ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವುಶು 60 ಕೆ.ಜಿ ವಿಭಾಗ: ರೋಶಿಬಿನಾ ದೇವಿಗೆ ಬೆಳ್ಳಿ

ಚೀನಾ ಎದುರಾಳಿಗೆ ಚಿನ್ನ
Published 28 ಸೆಪ್ಟೆಂಬರ್ 2023, 12:10 IST
Last Updated 28 ಸೆಪ್ಟೆಂಬರ್ 2023, 12:10 IST
ಅಕ್ಷರ ಗಾತ್ರ

ಹಾಂಗ್‌ಝೌ : ಭಾರತದ ನವೊರೆಮ್ ರೋಶಿಬಿನಾ ದೇವಿ ಅವರು ವುಶು  ಮಹಿಳೆಯರ 60 ಕೆ.ಜಿ. ಸಾಂಡಾ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡರು. ಚೀನಾದ ವು ಷಿಯೋವಿ ಅವರು ಫೈನಲ್‌ನಲ್ಲಿ 2–0 ಯಿಂದ ಮಣಿಪುರದ ರೋಶಿಬಿನಾ ಅವರನ್ನು ಮಣಿಸಿದರು.

ಹಾಲಿ ಚಾಂಪಿಯನ್ ಸಹ ಆಗಿರುವ ಷಿಯೋವಿ ಎದುರು ಹಿಡಿತಪಡೆಯಲು ರೋಶಿಬಿನಾ ಆರಂಭದಿಂದಲೇ ಪರದಾಡಿದರು. ಆಕ್ರಮಣಕಾರಿಯಾಗಿದ್ದ ವು ಎರಡೂ ಸುತ್ತುಗಳಲ್ಲಿ ಮೇಲುಗೈ ಸಾಧಿಸಿದರು. ಎರಡು ಸುತ್ತುಗಳ ನಂತರ ತೀರ್ಪುಗಾರರು ಆತಿಥೇಯ ದೇಶದ ಸ್ಪರ್ಧಿಯನ್ನು ವಿಜೇತರೆಂದು ಸಾರಿದರು.

ಮೊದಲ ಸುತ್ತಿನಲ್ಲಿ ವು ಅವರ ಕಾಲನ್ನು ನಿಯಂತ್ರಣಕ್ಕೆ ಪಡೆದು ಅರೆನಾದ ಮೂಲೆಗೆ ಸರಿಸಿದರೂ, ಚೀನಾದ ಸ್ಪರ್ಧಿ ಬಗ್ಗಲಿಲ್ಲ. ಪ್ರತಿದಾಳಿ ನಡೆಸಿ ಆ ಸುತ್ತನ್ನು ಗೆದ್ದರು. ಎರಡನೇ ಸುತ್ತಿನಲ್ಲೂ ವು ಅವರು ತೊಂದರೆಗೆ ಸಿಲುಕಲಿಲ್ಲ.

22 ವರ್ಷದ ರೋಶಿಬಿನಾ ಅವರು 2018ರ ಜಕಾರ್ತಾ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

‘ಸಂತ್ರಸ್ತರ ಜಯ’:

ವುಶು ಸ್ಪರ್ಧೆಯಲ್ಲಿ ತಾವು ಗೆದ್ದ ಪದಕ, ಮಣಿಪುರ ಹಿಂಸಾಚಾರದಲ್ಲಿ ಸಂತ್ರಸ್ತರಿಗೆ ಸಂದ ಜಯ ಎಂದು ರೋಶಿಬಿನಾ ದೇವಿ ಹೇಳಿದ್ದಾರೆ.

ಮಣಿಪುರದ ವಿಷ್ಣುಪುರ ಜಿಲ್ಲೆಯ ಕ್ವಾಶಿಪಾಯಿ ಜಿಲ್ಲೆಯ ಮೈತೇಯಿ ಜನಾಂಗಕ್ಕೆ ಸೇರಿದವರು. ಅವರ ಪಕ್ಕದ ಜಿಲ್ಲೆ ಚುರಾಚಾಂದಪುರ ಜಿಲ್ಲೆಯಲ್ಲಿ ಕುಕಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಮೇ ತಿಂಗಳಿಂದ ಈ ಎರಡು ಸಮುದಾಯಗಳ ನಡುವೆ ಭುಗಿಲೆದ್ದ ಹಿಂಸಾಚಾರದಿಂದ  ಈ ಪುಟ್ಟ ರಾಜ್ಯ ತತ್ತರಿಸಿದ್ದು 180ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

‘ಹಿಂಸೆಯಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ನನಗೆ ಗ್ರಾಮಕ್ಕೆ ಹೋಗಲಾಗುತ್ತಿಲ್ಲ. ಈ ಪದಕವನ್ನು ಅಲ್ಲಿ ನಮ್ಮನ್ನು ರಕ್ಷಿಸಿದವರಿಗೆ ಮತ್ತು ನೊಂದವರಿಗೆ ಸರ್ಮಪಿಸುತ್ತೇನೆ’ ಎಂದು ರಜತ ಪದಕ ಗೆದ್ದ ನಂತರ ಅವರು ರೋಶಿನಿನಾ ಪ್ರತಿಕ್ರಿಯಿಸಿದರು.

‘ಏನಾಗುತ್ತಿದೆಯೆಂದು ಗೊತ್ತಾಗುತ್ತಿಲ್ಲ. ಘರ್ಷಣೆ ಮುಂದುವರಿಸಿದೆ. ಯಾವಾಗ ಸಹಜ ಸ್ಥಿತಿಗೆ ಮರಳುತ್ತದೊ?’ ಎಂದು ಆತಂಕ ವ್ಯಕ್ತಪಡಿಸಿದರು.

ರೋಶಿಬಿನಾ ಅವರು ಬುಧವಾರ ತಂದೆ–ತಾಯಿ ಜೊತೆ ಮಾತನಾಡಿದ್ದರು. ಹಿಂಸಾಚಾರದ ಬಗ್ಗೆ ತಲೆಕೆಡಿಸಿಕೊಳ್ಳದೇ ಫೈನಲ್ ಬಗ್ಗೆ ಗಮನಹರಿಸುವಂತೆ ಅವರು ಮಗಳಿಗೆ ತಿಳಿಸಿದ್ದರು. ‘ಪಂದ್ಯದ ಬಗ್ಗೆಯಷ್ಟೇ ಗಮನವಿಡು. ಬೇರೆ ಕಡೆ ಯೋಚಿಸಬೇಡ. ನನ್ನ ಕುಟುಂಬ ಸುರಕ್ಷಿತವಾಗಿದೆ. ಊರಿನ ಹಿಂಸಾಚಾರದಿಂದ ನನ್ನ ಏಕಾಗ್ರತೆಗೆ ಭಂಗ ಬರಬಹುದೆಂದು ಕೋಚ್‌ಗಳು ಸಲಹೆ ನೀಡಿದ್ದರಿಂದ ನಾನು ಪೋಷಕರ ಜೊತೆ ಸದಾ ಮಾತನಾಡುತ್ತಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT