದ ಸರ್ಕಾರ ಅಕ್ರಮ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು’ ಎಂದು ನಾಣಯ್ಯ ಹೇಳಿದರು.

‘ಈ ಭಾಗದ ದೊಡ್ಡ ಆಸ್ಪತ್ರೆಯಾದ ಕಿಮ್ಸ್ ಅಭಿವೃದ್ಧಿಗೆ ಮಾರಕವಾಗುವ ಯಾವುದೇ ಪ್ರವೃತ್ತಿಯನ್ನು ತಡೆಯಬೇಕು. ಗುತ್ತಿಗೆ ಲಾಬಿ ಜೋರಾಗಿದ್ದರೆ ಅದನ್ನು ತಡೆಯಬೇಕು. ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿದ್ದು ಸಾಕಷ್ಟು ಅಭಿವೃದ್ಧಿ ಆಗಿದೆ. ಹಿಂದೆ 200 ಇದ್ದ ಸೀಟು ನಂತರ 50ಕ್ಕೆ ಇಳಿದಿತ್ತು. ಈಗ 150 ಆಗಿದ್ದರೂ ಹಳೆಯ ವೈಭವ ಮತ್ತೆ ಸೃಷ್ಟಿಯಾಗಬೇಕು’ ಎಂದು ಅವರು ಆಶಿಸಿದರು.

‘ಆರೋಗ್ಯ ಸೇವೆ ಎಲ್ಲ ಸೇವೆಗಳಿಗಿಂತ ಮುಖ್ಯ. ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ ವೈದ್ಯಕೀಯ ಕಾಲೇಜುಗಳು ಈ ಹಿಂದೆ ಪ್ರಮುಖ ಚಿಕಿತ್ಸಾ ಕೇಂದ್ರಗಳಾಗಿದ್ದವು. ಆದರೆ ಈಗ ಇವು ಆರೋಗ್ಯ ಕೇಂದ್ರಗಳ ಮಟ್ಟಕ್ಕೆ ಇಳಿದಿರುವುದು ಬೇಸರದ ಸಂಗತಿ. ಇವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು ಬಿಟ್ಟು ಮತ್ತೆ ಹೊಸ ಕಾಲೇಜುಗಳನ್ನು ಸ್ಥಾಪಿಸಲು ಹೊರಟಿರುವುದು ಸರಿಯಲ್ಲ’ ಎಂದು ಅವರು ಹೇಳಿದರು.

ಸೌಲಭ್ಯಗಳ ಕೊರತೆ
ಕಿಮ್ಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರ ಸಭೆ ನಡೆಸಿದ ನಾಣಯ್ಯ ಸಮಸ್ಯೆಗಳಿದ್ದರೆ ಮುಕ್ತವಾಗಿ ತಿಳಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯರು ಸಿಬ್ಬಂದಿ ಕೊರತೆ ಮತ್ತು ಕೆಲವು ಸೌಲಭ್ಯಗಳ ಅಲಭ್ಯದ ಕುರಿತು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಾಣಯ್ಯ ಸೌಲಭ್ಯಗಳನ್ನು ಒದಗಿಸದೆ ಉತ್ತಮ ಆರೋಗ್ಯ ಸೇವೆ ಬಯಸುವುದು ತಪ್ಪು. ಆದ್ದರಿಂದ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಎಸ್.ಎಸ್.ಹರಸೂರು ಅವರಿಗೆ ಸೂಚಿಸಿದರು. ಬಳಕೆದಾರರ ಶುಲ್ಕ ಹೆಚ್ಚಿಸುವ ಕುರಿತು ಕೂಡ ಚಿಂತನೆ ನಡೆಸಬೇಕು ಎಂದು ಅವರು ಹೇಳಿದರು.

ಮಾಜಿ ನಿರ್ದೇಶಕ ಬಿ.ಎಸ್.ಮದಕಟ್ಟಿ ಮಾತನಾಡಿ ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಮೂಲ ಸೌಲಭ್ಯಗಳು ಮತ್ತು ಸರಿಯಾದ ಸಂಖ್ಯೆಯ ಸಿಬ್ಬಂದಿ ಇಲ್ಲ ಎಂದು ದೂರಿದರು.

ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಮಹೇಶ ದೇಸಾಯಿ, ಸಿಬ್ಬಂದಿ ಕೊರತೆ, ಸಾಮಾಜಿಕ ಕಾರ್ಯಕರ್ತರು ಮತ್ತು ಆಪ್ತ ಸಲಹೆಗಾರರ ಕೊರತೆಯಿಂದಾಗಿ ಮಾನಸಿಕ ರೋಗ ಚಿಕಿತ್ಸೆಗೆ ತೊಂದರೆಯಾಗಿದೆ ಎಂದು ತಿಳಿಸಿದರು.

ಕಣ್ಣು, ಕಿವಿ ಮತ್ತು ಗಂಟಲು ವಿಭಾಗದಲ್ಲೂ ಸಿಬ್ಬಂದಿ ಕೊರತೆ ಇದೆ. ಉತ್ತರ ಕರ್ನಾಟಕದಲ್ಲಿ ಆಡಿಯಾಲಜಿ ವಿಭಾಗದ ಅಗತ್ಯವಿದೆ ಎಂಬ ಬೇಡಿಕೆಯೂ ಬಂತು.

ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಡಾ.ರಾಮಚಂದ್ರ ಗೌಡ, ದಯಾನಂದ, ಕೆ.ವಿ.ನಾರಾಯಣಸ್ವಾಮಿ, ಶಾಸಕ ಎನ್.ಎಚ್.ಕೋನರೆಡ್ಡಿ, ಕಿಮ್ಸ್ ನಿರ್ದೇಶಕಿ ಡಾ. ವಸಂತಾ ಕಾಮತ್, ವೈದ್ಯಕೀಯ ಅಧೀಕ್ಷಕ ಡಾ.ಮಲ್ಲಿಕಾರ್ಜುನ ಸ್ವಾಮಿ, ಮುಖ್ಯ ಆಡಳಿತಾಧಿಕಾರಿ ಅಶೋಕ, ಎಸ್ಟೇಟ್ ಅಧಿಕಾರಿ ಶ್ರೀಪಾದ ಸಾವಕಾರ ಮುಂತಾದವರು ಉಪಸ್ಥಿತರಿದ್ದರು.

ಜೆನೆರಿಕ್ ಔಷಧಿ ಮಳಿಗೆ
ಕಿಮ್ಸ್ನಲ್ಲಿ ಪೂರ್ಣ ಪ್ರಮಾಣದ ಜೆನೆರಿಕ್ ಔಷಧಿ ಮಳಿಗೆಯನ್ನು ತೆರೆಯುವ ಕುರಿತು ಚಿಂತನೆ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಎಸ್.ಎಸ್.ಹರಸೂರ ತಿಳಿಸಿದರು.

ಜೆನೆರಿಕ್ ಔಷಧಿ ಕುರಿತು ನಾಣಯ್ಯ ಮಾಹಿತಿ ಕೇಳಿದಾಗ ಪ್ರತಿಕ್ರಿಯಿಸಿದ ಕಿಮ್ಸ್ ನಿರ್ದೇಶಕಿ ಡಾ.ವಸಂತಾ ಕಾಮತ್ ಮಳಿಗೆ ಇದ್ದರೂ ಎಲ್ಲ ಔಷಧಿಗಳು ಸಿಗುವುದಿಲ್ಲ. ಮುಖ್ಯ ಔಷಧಿ ಅಂಗಡಿಯಲ್ಲಿ ಎಲ್ಲ ಬಗೆಯ ಔಷಧಿ ದೊರಕುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹರಸೂರ ರಾಜ್ಯದ ನಾಲ್ಕು ಕಡೆಗಳಲ್ಲಿ ಪ್ರಾಯೋಗಿಕವಾಗಿ ಜೆನೆರಿಕ್ ಔಷಧಿ ಮಳಿಗೆಗಳನ್ನು ತೆರೆಯಲಾಗಿದೆ, ಹುಬ್ಬಳ್ಳಿಯಲ್ಲಿ ಕೂಡ ಇಂಥ ಮಳಿಗೆ ಸ್ಥಾಪಿಸುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿಸಿದರು.

ಗೊಂದಲ ತಂದ ‘ಕುರ್ಚಿ’ !
ಕಿಮ್ಸ್ನ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಕೆಲವು ದಿನಗಳಿಂದ ‘ಕುರ್ಚಿ’ಗಾಗಿ ನಡೆಯುತ್ತಿರುವ ಜಗಳದ ವಿಷಯ ಭರವಸೆಗಳ ಸಮಿತಿಯ ಮುಂದೆ ಬಂದು ಗೊಂದಲ ಸೃಷ್ಟಿಯಾಯಿತು.

ವಿಭಾಗದ ಉಸ್ತುವಾರಿ ಮುಖ್ಯಸ್ಥೆ ಡಾ.ಸುಮನ್ ಡಂಬಳಕರ, ಹಿಂದಿನ ಮುಖ್ಯಸ್ಥರಾದ ಎಂ.ಸಿ. ಚಂದ್ರು ಗದಗಕ್ಕೆ ವರ್ಗವಾಗಿ ಹೋಗುವಾಗ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಮುಖ್ಯಸ್ಥರ ಕೊಠಡಿಗೆ ಬೀಗ ಜಡಿದಿದ್ದಾರೆ, ಅನೇಕ ಬಾರಿ ಹೇಳಿದರೂ ಪ್ರತಿಕ್ರಿಯಿಸಲಿಲ್ಲ. ಇತ್ತೀಚೆಗೆ ಬಂದು ಅಧಿಕಾರದಿಂದ ಮಾತನಾಡಿ ಹೋಗಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಾಣಯ್ಯ ಹೀಗೆ ಮಾಡುವುದು ತಪ್ಪು. ಇದು ನಿಜವಾಗಿದ್ದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಹುದಾಗಿದೆ ಎಂದು ಹೇಳಿದರು.

ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಕಿಮ್ಸ್ ನಿರ್ದೇಶಕಿ ಹಿಂದಿನ ಮುಖ್ಯಸ್ಥರು ಮತ್ತೆ ಇಲ್ಲಿಗೆ ವರ್ಗವಾಗಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹಿಂದೆ ಕುಳಿತಿದ್ದ ಚಂದ್ರು ಮುಂದೆ ಬಂದರು, ಎಲ್ಲರೂ ಗೊಂದಲದಲ್ಲಿ ಸಿಲುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.