ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್ | ಅಪಾಯಕ್ಕೆ ಆಹ್ವಾನ ನೀಡುವ ಗುಂಡಿ

Published 8 ಜೂನ್ 2024, 6:18 IST
Last Updated 8 ಜೂನ್ 2024, 6:18 IST
ಅಕ್ಷರ ಗಾತ್ರ

ನರೇಗಲ್:‌ ಹೋಬಳಿಯ ನಿಡಗುಂದಿ ಹಾಗೂ ನಿಡಗುಂದಿಕೊಪ್ಪ ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿಯೇ ಗರಸಿಗಾಗಿ ಅಗೆಯಲಾಗಿರುವ ಕಣಿವೆಯಲ್ಲಿ ಈಚೆಗೆ ಸುರಿದ ಮಳೆ ನೀರು ತುಂಬಿ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ದನ, ಕುರಿಗಳನ್ನು ಮೇಯಿಸಲು ಹೋಗುವವರಿಗೆ, ಕೃಷಿಕರಿಗೆ ತೊಂದರೆಯಾಗುತ್ತದೆ.

ಹೋಬಳಿಯ ವಿವಿಧೆಡೆ ಕೆಲಸ ಆರಂಭಿಸಿರುವ ಬಹುರಾಷ್ಟ್ರೀಯ ಪವನ ವಿದ್ಯುತ್‌ ಉತ್ಪಾದನೆ ಮಾಡುವ ಖಾಸಗಿ ಕಂಪನಿಯವರು ಹೊಲದಲ್ಲಿ ವಿಂಡ್‌ ಕಂಬಗಳನ್ನು ಅಳವಡಿಸುವ, ಘಟಕಗಳನ್ನು ನಿರ್ಮಿಸುವ ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಅನಕೂಲವಾಗುವ ದೃಷ್ಟಿಯಿಂದ ಹಾಗೂ ರಸ್ತೆ ಅಭಿವೃದ್ದಿ ಕಾಮಗಾರಿಯ ಕಾರಣಕ್ಕಾಗಿ ಈಚೆಗೆ ರಸ್ತೆ ಪಕ್ಕದಲ್ಲಿಯೇ ನಿಡಗುಂದಿಕೊಪ್ಪ ಗ್ರಾಮದ ಸಮೀಪದಲ್ಲಿರುವ ಹಳ್ಳದ ಹತ್ತಿರದ ಹೊಲದಲ್ಲಿ ಬೃಹತ್‌ ಪ್ರಮಾಣದಲ್ಲಿ ಗರಸು ಅಗೆಯಲಾಗಿದೆ.

ಆಳವಾದ ಬಾವಿಯಷ್ಟು ಅರ್ಧ ಹೊಲವನ್ನು ತೋಡಿ ಹಾಗೆಯೇ ಬಿಟ್ಟಿದ್ದಾರೆ. ಅದಕ್ಕೆ ಅನುಮತಿ ಪಡೆಯಲಾಗಿದೆಯೋ ಅಥವಾ ಇಲ್ಲವೋ ಎಂಬುದು ತಿಳಿಯದಾಗಿದೆ. ಆದರೆ ಜನರಿಗೆ, ಪ್ರಾಣಿಗಳಿಗೆ ತೊಂದರೆ ಆಗದಂತೆ ಜಾಗೃತಿ ವಹಿಸದೆ ಹಾಗೆಯೇ ಬಿಟ್ಟಿದ್ದಾರೆ ಎಂಬುದು ಜನರ ಆರೋಪ.

ಕೃಷಿ ಹೊಲವು ಕಣಿವೆಯಾಗಿ ಪರಿವರ್ತನೆಯಾಗಿದೆ. ಆದರೆ ಇದರ ಸುತ್ತ ಎಲ್ಲಿಯೂ ತಂತಿ ಬೇಲಿಯನ್ನು ಸಹ ಹಾಕಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಹೊಲದ ಮಾಲೀಕರು, ಅನುಮತಿ ನೀಡಿದ ಅಧಿಕಾರಿಗಳು, ಗರಸು ತುಂಬಿಕೊಂಡು ಹೋದ ಖಾಸಗಿಯವರು ಸಹ ಕೈಗೊಂಡಿಲ್ಲ. ಸಂಬಂಧಪಟ್ಟವರು ಕೂಡಲೇ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅನುಮತಿ ಕುರಿತು ಪರಿಶೀಲನೆ ನಡೆಸಬೇಕು ಎಂದು ಜೈ ಭೀಮ ಸೇನಾ ಸಂಘರ್ಷ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ಮೈಲಾರಪ್ಪ ವಿ. ಚಳ್ಳಮರದ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT